Advertisement
ಅಂಬರೀಶ್ ಅವರ ಮೇಲೆ ಇಡೀ ಚಿತ್ರರಂಗ, ಅಭಿಮಾನಿ ವರ್ಗ ಇಟ್ಟ ಪ್ರೀತಿ ಆ ತರಹದ್ದು. ಈ ತರಹದ ಒಂದು ಪ್ರೀತಿ ಎಲ್ಲರಿಗೂ ಸಿಗೋದಿಲ್ಲ. ಅದನ್ನು ಸಂಪಾದಿಸೋದು ಕೂಡಾ ಸುಲಭವಲ್ಲ. ಅಂತಹ ಒಂದು ಅಪರೂಪದ ಪ್ರೀತಿ, ಅಭಿಮಾನವನ್ನು ಸಂಪಾದಿಸಿದವರು ಅಂಬರೀಶ್. ಅಂಬರೀಶ್ ಅವರು ಆಗಾಗ ಒಂದು ಮಾತು ಹೇಳುತ್ತಿದ್ದರು, “ಅಭಿಮಾನಿಗಳು ಪ್ರೀತಿ ಕೊಟ್ಟಿದ್ದಾರೆ. ಆ ಪ್ರೀತಿಯನ್ನು ಕೊನೆತನಕ ಉಳಿಸಿಕೊಂಡು ಹೋದರೆ ಸಾಕು’ ಎಂದು.
Related Articles
Advertisement
ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ರವಿಚಂದ್ರನ್, ಅನಂತ್‌ನಾಗ್, ಶಂಕರ್‌ನಾಗ್‌ರಿಂದ ಹಿಡಿದು ನಂತರದ ಪ್ರಭಾಕರ್, ಅರ್ಜುನ್ ಸರ್ಜಾ, ಶಿವರಾಜಕುಮಾರ್, ಜಗ್ಗೇಶ್, ಆ ನಂತರದ ಉಪೇಂದ್ರ, ಸುದೀಪ್, ಪುನೀತ್, ದರ್ಶನ್, ಯಶ್, ಚಿರಂಜೀವಿ ಸರ್ಜಾ ಚಿತ್ರಗಳಲ್ಲೂ ಅಂಬರೀಶ್ ನಟಿಸಿದ್ದಲ್ಲದೇ ಹೊಸದಾಗಿ ಚಿತ್ರರಂಗಕ್ಕೆ ಹೀರೋಗಳಾಗಿ ಎಂಟ್ರಿಕೊಟ್ಟ ಪಂಕಜ್, ಸಚಿನ್ ಸೇರಿದಂತೆ ಇನ್ನು ಹಲವು ಯುವ ನಟರ ಚಿತ್ರಗಳಲ್ಲಿ ಕಾಣಿಸಿಕೊಂಡ ಅಪರೂಪದ ನಟ. ದಕ್ಷಿಣ ಭಾರತದ ಯಾವ ಸ್ಟಾರ್ ನಟರಲ್ಲೂ ಸಿಗದಂತಹ ಒಂದು ವಿಶಿಷ್ಟತೆ ಅಂಬರೀಶ್ ಅವರ ವ್ಯಕ್ತಿತ್ವದಲ್ಲಿದೆ. ಐದು ಜನರೇಶನ್‌ನ ನಟರ ಜೊತೆ ನಟಿಸಿದ ಕೆಲವೇ ಕೆಲವು ನಟರಲ್ಲಿ ಅಂಬರೀಶ್ ಕೂಡಾ ಒಬ್ಬರಾಗಿದ್ದಾರೆ.
ಅಂಬಿ ಇಲ್ಲದ ಮೇಲೆ* ಕನ್ನಡದ ಯಾವುದೇ ಸಿನಿಮಾ ಇರಲಿ, ಪ್ರೀತಿಯಿಂದ ಆಹ್ವಾನಿಸಿದರೆ ಸಾಕು, ಅಲ್ಲಿ ಅಂಬರೀಶ್ ಹಾಜರಿ ಇರುತ್ತಿತ್ತು. ಹಾಗೆ ಕಳೆದ ವರ್ಷ “ಕೆಜಿಎಫ್’ ಚಿತ್ರದ ಪ್ಯಾನ್ ಇಂಡಿಯಾ ಪತ್ರಿಕಾಗೋಷ್ಠಿಯಲ್ಲಿ ಅಂಬರೀಶ್ ಕಾಣಿಸಿಕೊಳ್ಳುವ ಮೂಲಕ ಆ ಚಿತ್ರದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಇಡೀ ಚಿತ್ರತಂಡಕ್ಕೆ ಜೊತೆ ಇರುವುದಾಗಿಯೇ ಭರವಸೆ ಕೊಟ್ಟಿದ್ದರು. ಆದರೆ, ಆ ಚಿತ್ರ ನೋಡಬೇಕೆಂಬ ಅವರ ಆಸೆ ಹಾಗೆಯೇ ಉಳಿದುಕೊಂಡಿತು. * ತಮ್ಮ ಪುತ್ರ ಅಭಿಷೇಕ್ ಅಭಿನಯದ ಮೊದಲ ಸಿನಿಮಾ “ಅಮರ್’ ಮೇಲೆ ಸಾಕಷ್ಟು ನಿರೀಕ್ಷೆ ಅವರಿಗಿತ್ತು. ಅನಾರೋಗ್ಯದಲ್ಲೂ “ಅಮರ್’ ಚಿತ್ರದ ಕೆಲ ದೃಶ್ಯಗಳನ್ನು ನೋಡಿ ಖುಷಿಪಟ್ಟಿದ್ದರು. ಆ ಸಿನಿಮಾ ನೋಡಬೇಕು ಅಂತಂದುಕೊಂಡಿದ್ದರೂ, ಅದು ಸಾಧ್ಯವಾಗಲೇ ಇಲ್ಲ. * ಅವರ ಪತ್ನಿ ಸುಮಲತಾ ಅಂಬರೀಶ್ ಅವರು ಅಭಿಮಾನಿಗಳ ಸ್ವಾಭಿಮಾನದ ಪ್ರೀತಿಯನ್ನು ಅಭಿಮಾನದಿಂದಲೇ ಗೌರವಿಸಿ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು. ಅಂಬರೀಶ್ ಮೇಲಿನ ಅಭಿಮಾನಕ್ಕೆ ಆ ಭರ್ಜರಿ ಗೆಲುವು ಕೂಡ ಸಾಕ್ಷಿಯಾಯಿತು. * ಕನ್ನಡ ಚಿತ್ರರಂಗದ ಟ್ರಬಲ್ ಶೂಟರ್ ಎಂರೇ ಕರೆಸಿಕೊಂಡಿದ್ದ ಅಂಬಿ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿದವರು. ಈ ವರ್ಷ ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್ ನಟರ ಮುಸುಕಿನ ಗುದ್ದಾಟ ನಡೆದಿರುವುದು ಗೊತ್ತೇ ಇದೆ. ಅಂಬರೀಶ್ ಇದ್ದಿದ್ದರೆ ಈ ಗುದ್ದಾಟ ಅಷ್ಟೊಂದು ಸದ್ದು ಮಾಡುತ್ತಿರಲಿಲ್ಲ. ಇಬ್ಬರು ಸ್ಟಾರ್ ನಟರಿಗೂ ಆತ್ಮೀಯರಾಗಿದ್ದ ಅವರು ಆ ವಿವಾದವನ್ನು ಬಗೆಹರಿಸುತ್ತಿದ್ದರು. * ಇನ್ನು, “ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ಭೀಷ್ಮರಾಗಿ ನಟಿಸಿದ್ದ ಅಂಬರೀಶ್, ಆ ಚಿತ್ರವನ್ನು ನೋಡುವ ಬಯಕೆ ವ್ಯಕ್ತಪಡಿಸಿದ್ದರು. ಒಮ್ಮೆ, “ಕುರುಕ್ಷೇತ್ರ’ ನನ್ನ ಕೊನೆಯ ಚಿತ್ರ ಅಂತಾನೂ ಹೇಳಿಕೊಂಡಿದ್ದರು. ಯಾವ ಕ್ಷಣದಲ್ಲಿ ಹೇಳಿದ್ದರೋ, ಅವರ ಆ ಮಾತು ಕೂಡ ನಿಜವಾಗಿಬಿಟ್ಟಿತು. ಆ ಚಿತ್ರದ ಭೀಷ್ಮ ಪಾತ್ರದಲ್ಲಿ ಅಂಬರೀಶ್ ಅವರಿಗವರೇ ಸಾಟಿಯಾಗಿದ್ದರು. * ಈಗ ದರ್ಶನ್ ನಾಯಕರಾಗಿರುವ ಮತ್ತೂಂದು ಐತಿಹಾಸಿಕ ಸಿನಿಮಾ “ಗಂಡುಗಲಿ ವೀರ ಮದಕರಿನಾಯಕ’ ಚಿತ್ರ ಸೆಟ್ಟೇರುವ ತಯಾರಿಯಲ್ಲಿದೆ. ಅಂಬರೀಶ್ ಅವರು ಒಂದು ವೇಳೆ ಇದ್ದಿದ್ದರೆ, ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದರೇನೋ? ಆದರೆ, ಅಂಬರೀಶ್ ಇಲ್ಲ ಎಂಬ ಭಾವನೆ ಯಾರಿಗೂ ಇಲ್ಲ ಅಂದುಕೊಂಡೇ, ಆ ಚಿತ್ರ ಮಾಡಲಾಗುತ್ತಿದೆ. * ಅಂಬರೀಶ್ ವ್ಯಕ್ತಿತ್ವವೇ ಹಾಗೆ. ಯಾರೇ ಬಂದು ಪ್ರೀತಿಯಿಂದ ಆಹ್ವಾನಿಸಿದರೆ, ಸಾಕು, ಅದು ಹೊಸಬರ,ಹಳಬರ ಚಿತ್ರ ಅಂತ ಹಿಂದೆ ಮುಂದೆ ನೋಡದೆ, ಆ ಚಿತ್ರಗಳ ಆಡಿಯೋ ಬಿಡುಗಡೆ, ಟ್ರೇಲರ್ ಬಿಡುಗಡೆ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳಿಗೆ ಹೋಗಿ, ಚಿತ್ರತಂಡದ ಬೆನ್ನುತಟ್ಟುತ್ತಿದ್ದರು. ಈ ಒಂದು ವರ್ಷದಲ್ಲಿ ಸಾಕಷ್ಟು ಕಾರ್ಯಕ್ರಮಗಳಿಗೆ ಅಂಬಿ ಸಾಕ್ಷಿಯಾಗುತ್ತಿದ್ದರು.