Advertisement

ಚನ್ನಮ್ಮನ ನಾಡಿನಿಂದ ಬೆಂಗಳೂರಿಗೆ ಅಂಬರೀಶ ಉಡುಗೊರೆಯ ತೊಟ್ಟಿಲು

10:48 AM Feb 15, 2019 | |

ಚನ್ನಮ್ಮ ಕಿತ್ತೂರ: ಚನ್ನಮ್ಮನ ನಾಡಿಗೂ ರೆಬೆಲ್‌ ಸ್ಟಾರ್‌ ಅಂಬರೀಶಗೂ, ರಾಕಿಂಗ್‌ ಸ್ಟಾರ್‌ ಯಶ್‌ಗೂ ವಿಚಿತ್ರ ಸಂಬಂಧವೊಂದು ಬೆಸೆದಿದೆ. ಇದೊಂದು ವಿಚಿತ್ರ ಕಾಕತಾಳೀಯ.

Advertisement

ನಟ ಯಶ್‌ ಹಾಗೂ ರಾಧಿಕಾಗೆ ಹೆಣ್ಣುಮಗು ಹುಟ್ಟಿದ್ದು ಎಲ್ಲರಿಗೆ ಗೊತ್ತಿರುವ ಸಂಗತಿ. ಅದಕ್ಕಿಂತ ಮುಂಚೆ ರೆಬೆಲ್‌ಸ್ಟಾರ್‌ ಅಂಬರೀಶ ಕನ್ನಡಿಗರನ್ನಗಲಿದ್ದು ಕೂಡ. ಆದರೆ ಯಶ್‌ನನ್ನು ಮಗನಂತೆ ಪ್ರೀತಿಸುತ್ತಿದ್ದ ಅಂಬಿ ಅವರ ಮಗುವಿಗೆ ಭರ್ಜರಿ ಉಡುಗೊರೆಯಾಗಿ ತೊಟ್ಟಿಲು ನೀಡಬೇಕೆಂದು ತಮ್ಮ ಆಪ್ತರಾಗಿದ್ದ ಬೆಳಗಾವಿ ಮೂಲದ ಉದ್ಯಮಿ ನಾರಾಯಣ ಕಲಾಲ ಅವರಿಗೆ ತೊಟ್ಟಿಲು ಮಾಡಿಸಲು ಹೇಳಿಟ್ಟಿದ್ದರು.

ಮಿತ್ರ ನಾರಾಯಣ ಕಲಾಲ ಕಿತ್ತೂರು ತಾಲೂಕಿನ ಸಂಪಗಾವಿಯವರು. ಅವರು ಕಲಘಟಗಿಯಲ್ಲಿ ತಯಾರಿಸಿದ್ದ ತೊಟ್ಟಿಲನ್ನು ಚನ್ನಮ್ಮನ ನಾಡು ಕಿತ್ತೂರಿನ ಮೂಲಕವೇ ಬೆಂಗಳೂರಿಗೆ ಕಳಿಸಬೇಕೆಂಬ ಆಶಯ ಹೊಂದಿದ್ದಾರೆ. ಆ ಪ್ರಕಾರ ಶುಕ್ರವಾರ ಅದನ್ನು
ಬೆಂಗಳೂರಿಗೆ ಕೊಂಡೊಯ್ಯಲಿದ್ದಾರೆ. ಕಲಘಟಗಿಯಲ್ಲಿ ತಯಾರಾಯ್ತು ತೊಟ್ಟಿಲು: ಕಲಘಟಗಿಯ ತೊಟ್ಟಿಲು ಕಲಾವಿದ ಶ್ರೀಧರ ಸಾಹುಕಾರ ಅವರಿಗೆ ತೊಟ್ಟಿಲು ತಯಾರಿಸಲು ಅಂಬರೀಶ ಮಿತ್ರ ಕಲಾಲ ತಿಳಿಸಿದ್ದರು. ಕಲಘಟಗಿಯ ಸಾಹುಕಾರ ಕುಟುಂಬವು ನಾಲ್ಕು ತಲೆಮಾರುಗಳಿಂದಲೂ ಈ ಕೆಲಸ ಮಾಡುತ್ತ ಬಂದಿದೆ. ಇವರು ತಯಾರಿಸುವ ತೊಟ್ಟಿಲುಗಳು ಹೊರರಾಜ್ಯಗಳಲ್ಲದೇ ಅಮೇರಿಕ, ದುಬೈ, ಫ್ರಾನ್ಸ್‌ ದೇಶಗಳನ್ನೂ ಮುಟ್ಟಿವೆ. ಇದಕ್ಕೆ ತೊಟ್ಟಿಲಿನ ವೈಶಿಷ್ಟ್ಯವೇ ಕಾರಣ. ಅಸಂಖ್ಯ ಚಿತ್ತಾಕರ್ಷಕ ಬಣ್ಣಗಳಿಂದ ಕಂಗೊಳಿಸುವ ತೊಟ್ಟಿಲಿನ ಮೇಲೆ ಸುಂದರ ಪೌರಾಣಿಕ ಕಥಾ ಚಿತ್ರಗಳನ್ನು ಬಿಡಿಸಲಾಗಿದೆ.

ತಂದೆ-ಮಗನ ಸಂಬಂಧ: ಅಂಬರೀಷ ಮತ್ತು ಯಶ್‌ ನಡುವಿನ ಪ್ರೀತಿ ತಂದೆ ಮಕ್ಕಳಂತಿತ್ತು. ಅಂಬಿ ಅಪ್ಪಾಜಿಯೆಂದು ಯಶ್‌ ಗೌರವಿಸುತ್ತಿದ್ದರು. ಪತ್ನಿ ರಾಧಿಕಾ ಗರ್ಭಿಣಿ ಯಾದಾಗಿನಿಂದ ಇವರಿಬ್ಬರ ಕುಟುಂಬದ ಒಡನಾಟ ಇನ್ನಷ್ಟು ಹೆಚ್ಚಿತ್ತು. ಆಗಲೇ ಅಂಬರೀಷ ತೊಟ್ಟಿಲು ಉಡುಗೊರೆ ನೀಡಲು ನಿರ್ಧರಿಸಿದ್ದರು.

ಈ ಉಡುಗೊರೆಯ ಕಿಂಚಿತ್ತು ಮಾಹಿತಿ ಯಾರಿಗೂ ಇರಲಿಲ್ಲ. ಅಂಬಿ ನಿಧನರಾಗಿ ಕೆಲ ದಿನಗಳಲ್ಲಿ ಅವರ ಮೊಬೈಲ್‌ಗೆ ವಾಟ್ಸ್‌ ಆ್ಯಪ್‌ ಸಂದೇಶವೊಂದು ಬಂತು. ತೊಟ್ಟಿಲು ರೆಡಿಯಾಗಿದೆ ಎಂದು ಚಿತ್ರ ಸಮೇತ ಬಂದ ಬಂದ ಮೆಸೇಜ್‌ ಅದಾಗಿತ್ತು. ಸುಮಲತಾಗೆ ನಿಜಕ್ಕೂ ಅಚ್ಚರಿ ಹಾಗೂ ಕುತೂಹಲ. ತೊಟ್ಟಲನ್ನು ನಾವು ಆರ್ಡರ್‌ ಮಾಡಿಲ್ಲ. ನಮಗೆ ತಪ್ಪಾಗಿ ಸಂದೇಶ ಬಂದಿದೆ ಎಂದು ಅರ್ಥೈಸಿಕೊಂಡ್ಡಿದ್ದರು. ಆಗ ಆ ಸಂಖ್ಯೆಗೆ ಕರೆ ಮಾಡಿದಾಗ ತೊಟ್ಟಿಲಿಗೆ ಅಂಬರೀಶ ಆರ್ಡರ್‌ ಕೊಟ್ಟಿದ್ದು ಗೊತ್ತಾಯಿತು. 

Advertisement

ವಿಚಿತ್ರವೆಂದರೆ ತೊಟ್ಟಿಲು ತಯಾರಿಸಿದ ಕಲಾವಿದನಿಗೆ ಅಂಬರೀಶ ತೊಟ್ಟಿಲು ಮಾಡಿಸುತ್ತಿದ್ದಾರೆ ಎನ್ನುವ ವಿಷಯವೇ ಗೊತ್ತಿರಲಿಲ್ಲ. ಅದು ಉದ್ಯಮಿ ನಾರಾಯಣ ಕಲಾಲಗೆ ಮಾತ್ರ ಗೊತ್ತಿತ್ತು.

ಈಗ ತೊಟ್ಟಿಲು ಸಿದ್ಧಗೊಂಡಿದೆ. ನಾರಾಯಣ ಕಲಾಲ ಅವರು ಸಂಪಗಾವಿಯವರಾಗಿದ್ದರಿಂದ ತೊಟ್ಟಿಲನ್ನು ವೀರರಾಣಿ ಕಿತ್ತೂರ ಚನ್ನಮ್ಮಾಜಿ ನಾಡಿನಿಂದ ಕಳಿಸಬೇಕೆಂಬ ಉದ್ದೇಶವನ್ನು ಅವರು ಹೊಂದಿದ್ದಾರೆ. ಆ ಪ್ರಕಾರ ಕಿತ್ತೂರು ಸಂಸ್ಥಾನಕ್ಕೆ ಗುರುಪರಂಪರೆ ಮಠವಾದ ಕಲ್ಮಠದಿಂದ ಫೆ. 16 ರಂದು ಸಂಜೆ 4 ಘಂಟೆಗೆ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಹಾಗೂ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ತೊಟ್ಟಲನ್ನು ಬೆಂಗಳೂರಿಗೆ ಕಳಿಸಿಕೊಡಲಾಗುತ್ತಿದೆ. ಉದ್ಯಮಿ ನಾರಾಯಣ ಕಲಾಲ ಅವರೇ ಸ್ವತಃ ಇದನ್ನು ಕೊಂಡೊಯ್ಯಲಿದ್ದಾರೆ. 

ಅಂಬರೀಶ ಅವರು ಒಂದು ದಿನ ನನಗೆ ಕರೆ ಮಾಡಿ ಯಶ್‌ ರಾಧಿಕಾ ದಂಪತಿಯ ಮಗುವಿಗೆ ತೊಟ್ಟಿಲು ಮಾಡಿಸಬೇಕು. ಒಳ್ಳೆಯ ತೊಟ್ಟಿಲುಗಳನ್ನು ಕಲಘಟಗಿಯಲ್ಲಿ ಮಾಡುತ್ತಾರೆ. ಅಲ್ಲಿ ಮಾಡಿಸು ಎಂದು ನನಗೆ ಹೇಳಿದ್ದರು. ಆದರೆ ಈಗ ಅವರೇ ಇಲ್ಲದಿರುವುದು ದುಃಖದ ಸಂಗತಿ. ಚನ್ನಮ್ಮಾಜಿಯ ಕಿತ್ತೂರಿನ ರಾಜಗುರು ಕಲ್ಮಠದಿಂದ ತೊಟ್ಟಿಲನ್ನು ಕಳಿಸಲಾಗುವುದು.
 ನಾರಾಯಣ ಕಲಾಲ, ಉದ್ಯಮಿ ಸಂಪಗಾವ

„ಈರಣ್ಣ ಬಣಜಗಿ

Advertisement

Udayavani is now on Telegram. Click here to join our channel and stay updated with the latest news.

Next