“ನಿಜಕ್ಕೂ ನಿಮ್ಮ ಹೀರೋ ತುಂಬಾ ಕಷ್ಟಪಟ್ಟಿದ್ದಾರೆ. ತಾಯಿ ಜೊತೆ ಹೋಗುತ್ತಿರುವ ಹೀರೋಯಿನ್‌ಗೆ ಹಿಂದಿನಿಂದ ಕಲ್ಲು ಹೊಡೆಯೋದು ಸುಲಭದ ಕೆಲಸನಾ …’ – ಹೀಗೆ ಹೇಳಿ ನಕ್ಕರು ಹಿರಿಯ ನಟ ಅಂಬರೀಶ್. ಆಗಷ್ಟೇ “ರಾಜು ಕನ್ನಡ ಮೀಡಿಯಂ’ ಚಿತ್ರದ ಟ್ರೇಲರ್ ಲಾಂಚ್ ಮಾಡಿದ ಅವರಿಗೆ ಅಲ್ಲಿ ಹೀರೋ “ಕಷ್ಟ’ಪಟ್ಟಿದ್ದು ಗೊತ್ತಾಗಿತ್ತು. ಅಂಬರೀಶ್ ಅವರು ಕಷ್ಟದ ಬಗ್ಗೆರ ಮಾತನಾಡುತ್ತಿದ್ದಂತೆ ಪಕ್ಕದಲ್ಲಿದ್ದ ನಾಯಕ ಗುರುನಂದನ್ ನಾಚಿಕೊಂಡರು. “ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ. ಇವತ್ತು ಕನ್ನಡ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. “ರಾಜು ಕನ್ನಡ ಮೀಡಿಯಂ’ನಲ್ಲೂ ಮುದ್ದಾದ ಜೋಡಿ ಇದೆ. ಜೊತೆಗೆ ಚಿತ್ರ ಸುಂದರವಾಗಿ ಮೂಡಿಬಂದಿದೆ. ಖಂಡಿತಾ, ಈ ಚಿತ್ರ ಗೆದ್ದೇ ಗೆಲ್ಲುತ್ತದೆ’ ಎಂದು ವಿಶ್ವಾಸದಿಂದ ಹೇಳಿದರು ಅಂಬರೀಶ್.
ಅಂದು ಅಂಬರೀಶ್ ಬಂದಿದ್ದು, “ರಾಜು ಕನ್ನಡ ಮೀಡಿಯಂ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಕ್ಕಾಗಿ. ಟ್ರೇಲರ್ ಬಿಡುಗಡೆಗೆ ಮಾಜಿ ಸಚಿವ ಆರ್.ಅಶೋಕ್ ಕೂಡಾ ಬಂದಿದ್ದರು. ಬೇರೊಂದು ಕಾರ್ಯಕ್ರಮಕ್ಕೆ ಹೊರಟಿದ್ದ ಅವರು ಆ ಕಾರ್ಯಕ್ರಮದ ಬದಲು “ರಾಜು ಕನ್ನಡ ಮೀಡಿಯಂ’ಗೆ ಬರಲು ಚಿತ್ರದ ಟ್ರೇಲರ್ ಹಾಗೂ ಅದರಲ್ಲಿನ ಡೈಲಾಗ್ ಕಾರಣವಂತೆ. “ಚಿತ್ರದ ಟ್ರೇಲರ್ ತೋರಿಸಿದರು. ತುಂಬಾ ಇಷ್ಟವಾಯಿತು. ಅದಕ್ಕಾಗಿ ಇಲ್ಲಿಗೆ ಬಂದೆ. ಛಾಯಾಗ್ರಹಣ
ತುಂಬಾ ಸೊಗಸಾಗಿದೆ’ ಎಂದರು.
ನಿರ್ಮಾಪಕ ಕೆ.ಎ.ಸುರೇಶ್ ಈಗಾಗಲೇ ಬಿಟ್ಟಿರುವ ಟ್ರೇಲರ್‌ಗೆ ಸಿಗುತ್ತಿರುವ ಮೆಚ್ಚುಗೆಯಿಂದ ಖುಷಿಯಾಗಿದ್ದರು. ನಿರ್ದೇಶಕ ನರೇಶ್, “ತುಂಬಾ ಪ್ರೀತಿಯಿಂದ, ಶ್ರಮಪಟ್ಟು ಈ ಸಿನಿಮಾ ಮಾಡಿದ್ದೇವೆ. ಇಡೀ ಸಿನಿಮಾ ಜಾಲಿಯಾಗಿ ಸಾಗಲಿದ್ದು, ಒಂದು ಒಳ್ಳೆಯ ಸಂದೇಶ ಕೂಡಾ ಚಿತ್ರದಲ್ಲಿದೆ’ ಎನ್ನುವುದು ನರೇಶ್ ಮಾತು. ಚಿತ್ರದಲ್ಲಿ ಗುರುನಂದನ್ ನಾಯಕರಾಗಿ ನಟಿಸಿದ್ದು, ಈ ಸಿನಿಮಾ ಕೂಡಾ “ಫಸ್ಟ್ ರ್‍ಯಾಂಕ್ ರಾಜು’ ತರಹನೇ ಹಿಟ್ ಆಗುವ ವಿಶ್ವಾಸವಿದೆ ಎಂದರು. ಈ ಚಿತ್ರಕ್ಕಾಗಿ ಅವರ ಗೆಟಪ್ ಕೂಡಾ ಬದಲಾಗಿದ್ದು, ಹೈಸ್ಕೂಲ್
ಹುಡುಗನಾಗಿ, ಕನ್ನಡ ಪ್ರೇಮಿಯಾಗಿ, ಬಿಝಿನೆಸ್ ಮ್ಯಾನ್ ಆಗಿಯೂ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಆಶಿಕಾ ನಾಯಕಿಯಾಗಿದ್ದು, ಅವರಿಲ್ಲಿ ವಿದ್ಯಾ ಎಂಬ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ರವೀಂದ್ರನಾಥ್ ಸಂಗೀತ, ಶೇಖರ್ ಚಂದ್ರು ಛಾಯಾಗ್ರಹಣವಿದೆ.