ಬೆಂಗಳೂರು: ಪಕ್ಷದ ನಾಯಕರು ಹಾಗೂ ಕ್ಷೇತ್ರದ ಕಾರ್ಯಕರ್ತರ ತಾಳ್ಮೆ ಪರೀಕ್ಷೆ ಮಾಡಿರುವ ಅಂಬರೀಶ್ ಮಂಡ್ಯದಿಂದ ಸ್ಪರ್ಧಿಸುವ ಬಗ್ಗೆ ಸೋಮವಾರ ತಡರಾತ್ರಿವರೆಗೂ ಗುಟ್ಟು ಬಿಟ್ಟುಕೊಡದೇ ಪಕ್ಷದ ನಾಯಕರ ತಲೆಬಿಸಿಗೆ ಕಾರಣವಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಕೊನೆ ಕ್ಷಣದಲ್ಲಿ ಪರ್ಯಾಯ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸಿದೆ.
ಅಂಬರೀಶ್ ಸ್ಪರ್ಧೆ ಮಾಡದಿದ್ದರೆ ತಮಗೇ ಟಿಕೆಟ್ ಕೊಡಿ ಎಂದು ಅಂಬರೀಶ್ ಆಪ್ತ ಅಮರಾವತಿ ಚಂದ್ರಶೇಖರ್ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿ, ಅಂಬರೀಶ್ ತಮಗೆ ಅವಕಾಶ ಕೊಡಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದರು. ಇದರಿಂದ ಆಕ್ರೋಶಗೊಂಡಿರುವ ಅಂಬರೀಶ್ ತಾವು ಯಾರಿಗೂ ಟಿಕೆಟ್ ಕೊಡಿಸುವ ಭರವಸೆ ನೀಡಿಲ್ಲ ಎಂದು ಖಾರವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಇದರಿಂದ ಅಮರಾವತಿ ಚಂದ್ರಶೇಖರ್ ತಾವು 20 ವರ್ಷದಿಂದ ಪಕ್ಷದಲ್ಲಿ ಕೆಲಸ ಮಾಡಿದರೂ ತಮಗೆ ಟಿಕೆಟ್ ಕೊಡಿಸಲು ಅಂಬರೀಶ್ ಮುಂದಾಗಿಲ್ಲ ಎಂದು ತಮ್ಮ ಆಪ್ತರ ಬಳಿ ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಮತ್ತೂಬ್ಬ ಟಿಕೆಟ್ ಆಕಾಂಕ್ಷಿ ಚಿದಂಬರಂ ಅಂಬರೀಶ್‌ರನ್ನು ಭೇಟಿ ಮಾಡಿ, ನೀವೇ ಸ್ಪರ್ಧಿಸಿ ಎಂದು ಒತ್ತಾಯ ಮಾಡಿದ್ದಾರೆ.
ಮೂಲದ ಪ್ರಕಾರ ಅಂಬರೀಶ್ ಸ್ಪರ್ಧೆಗೆ ಒಪ್ಪಿಗೆ ಸೂಚಿಸಿದ್ದು, ಚುನಾವಣೆಗೆ ಖರ್ಚು ವೆಚ್ಚವನ್ನೆಲ್ಲಾ ಪಕ್ಷವೇ ನೋಡಿಕೊಳ್ಳಬೇಕು ಎಂದು ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ. ಅಂಬರೀಶ್ ಗೊಂದಲದ ನಡೆಯಿಂದ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಸಮಾಧಾನಗೊಂಡಿದ್ದಾರೆ. ಪರ್ಯಾಯ ಅಭ್ಯರ್ಥಿ ವಿಚಾರದಲ್ಲಿ ಸಿದ್ದರಾಮಯ್ಯ -ಪರಮೇಶ್ವರ್ ಸಮಾಲೋಚನೆ ನಡೆಸಿದ್ದು, ಅಮರಾವತಿ ಚಂದ್ರಶೇಖರ್, ಎಚ್.ಬಿ .ರಾಮು ಹಾಗೂ ರವಿ ಗಾಣಿಗ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.