ಕೆ.ಆರ್.ಪುರ: ಸರ್ಕಾರದ ಕಾಮಗಾರಿಗಳು ಆರಂಭವಾಗುವುದೇನೋ ನಿಜ. ಆದರೆ, ಅವು ಯಾವಾಗ ಮುಗಿಯುತ್ತವೆ ಎಂದು ಸ್ವತಃ ಸರ್ಕಾರಿ ಎಂಜಿನಿಯರ್‌ಗೂ ಗೊತ್ತಿರುವುದಿಲ್ಲ. ಅಂತಹ ಆಮೆಗತಿಯ ಕಾಮಗಾರಿಗೊಂದು ಉದಾಹರಣೆ ಕೆ.ಆರ್.ಪುರದಲ್ಲಿದೆ.
ಈ ಕಾಮಗಾರಿಯ ಕಥೆ ಆರಂಭವಾಗುವುದು 2010ರಲ್ಲಿ. ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಕ್ಷೇತ್ರಕ್ಕೊಂದು ಅಂಬೇಡ್ಕರ್ ಭವನ ಮಂಜೂರು ಮಾಡಿದ್ದರು. ಒಟ್ಟು 18 ಕೋಟಿ ರೂ. ವೆಚ್ಚದ ಯೋಜನೆ, ದೇವಸಂದ್ರ ವಾರ್ಡ್‌ನ ಮಹದೇವಪುರ ಗ್ರಾಮದ ಸರ್ವೇ ನಂ.180ರಲ್ಲಿ ಎರಡೂವರೆ ಎಕರೆ ಸರ್ಕಾರಿ ಜಮೀನಿಲ್ಲಿ ಆರಂಭವಾಯಿತು. ಆಗ, ಅಂದರೆ 9 ವರ್ಷಗಳ ಹಿಂದೆ ಆರಂಭವಾದ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ.
ಕರ್ನಾಟಕ ರಾಜ್ಯ ಗ್ರಾಮೀಣ ಮೂಲಭೂತ ಸೌಲಭ್ಯ ಆಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ಕಾಮಗಾರಿಯ ಹೊಣೆ ವಹಿಸಿಕೊಂಡಿದೆ. ಮೊದಲ ಹಂತದಲ್ಲಿ 4.97 ಕೋಟಿ ರೂ. ಬಿಡುಗಡೆಯಾಗಿ, ಆರಂಭದ 3 ತಿಂಗಳು ಕಾಮಗಾರಿ ವೇಗವಾಗಿ ನಡೆಯಿತು.
ಪಿಲ್ಲರ್‌ಗಳೂ ಎದ್ದು ನಿಂತವು. ಅಲ್ಲಿಂದ ಮುಂದೆ ಒಂದು ಇಟ್ಟಿಗೆಯೂ ಅಲುಗಾಡಿಲ್ಲ. ಭವನ ನಿರ್ಮಿಸುತ್ತಿರುವ ಜಾಗ ತಗ್ಗಾಗಿರುವ ಕಾರಣ ಅಲ್ಲಿ ಮಳೆ ನೀರು ನಿಂತಿದೆ. ಕಳೆದ ವರ್ಷ ಈ ನೀರಲ್ಲಿ ಈಜಲು ಹೋದ ವಿದ್ಯಾರ್ಥಿ, ಕಬ್ಬಿಣದ ಸರಳುಗಳ ಮಧ್ಯೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದ. ಆದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ.
ಎರಡು ಎಕರೆ ಪ್ರದೇಶದಲ್ಲಿ ಮೂರು ಮಹಡಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿತ್ತು. ದೊಡ್ಡ ಸಭಾಂಗಣ, ಬುದ್ಧ ವಿಹಾರ, ಮಹಿಳೆಯರು ಮತ್ತು ವಿಕಲಚೇತನರಿಗೆ ಹೊಲಿಗೆ ಯಂತ್ರ ತರಬೇತಿ ಕೇಂದ್ರ, ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ, ಯುಪಿಎಸ್‌ಸಿ ತರಬೇತಿ ಕೇಂದ್ರ ಸೇರಿ ಹಲವು ಸೌಲಭ್ಯ ಕಲ್ಪಿಸಲು ನೀಲಿನಕ್ಷೆ ರೂಪಿಸಲಾಗಿತ್ತು.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಹೊತ್ತಿಗೆ ಡಾ.ಬಿ.ಆರ್.ಅಂಬೇಡ್ಕರ್ ಭವನ ಸಾರ್ವಜನಿಕರ ಸೇವೆಗೆ ಸಿದ್ಧವಿರಬೇಕಿತ್ತು. ಆದರೆ ಜನಪತ್ರಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಮುಗಿಯದೆ, ಕೋಟ್ಯಂತರ ರೂ. ಮಣ್ಣು ಪಾಲಾಗಿದೆ.
ಅಂಬೇಡ್ಕರ್ ಭವನ ನಿರ್ಮಾಣವಾಗಿದ್ದರೆ ಸರ್ಕಾರಿ ಕಾರ್ಯಕ್ರಮ ನಡೆಸಲು ಸುಸಜ್ಜಿತ ಸಭಾಂಗಣ ಸಿಗುತ್ತಿತ್ತು. ನೆನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು.
-ದೊಡ್ಡ ಯಲ್ಲಪ್ಪ, ದಲಿತ ಮುಖಂಡ