ಶ್ರೀರಂಗಪಟ್ಟಣ: ಇಹಲೋಕ ತ್ಯಜಿಸಿದ ಅಂಬರೀಶ್ ಅವರ ಅಸ್ಥಿ ವಿಸರ್ಜನೆಯನ್ನು ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಬುಧವಾರ ಇಲ್ಲಿಗೆ ಸಮೀಪದ ಸಂಗಮ ಕ್ಷೇತ್ರದಲ್ಲಿ ನೆರವೇರಿಸಲಾಯಿತು.
ಕಾವೇರಿ, ಲೋಕಪಾವನಿ ಹಾಗೂ ಪಶ್ಚಿಮವಾಹಿನಿ ನದಿಗಳು ಸಂಗಮಿಸುವ ಕ್ಷೇತ್ರ ಸಂಗಮಕ್ಕೆ ಮಧ್ಯಾಹ್ನ 2 ಗಂಟೆ ವೇಳೆಗೆ
ಬೆಂಗಳೂರಿನಿಂದ ಅಸ್ಥಿಯೊಂದಿಗೆ ಸುಮಲತಾ ಹಾಗೂ ಅಭಿಷೇಕ್ ಆಗಮಿಸಿದರು. ವೇದವಿದ್ವಾನ್ ಭಾನುಪ್ರಕಾಶ್ ಶರ್ಮಾ ಶಿಷ್ಯ ಲಕ್ಷ್ಮೀಶ ಹಾಗೂ ಬೆಂಗಳೂರಿನಿಂದ ಆಗಮಿಸಿದ್ದ ಪುರೋಹಿತರ ತಂಡದ ನೇತೃತ್ವದಲ್ಲಿ ವಿಧಿ-ವಿಧಾನ ನೆರವೇರಿಸಲಾಯಿತು.
ಸಂಗಮದ ಸ್ನಾನಘಟ್ಟದ ಮೇಲೆ ಮಡಿಯುಟ್ಟು ಕುಳಿತ ಸುಮಲತಾ ಹಾಗೂ ಅಭಿಷೇಕ್ ನಾಲ್ಕು ಕುಡಿಕೆಗಳಲ್ಲಿ ತುಂಬಿದ್ದ
ಅಸ್ಥಿಗೆ ಹಾಲು, ಮೊಸರು, ಗಂಧ, ತುಪ್ಪ, ಸಕ್ಕರೆ ಪಂಚಗವ್ಯಗಳಿಂದ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು. ಬಳಿಕ ನದಿಗೆ ಇಳಿದು ನಾಲ್ಕೂ ಕುಡಿಕೆಗಳಲ್ಲಿದ್ದ ಅಸ್ಥಿಯನ್ನು ನದಿ ತಟದಲ್ಲಿ ಹಿಮ್ಮುಖವಾಗಿ ನಿಂತು ಅಭಿಷೇಕ್ ವಿಸರ್ಜನೆ ಮಾಡಿದರು. ಸಚಿವ ಪುಟ್ಟರಾಜು ಹಾಗೂ ನಿರ್ಮಾಪಕ ಮುನಿರತ್ನ ಹರಿಗೋಲಿನಲ್ಲಿ ಸ್ವಲ್ಪಮುಂದೆ ಹೋಗಿ ನದಿಯಲ್ಲಿ ಅಸ್ಥಿ ಸಮರ್ಪಕವಾಗಿ ವಿಸರ್ಜನೆಯಾಗಲು ಸಹಕರಿಸಿದರು. ಸಂಗಮದಲ್ಲಿ ಅಸ್ಥಿ ವಿಸರ್ಜನೆ ಮಾಡಿದ ಬಳಿಕ ಕುಟುಂಬದವರು ಅಂತಿಮ ಗೌರವ ಸಲ್ಲಿಸಿದರು.
ನಟರಾದ ದರ್ಶನ್, ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್, ನಿರ್ಮಾಪಕರಾದ ಸಂದೇಶ್ ನಾಗರಾಜು, ಅಂಬರೀಶ್ ಅಣ್ಣ ಆನಂದ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸ್ಥಳ ಬದಲಾವಣೆ: ಮೊದಲು ಅಂಬರೀಶ್ ಅವರ ಅಸ್ಥಿ ವಿಸರ್ಜನೆ ಕಾರ್ಯಕ್ರಮವನ್ನು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ನಿಗದಿ ಪಡಿಸಲಾಗಿತ್ತು. ಈ ವಿಷಯ ತಿಳಿದು ಅಸಂಖ್ಯಾತ ಅಭಿಮಾನಿಗಳ ದಂಡು ಪಶ್ಚಿಮವಾಹಿನಿ ಬಳಿ ಜಮಾಯಿಸಿತ್ತು. ಜನರನ್ನು ನಿಯಂತ್ರಣ ಮಾಡುವುದು ಕಷ್ಟವಾಗಲಿದೆ ಎಂಬುದನ್ನು ಅರಿತ ಪೊಲೀಸ್ ಅಧಿಕಾರಿಗಳು ಅಸ್ಥಿ ವಿಸರ್ಜನೆಯನ್ನು ಸಂಗಮಕ್ಕೆ ಸ್ಥಳಾಂತರಿಸಿದರು. ಸಂಗಮದಲ್ಲಿ ಅಸ್ಥಿ ವಿಸರ್ಜನೆ ಮಾಡುವ ಸ್ಥಳ ಅಶುಚಿತ್ವದಿಂದ ಕೂಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಹಾಗೂ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಪುರಸಭೆ ಸಿಬ್ಬಂದಿಯಿಂದ ಅದನ್ನು ಸ್ವತ್ಛಗೊಳಿಸಿ, ಶಾಮಿಯಾನದ ವ್ಯವಸ್ಥೆ ಮಾಡಿಸಿದರು. ಅಭಿಮಾನಿಗಳನ್ನು ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಯಿತು. ಅಸ್ಥಿಗೆ ಪೂಜೆ ಸಲ್ಲಿಸುವ ಸ್ಥಳಕ್ಕೆ ಗಣ್ಯರು, ಅಧಿಕಾರಿಗಳನ್ನು ಹೊರತುಪಡಿಸಿ ಉಳಿದವರನ್ನು ನಿರ್ಬಂಧಿಸಲಾಯಿತು. ಅಂಬರೀಶ್ ಜೊತೆ ರಾಜಕೀಯ ವೈಮನಸ್ಸನ್ನು ಹೊಂದಿದ್ದ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಅಸ್ಥಿ ವಿಸರ್ಜನೆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದು ಸಾರ್ವಜನಿಕ ಚರ್ಚೆಗೆ ಕಾರಣವಾಯಿತು.