Advertisement
ಅಷ್ಟೇ ಅಲ್ಲ, ತಂದೆ ನಿರ್ದೇಶನ ಮಗ ನಾಯಕನಾಗಿರುವ ಚಿತ್ರಗಳೂ ಒಟ್ಟಿಗೆ ಬಂದಿವೆ. ಅವುಗಳ ಸಾಲಿಗೆ ಈಗ ಒಂದೇ ತಿಂಗಳಲ್ಲಿ ಒಂದೇ ಕುಟುಂಬದವರ ಮೂರು ಚಿತ್ರಗಳು ತೆರೆಗೆ ಬರುತ್ತಿವೆ ಎಂಬುದು ವಿಶೇಷ. ಹೌದು, ಮೇ ತಿಂಗಳಲ್ಲಿ ಅಂಬರೀಶ್ ಫ್ಯಾಮಿಲಿಯವರ ಚಿತ್ರಗಳ ದರ್ಶನವಾಗಲಿದೆ. ಆ ಕುರಿತು ಒಂದು ವಿಶೇಷ ವರದಿ.
Related Articles
Advertisement
ಅಂಬರೀಶ್ ಅಭಿನಯದ “ಅಂತ’ ಚಿತ್ರವನ್ನು ಮರು ಬಿಡುಗಡೆ ಮಾಡಲು ನಿರ್ಮಾಪಕ ವೇಣುಗೋಪಾಲ್ ನಿರ್ಧರಿಸಿದ್ದಾರೆ. ಕಳೆದ 38 ವರ್ಷಗಳ ಹಿಂದೆ ತೆರೆಗೆ ಬಂದಿದ್ದ “ಅಂತ’ 80 ರ ದಶಕದಲ್ಲಿ ಭರ್ಜರಿ ಯಶಸ್ಸು ಪಡೆದಿತ್ತು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರವನ್ನು ಎಚ್.ಎನ್.ಮಾರುತಿ ಮತ್ತು ವೇಣುಗೋಪಾಲ್ ನಿರ್ಮಾಣ ಮಾಡಿದ್ದರು.
ಹೆಚ್.ಕೆ.ಅನಂತರಾವ್ ಅವರ ಕಾದಂಬರಿ ಆಧರಿಸಿದ ಚಿತ್ರದಲ್ಲಿ ಅಂಬರೀಶ್ ಇನ್ಸ್‌ಪೆಕ್ಟರ್ ಸುಶೀಲ್‌ಕುಮಾರ್ ಪಾತ್ರದ ಮೂಲಕ ಗಮನಸೆಳೆದಿದ್ದರು. ಅಷ್ಟೇ ಅಲ್ಲ, ಆ ಚಿತ್ರದಲ್ಲಿ ಅವರು ಕನ್ವರ್‌ಲಾಲ್ ಎಂಬ ನೆಗೆಟಿವ್ ಪಾತ್ರವನ್ನೂ ನಿರ್ವಹಿಸಿ, ಮನೆಮಾತಾಗಿದ್ದರು.
ಅಂಬರೀಶ್ ಅವರ ಸಿನಿಮಾ ವೃತ್ತಿ ಬದುಕಿನಲ್ಲಿ “ಅಂತ’ ಅದ್ಭುತ ಸಿನಿಮಾ. ಈಗ ಮತ್ತೂಮ್ಮೆ ಆ ಚಿತ್ರ ಹೊಸ ತಂತ್ರಜ್ಞಾನದೊಂದಿಗೆ ಪ್ರೇಕ್ಷಕರ ಮುಂದೆ ಹುಟ್ಟುಹಬ್ಬಕ್ಕೆ ಬರಲಿದೆ. ನಿರ್ಮಾಪಕರು “ಅಂತ’ ಚಿತ್ರಕ್ಕೆ ತಂತ್ರಜ್ಞಾನದ ಹೊಸ ಸ್ಪರ್ಶ ನೀಡಿ ಬಿಡುಗಡೆ ಮಾಡುತ್ತಿದ್ದಾರೆ.
ಚಿತ್ರಕ್ಕೆ ಜಿ.ಕೆ. ವೆಂಕಟೇಶ್ ಅವರ ಸಂಗೀತವಿತ್ತು. ಹಾಡುಗಳು ಇಂದಿಗೂ ಜನರಲ್ಲಿ ಅಚ್ಚಳಿಯದೆ ಉಳಿದಿವೆ. ಇನ್ನು, ಸುಮಲತಾ ಅಂಬರೀಶ್ ಅವರು ಅಭಿನಯಿಸಿರುವ “ಡಾಟರ್ ಆಫ್ ಪಾರ್ವತಮ್ಮ’ ಚಿತ್ರ ಕೂಡ ಮೇ ತಿಂಗಳಲ್ಲೇ ತೆರೆಗೆ ಬರುತ್ತಿದೆ.
ಈಗಾಗಲೇ ಚಿತ್ರದ ನಿರ್ಮಾಪಕರಾದ ಶಶಿಧರ ಕೆ.ಎಂ., ವಿಜಯಲಕ್ಷ್ಮೀ ಕೃಷ್ಣೇಗೌಡ, ಸಂದೀಪ್ ಶಿವಮೊಗ್ಗ ಮತ್ತು ಶ್ವೇತ ಮಧುಸೂದನ್ ಅವರು ಮೇ.24 ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಈ ಚಿತ್ರದಲ್ಲಿ ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ಅವರ ತಾಯಿ ಪಾತ್ರದಲ್ಲಿ ಸುಮಲತಾ ಅಂಬರೀಶ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರಕ್ಕೆ ಶಂಕರ್ ಕೆ, ನಿರ್ದೇಶಕರು. ಮಿಥುನ್ ಮುಕುಂದನ್ ಸಂಗೀತ, ಅರುಣ್ ಸೋಮಸುಂದರಂ ಛಾಯಾಗ್ರಹಣವಿದೆ. ಇಲ್ಲಿ ಹರಿಪ್ರಿಯ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಅತ್ತ ಅಂಬರೀಶ್ ಪುತ್ರ ಅಭಿಷೇಕ್ ಅವರ “ಅಮರ್’ ಚಿತ್ರವನ್ನು ಸಹ ಮೇ.31 ರಂದು ಬಿಡುಗಡೆ ಮಾಡಲು ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಧರಿಸಿದ್ದಾರೆ. ಈಗಾಗಲೇ ಚಿತ್ರ ಬಿಡುಗಡೆಯನ್ನು ಪಕ್ಕಾ ಮಾಡಿರುವ ಅವರು, ಅಂಬರೀಶ್ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರ ರಿಲೀಸ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ರಾಜ್ಯ, ದೇಶ ಹಾಗು ವಿದೇಶಗಳಲ್ಲಿ “ಅಮರ್’ ತೆರೆಗೆ ಬರುತ್ತಿದೆ. ಇದು ಅಭಿಷೇಕ್ ಅಂಬರೀಶ್ ಅವರ ಮೊದಲ ಚಿತ್ರ. ಇದು ಅಂಬರೀಶ್ ಅವರ ಮನಸ್ಸಿನ ಕಥೆ. ಅದರಲ್ಲೂ ಅವರು ತುಂಬಾನೇ ಇಷ್ಟಪಟ್ಟು ಆಯ್ಕೆ ಮಾಡಿದ ಕಥೆ ಇದು. ನನ್ನ ಮಗ ಒಂದೊಳ್ಳೆಯ ಲವ್‌ಸ್ಟೋರಿ ಮೂಲಕವೇ ಸಿನಿಮಾ ರಂಗಕ್ಕೆ ಎಂಟ್ರಿಯಾಗಬೇಕು ಅಂದುಕೊಂಡೇ ಅವರು “ಅಮರ್’ ಕಥೆಯನ್ನು ಆಯ್ಕೆ ಮಾಡಿದ್ದರು. ಇದೊಂದು ಅಮರ ಪ್ರೇಮ ಕಥೆ. ಒಬ್ಬ ಯಂಗ್ ಎನರ್ಜಿಟಿಕ್ ಲವ್ವರ್ ಬಾಯ್ ಸ್ಟೋರಿ ಇಲ್ಲಿದೆ. ಇಲ್ಲಿ ಪ್ರೀತಿ, ಆ್ಯಕ್ಷನ್, ಸೆಂಟಿಮೆಂಟ್,ಎಮೋಷನ್ಸ್, ಗೆಳೆತನ, ಹಾಸ್ಯ ಎಲ್ಲವೂ ಮೇಳೈಸಿದೆ. ಅದೇನೆ ಇರಲಿ, ಮೇ ತಿಂಗಳಲ್ಲಿ ಅಂಬರೀಶ್ ಅವರ “ಅಂತ’ ಚಿತ್ರದ ಜೊತೆಗೆ ಪತ್ನಿ ಮತ್ತು ಪುತ್ರನ ಸಿನಿಮಾ ಬಿಡುಗಡೆಯಾಗುತ್ತಿರುವುದು ಅವರ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ಹೆಚ್ಚಿರುವುದಂತೂ ಸುಳ್ಳಲ್ಲ.