Advertisement
ಮೊದಲ ಹಂತದಲ್ಲಿ ಅಂಬಾಗಿಲಿನಿಂದ ನಿಟ್ಟೂರು ಶಾಲೆ ಸಮೀಪ ತಾಂಗದಗಡಿವರೆಗೆ 2 ಕೋ.ರೂ., ವೆಚ್ಚದಲ್ಲಿ ಎರಡು ಬದಿಯಲ್ಲಿ ಡಾಮರಿನಿಂದ ವ್ಯವಸ್ಥಿತ ರಸ್ತೆ ನಿರ್ಮಿಸಲಾಗುವುದು. ಈ ಪ್ರಕ್ರಿಯೆ ವರ್ಕ್ ಆರ್ಡರ್ ಹಂತದಲ್ಲಿದೆ. ಇಲ್ಲಿಂದ ಮುಂದುವರಿದು, ಗುಂಡಿಬೈಲು-ಕಲ್ಸಂಕ ವೃತ್ತದ ವರೆಗೆ 1 ಕೋ. ರೂ ವೆಚ್ಚದಲ್ಲಿ ಡಾಮರು ಹಾಕುವ ಪ್ರಸ್ತಾವನೆ ತಯಾರಿಸಿ ಅನುಮೋದನೆಗೆ ಜಿಲ್ಲಾಧಿಕಾರಿ ಅವರಿಗೆ ಕಳುಹಿಸಲಾಗಿದೆ. 5ನೇ ಹಣಕಾಸು ಆಯೋಗದ ವಿಶೇಷ ಅನುದಾನದಿಂದ ಕಾಮಗಾರಿ ಜಾರಿಗೊಳ್ಳುವ ಸಾಧ್ಯತೆಯಿದೆ.
ಸುಗಮ ಸಂಚಾರಕ್ಕಾಗಿ ಅಂಬಾಗಿಲು-ಕಲ್ಸಂಕ ರಸ್ತೆಯು ಚತುಷ್ಪಥಗೊಂಡು ಸವಾರರಿಗೆ ಅನು ಕೂಲಕರವಾಗಿತ್ತು. ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ರಸ್ತೆ ಎರಡು ಬದಿ ಅಲ್ಲಲ್ಲಿ ಹದಗೆಟ್ಟಿದೆ. ರಸ್ತೆ ಅವ್ಯವಸ್ಥೆಯಿಂದ ಈ ಭಾಗದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿದ್ದವು. ರಸ್ತೆ ಮೇಲ್ಭಾಗದ ಪದರಗಳು ಎದ್ದು ಅಲ್ಲಲ್ಲಿ ಹರಡಿಕೊಂಡ ಪುಡಿಯಾದ ಕಲ್ಲು ತುಂಡುಗಳು ಸುಗಮ ಸಂಚಾರಕ್ಕೆ ಕಿರಿಕಿರಿಯಾಗುತ್ತಿವೆ. ಗುಂಡಿಗಳೇ ರಾರಾಜಿಸುತ್ತಿದ್ದ ರಸ್ತೆಗಳು
ಅಂಬಾಗಿಲು- ಗುಂಡಿಬೈಲು- ಕಲ್ಸಂಕ ರಸ್ತೆಯಲ್ಲಿ ಗುಂಡಿಗಳೇ ರಾರಾಜಿಸುತ್ತಿತ್ತು. ಈ ವರ್ಷದ ಮಳೆಗಾಲದಲ್ಲಿ ಸಾರ್ವಜನಿಕರು ಸಾಕಷ್ಟು ಕಷ್ಟಪಡುವಂತಾಗಿತ್ತು. ಅಂಬಾಗಿಲಿನಿಂದ ಕಲ್ಸಂಕವರೆಗೂ 50ಕ್ಕೂ ಅಧಿಕ ಗುಂಡಿಗಳು ಸವಾರರ ಜೀವ ಹಿಂಡುತ್ತಿದೆ. ಮಳೆಗಾಲದಲ್ಲಿ ಗುಂಡಿಗಳಿಂದಲೇ ನಿಯಂತ್ರಣ ತಪ್ಪಿ ಸಾಕಷ್ಟು ಮಂದಿ ದ್ವಿಚಕ್ರ ವಾಹನ ಸವಾರರು ಮೈಕೈಗೆ ಪೆಟ್ಟು ಮಾಡಿಕೊಂಡಿದ್ದರು. ಇತ್ತೀಚೆಗೆ ಗುಂಡಿಗಳಿಗೆ ತೇಪೆ ಹಚ್ಚಲಾಗಿದೆ.
Related Articles
ಅಂಬಾಗಿಲಿನಿಂದ ಕಲ್ಸಂಕವರೆಗೆ ಎರಡು ಹಂತಗಳಲ್ಲಿ 3 ಕೋ.ರೂ. ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಇದಕ್ಕೆ ಬೇಕಾದ ಪೂರ್ವತಯಾರಿ ಕೆಲಸ ನಡೆಯುತ್ತಿದೆ. ಮಳೆಬಿಟ್ಟ ಕೂಡಲೇ ರಸ್ತೆ ಕಾಮಗಾರಿ ಆರಂಭಗೊಳ್ಳಲಿದೆ. ಉಡುಪಿ ನಗರದಲ್ಲಿ ಗುಣಮಟ್ಟದ ಇಲ್ಲದ ರಸ್ತೆಗಳನ್ನು ಸಹಿಸಲು ಸಾಧ್ಯವೇ ಇಲ್ಲ. ಈಗಾಗಲೆ ಕೆಲವು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಲಾಗಿದೆ. ಅಧಿಕಾರಿಗಳಿಗೂ ಎಲ್ಲ ಹಂತಗಳಲ್ಲಿ ಗುಣಮಟ್ಟವನ್ನು ಪರಿಶೀಲಿಸಿ ಬಿಲ್ ಮೊತ್ತ ಪಾವತಿಸಲು ಸೂಚನೆ ನೀಡಲಾಗಿದೆ. -ಕೆ. ರಘುಪತಿ ಭಟ್, ಶಾಸಕರು, ಉಡುಪಿ
Advertisement
ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿ – ಸ್ಥಳೀಯಾಡಳಿತ ಸಂಸ್ಥೆಗಳು ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಕಾಮಗಾರಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. – ರಸ್ತೆ ಅಭಿವೃದ್ಧಿಗೆ ಗುತ್ತಿಗೆ ಪಡೆಯುವ ವ್ಯಕ್ತಿ, ಸಂಸ್ಥೆಯ ಸಂಪೂರ್ಣ ವಿವರ, ಗುತ್ತಿಗೆದಾರರು ಈ ಹಿಂದೆ ನಿರ್ಮಿಸಿರುವ ರಸ್ತೆ, ಅದರ ಗುಣಮಟ್ಟದ ಬಗ್ಗೆ ಪೂರ್ವಪರತೆಯನ್ನು ಜನರ ಮುಂದಿಡಬೇಕು. – ಗುಂಡಿ ಬೀಳದಂತೆ, ಬಿರುಕು ಒಡೆಯದಂತೆ, ಕುಸಿಯದಂತೆ ರಸ್ತೆಯ ಸಂಪೂರ್ಣ ನಿರ್ವಹಣೆಯನ್ನು ಆರಂಭಿಕ ಕೆಲವು ವರ್ಷಗಳ ಕಾಲ ಗುತ್ತಿಗೆದಾರನಿಗೆ ವಹಿಸುವುದು. ಸ್ಥಳೀಯರು ಒಳಗೊಂಡ ಸಮಿತಿ ರಚಿಸಿ ಈ ಬಗ್ಗೆ ತೀವ್ರ ನಿಗಾ ವಹಿಸುವುದು. – ಮಳೆಗಾಲದಲ್ಲಿ ರಸ್ತೆಗಳಲ್ಲಿ ಗುಂಡಿ ಬೀಳದಂತೆ, ಎರಡು ಬದಿಯಲ್ಲಿ ವ್ಯವಸ್ಥಿತ ಚರಂಡಿ ವ್ಯವಸ್ಥೆ ರೂಪಿಸಿಕೊಂಡು ಮಾದರಿ ರಸ್ತೆಯಾಗಿ ರೂಪಿಸುವ ಬಗ್ಗೆ ಎಂಐಟಿ, ಎನ್‌ಐಟಿಕೆಯಂಥ ಶಿಕ್ಷಣ ಸಂಸ್ಥೆಗಳ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕರಿಂದ ಸಲಹೆಗಳನ್ನು ಪಡೆಯುವುದು. – ಶಿಕ್ಷಣ ಸಂಸ್ಥೆಗಳ ಸಿವಿಲ್ ಎಂಜಿನಿಯರ್ ಉಪನ್ಯಾಸಕರು, ಸರಕಾರಿ ಎಂಜಿನಿಯರ್(ಲೋಕೋಪಯೋಗಿ) ಜಂಟಿಯಾಗಿ ತಪಾಸಣೆ ನಡೆಸಿ ವರದಿ ಕೊಡುವಂತೆ ಶಾಸಕ ಕೆ. ರಘುಪತಿ ಭಟ್ ನೀಡಿರುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು.