ಮೈಸೂರು: ಸ್ವಚ್ಛತೆಯಲ್ಲಿ ಹ್ಯಾಟ್ರಿಕ್ ಗರಿ ತಪ್ಪಿಸಿಕೊಂಡ ಮೈಸೂರು ಮಹಾ ನಗರಪಾಲಿಕೆ, ಈ ಬಾರಿ ಪ್ರಶಸ್ತಿ ದಕ್ಕಿಸಿಕೊಳ್ಳಲೇಬೇಕೆಂದು ಇನ್ನಿಲ್ಲದ ಪ್ರಯತ್ನ ನಡೆಸಿದೆ.
2018ನೇ ಸಾಲಿನ ಸ್ವಚ್ಛ ಭಾರತ್ ಸರ್ವೇಕ್ಷಣೆ ಹಿನ್ನೆಲೆಯಲ್ಲಿ ಮೈಸೂರಿನ ಸ್ವಚ್ಛತಾ ರಾಯಭಾರಿಗಳಾಗಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಅಂತಾರಾಷ್ಟ್ರೀಯ ಖ್ಯಾತಿಯ ಯೋಗಪಟು ಖುಷಿ, ಮೋಕ್ಷಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ನಗರದ ಬಡಾವಣೆಗಳಲ್ಲಿ ಸಭೆ ನಡೆಸಿ, ಸ್ವಚ್ಛತೆ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸಲು ಪಾಲಿಕೆ ಮುಂದಾಗಿದೆ.
ಈ ಸಂಬಂಧ ಭಾನುವಾರ ಮೈಸೂರು ಅರಮನೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಪ್ರಮೋದಾದೇವಿ ಒಡೆಯರ್, ಪ್ರವಾಸಿ ತಾಣವಾದ ಮೈಸೂರು ನಗರ ಸದಾ ಕಾಲ ಸ್ವಚ್ಛವಾಗಿರಬೇಕು. ಇದಕ್ಕಾಗಿ ರಾಜಮನೆತನದಿಂದ ಪಾಲಿಕೆಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಮೈಸೂರು ನಗರದ ಜನತೆ ಈ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದರು.
ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಶಾಲಾ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಮೂಲಕ ಮಕ್ಕಳ ಪೋಷಕರಲ್ಲಿ ಜಾಗೃತಿ ಮೂಡಿಸಬಹುದು ಎಂದು ಹೇಳಿದರು. ಯೋಗಪಟು ಖುಷಿ, ಸ್ವಚ್ಛತೆಗಾಗಿ ರೂಪಿಸಿರುವ ಆಪ್ ಅನ್ನು ಎಲ್ಲರೂ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಅಭಿಯಾನಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಮೋಕ್ಷಪತಿ ಸ್ವಾಮೀಜಿ, ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿ ಕಂಡಿದ್ದ ಕನಸು, ಅವರ ಕನಸನ್ನು ನನಸು ಮಾಡಲು ನಾವು ಬೀದಿಗಿಳಿಯಬೇಕಿಲ್ಲ. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಂಡರೆ ಇಡೀ ಮೈಸೂರು ಸ್ವಚ್ಛವಾಗಲಿದೆ ಎಂದರು. ಮೇಯರ್ ಎಂ.ಜೆ.ರವಿಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಪಾಲಿಕೆ ಆಯುಕ್ತ ಜಿ.ಜಗದೀಶ್ ಮತ್ತಿತರರಿದ್ದರು.