Advertisement

ಪ್ರಧಾನಿಗೆ ಮೋದಿಗೆ ಅಂಬಾನಿ, ಅದಾನಿಯೇ ರಿಮೋಟ್‌ ಕಂಟ್ರೋಲ್‌

12:30 AM Mar 07, 2019 | Team Udayavani |

ಮಂಗಳೂರು: ರಫೇಲ್‌ ಪ್ರಕರಣದಲ್ಲಿ ಅವ್ಯವಹಾರ ಆಗಿದೆ ಎಂದು ಕಾಂಗ್ರೆಸ್‌ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ಇದಕ್ಕೆ ಸಾಕ್ಷಿಯಾಗಿ ಇದೀಗ ರಫೇಲ್‌ ಪ್ರಕರಣದ ದಾಖಲೆಗಳು ನಮ್ಮಿಂದ ಕಾಣೆಯಾಗಿವೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ತಿಳಿಸಿದೆ. 

Advertisement

ಅಂದರೆ ಇದರಲ್ಲಿ ಏನೋ ಸಂಗತಿ ನಡೆದಿದೆ ಎಂಬುದು ಸ್ಪಷ್ಟವಾಗುತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಅವರು ಚೌಕಿದಾರ ಅಲ್ಲ; ಈ ಪ್ರಕರಣದಲ್ಲಿ ಭಾಗೀದಾರ ಎಂದು ಅರ್ಥವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ನಗರದ ಅಡ್ಯಾರ್‌ ಗಾರ್ಡನ್‌ನಲ್ಲಿ ಬುಧವಾರ ದ.ಕ. ಜಿಲ್ಲಾ ಕಾಂಗ್ರೆಸ್‌ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡ “ಪರಿವರ್ತನಾ ಯಾತ್ರೆ’ ಸಮಾವೇಶ ಉದ್ಘಾಟನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಧಾನಿ ವಿರುದ್ಧ ಕೇಸು ದಾಖಲಿಸಿ
ರಫೇಲ್‌ ಡೀಲ್‌ನಲ್ಲಿ ನೇರವಾಗಿ ಪ್ರಧಾನಿ ಕಚೇರಿಯೇ ವ್ಯವಹಾರ ನಡೆಸಿರುವ ಕಾರಣ ಮೊದಲಿಗೆ ಪ್ರಧಾನಿ ಮೇಲೆ ಭ್ರಷ್ಟಾಚಾರ ಸಂಬಂಧಿತ ಕೇಸ್‌ ದಾಖಲಿಸಬೇಕು ಎಂದರು.

ತಾನು ದೇಶ ಕಾಯುವ ಚೌಕಿದಾರ ಎನ್ನುವ ಮೋದಿ ಕಳೆದ ಚುನಾವಣೆ ವೇಳೆ ಕೊಟ್ಟ ಮಾತು ಈಡೇರಿಸಿದ್ದೇನೆ ಎಂದು ಹೇಳುವ ಯಾವ ಧೈರ್ಯವನ್ನೂ ಪ್ರದರ್ಶಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

Advertisement

“ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ರಿಮೋಟ್‌ ಕಂಟ್ರೋಲ್‌ ಎಂದು ಹೇಳುವ ಪ್ರಧಾನಿ ಮೋದಿ ಅವರಿಗೆ ಅಂಬಾನಿ, ಅದಾನಿಯೇ ರಿಮೋಟ್‌ ಕಂಟ್ರೋಲ್‌ ಆಗಿದ್ದಾರೆ ಎಂಬುದು ನೆನಪಿರಲಿ’ ಎಂದರು.

ಕಳೆದ 5 ವರ್ಷದಲ್ಲಿ ಕಳ್ಳರ ಅಂಗಡಿ ಬಂದ್‌ ಮಾಡಿದ್ದೇವೆ ಎಂದು ಹೇಳುವ ಪ್ರಧಾನಿ ನೀರವ್‌ ಮೋದಿ, ಲಲಿತ್‌ ಮೋದಿ, ವಿಜಯ ಮಲ್ಯ ಅವರು ದೇಶಬಿಟ್ಟು ಹೋಗಲು ಕಾರಣ ಯಾರು? ಈಗ ವಿದೇಶದಿಂದ ಮಲ್ಯ ಅವರನ್ನು ತರಿಸುತ್ತೇನೆ ಎನ್ನುವ ಮೋದಿ ಓಡುವ ಮೊದಲು ಯಾಕೆ ಗಮನಿಸಿಲ್ಲ ಎಂದು ಪ್ರಶ್ನಿಸಿದರು.

ಸಾಮರಸ್ಯ ಕದಡುವ ಸಂಸದನ ಬದಲಿಸಿ
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ನಳಿನ್‌ ಕುಮಾರ್‌ ಕಟೀಲು ಆರ್‌ಎಸ್‌ಎಸ್‌ ಪ್ರಯೋಗ ಶಾಲೆಯಿಂದ ಬಂದವರು. ಕೋಮುಗಲಭೆ ಪ್ರಚೋದನೆಯ ಮೂಲಕವೇ ಇವರು ಜನರ ಭಾವನೆ ಗಳನ್ನು ಕೆರಳಿಸುತ್ತಿದ್ದಾರೆ. ನಿಜಕ್ಕೂ ಕ್ಷೇತ್ರಕ್ಕೆ ಅವರ ಕೊಡುಗೆ ಏನು? ಕೇವಲ ಸಾಮರಸ್ಯ ಕೆಡಿಸುವುದೇ ಅವರ ಅಭಿವೃದ್ಧಿಯಾ? ಇಂಥ ಸಂಸದರನ್ನು ಮುಂದಿನ ಚುನಾವಣೆಯಲ್ಲಿ ಬದಲಿಸಿ ಎಂದು ಕಾಂಗ್ರೆಸ್‌ ಕಾರ್ಯಕರ್ತರಿಗೆ ಅವರು ಮನವಿ ಮಾಡಿದರು.

ಕಾಂಗ್ರೆಸ್‌ ಮುಖಂಡರಾದ ವಿಷ್ಣುನಾಥ್‌, ಸಿ.ಎಂ. ಇಬ್ರಾಹಿಂ, ಲಕ್ಷ್ಮೀನಾರಾಯಣ, ಯು.ಬಿ. ವೆಂಕಟೇಶ್‌, ಪುಷ್ಪಾ ಅಮರನಾಥ್‌, ಬಿ. ರಮಾನಾಥ್‌ ರೈ, ವಿನಯ್‌ ಕುಮಾರ್‌ ಸೊರಕೆ, ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ವಸಂತ ಬಂಗೇರ, ಅಭಯಚಂದ್ರ, ಜೆ.ಆರ್‌. ಲೋಬೋ, ಮೊದಿನ್‌ ಬಾವ, ಶಕುಂತಳಾ ಶೆಟ್ಟಿ, ಭಾಸ್ಕರ್‌ ಕೆ, ಮಿಥುನ್‌ ರೈ, ಮಮತಾ ಡಿ.ಎಸ್‌. ಗಟ್ಟಿ, ಕವಿತಾ ಸನಿಲ್‌, ಎಂ. ಶಶಿಧರ ಹೆಗ್ಡೆ, ಬಿ.ಇಬ್ರಾಹಿಂ, ಇಬ್ರಾಹಿಂ ಕೋಡಿಜಾಲ್‌ ಉಪಸ್ಥಿತರಿದ್ದರು.

ಸಚಿವ ಯು.ಟಿ. ಖಾದರ್‌ ಪ್ರಸ್ತಾವನೆಗೈದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಸ್ವಾಗತಿಸಿದರು. ಐವನ್‌ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.

ಚೌಕಿದಾರ್‌ ರಫೇಲ್‌ನಲ್ಲಿ 
ಭಾಗೀದಾರ್‌: ಸಿದ್ದರಾಮಯ್ಯ

ಸಿದ್ದರಾಮಯ್ಯ ಮಾತನಾಡಿ, “ಸೈನಿಕರು ಹುತಾತ್ಮರಾದ ಸಂದರ್ಭ ಅದನ್ನು ಉಲ್ಲೇಖೀಸಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಈ ಬಾರಿ ಹೆಚ್ಚು ಸೀಟ್‌ ಗೆಲ್ಲಲಿದೆ ಎಂದು ಹೇಳುವ ಮೂಲಕ ನೀಚ ರಾಜಕಾರಣ ಮಾಡಿದ್ದಾರೆ. ಇದು ಅಕ್ಷಮ್ಯ. ಯಾವುದೇ ರಾಜಕೀಯ ಪಕ್ಷ ಇಂತಹ ಕಾರ್ಯ ಮಾಡಲೇಬಾರದು. ಕಪ್ಪು ಹಣ ತಂದು 15 ಲಕ್ಷ ರೂ. ಪ್ರತಿಯೊಬ್ಬರ ಖಾತೆಗೆ ನೀಡುತ್ತೇನೆ ಎಂದ ಮೋದಿ 15 ಪೈಸೆ ಕೂಡ ನೀಡಲಿಲ್ಲ. ಅಚ್ಛೇ ದಿನ್‌ ಆಯೇಗಾ ಎಂದದ್ದು ಅಂಬಾನಿ, ಅದಾನಿಗೆ ಹೊರತು ಬೇರೆ ಯಾರಿಗೂ ಬಂದಿಲ್ಲ. ನಾನು ದೇಶದ ಚೌಕಿದಾರ್‌ ಎಂದು ಹೇಳುತ್ತಿದ್ದ ಮೋದಿ ಇದೀಗ ರಫೇಲ್‌ ಡೀಲ್‌ನಲ್ಲಿ ಭಾಗೀದಾರ್‌ ಎಂಬುದು ಸ್ಪಷ್ಟವಾಗುತ್ತಿದೆ’ ಎಂದು ಹೇಳಿದರು.

ಕಾಂಗ್ರೆಸ್‌ ಗೆದ್ದರೆ ರಾಮ ಮಂದಿರ
ಸಿಎಂ ಇಬ್ರಾಹಿಂ ಅವರು ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದರೆ ಹಿಂದೂ-ಮುಸ್ಲಿಂ ಸಮುದಾಯದ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸುತ್ತೇವೆ ಎಂದು ತಿಳಿಸಿದರು.

ಬ್ಯಾಂಕ್‌ ವಿಲೀನ; ಪ್ರತಿಧ್ವನಿ
ಸಿದ್ದರಾಮಯ್ಯ ಮಾತನಾಡಿ, ಇಂದಿರಾ ಗಾಂಧಿ ಅವರು ಬ್ಯಾಂಕ್‌ಗಳನ್ನು ತೆರೆದು ಜನಸಾಮಾನ್ಯರಿಗೆ ಅನುಕೂಲ ಮಾಡಿದರು. ಆದರೆ ಅಪನಗದೀಕರಣದ ನೆಪದಲ್ಲಿ ಮೋದಿ ಸರಕಾರ ಬ್ಯಾಂಕ್‌ಗಳನ್ನೇ ಮುಚ್ಚಿತು. ಲಾಭದಾಯಕವಾಗಿದ್ದ ವಿಜಯ ಬ್ಯಾಂಕನ್ನು ಇನ್ನೊಂದು ಬ್ಯಾಂಕಿನೊಂದಿಗೆ ವಿಲೀನ ಮಾಡುವ ಕಾರ್ಯ ನಡೆಸಿದೆ ಎಂದರು. ಇದಕ್ಕೂ ಮೊದಲು ಸಿ.ಎಂ. ಇಬ್ರಾಹಿಂ ಮಾತನಾಡಿ, ಕರಾವಳಿಯ ಬಂಟ ಸಮುದಾಯದ ಪ್ರತಿಷ್ಠೆಯ ವಿಜಯ ಬ್ಯಾಂಕನ್ನು ಬರೋಡಾ ಬ್ಯಾಂಕ್‌ ಜತೆಗೆ ವಿಲೀನ ಮಾಡಿದ್ದಾರೆ. ಇದನ್ನು ಮೋದಿ ಅವರಲ್ಲಿ ಪ್ರಶ್ನಿಸುವ ಧೈರ್ಯವನ್ನು ಸಂಸದ ನಳಿನ್‌ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next