Advertisement

ಭೀಷ್ಮವಿಜಯದಲ್ಲಿ ಧ್ವನಿಸಿದ ಅಂಬಾ ಶಾಪ

01:03 AM Apr 12, 2019 | mahesh |

ನಾನೇ ಸೃಷ್ಟಿ ಮಾಡಿದ ಅಗ್ನಿ ನನ್ನನ್ನು ದಹಿಸುತ್ತಿದೆ. ಹಾಗೆಯೇ ನೀನೇ ಸಲಹಿದ ಶಶಿವಂಶ ನಿನ್ನೆದುರೇ ನಶಿಸಿಹೋಗಲಿ. ಈ ಅಗ್ನಿಯಿಂದ ನನ್ನ ಕಾಲುಗಳು, ತೊಡೆಗಳು ಸುಡುತ್ತಿವೆ. ನೀನು ಸಲಹುವ ವಂಶದವರ ತೊಡೆಯಿಂದಲೇ ಅವರ ನಾಶವಾಗಲಿ. ನನ್ನ ಸೀರೆಯ ಸೆರಗು ಸುಟ್ಟು ಕರಕಲಾಗುತ್ತಿದೆ. ಅಂತಹ ಸೀರೆಯ ಸೆರಗಿನ ಎಳೆಯಿಂದಲೇ ನಿನ್ನವರ ಕೊರಳಿಗೆ ಉರುಳಾಗಲಿ. ನನ್ನ ಕೂದಲು ಕರಟಿ ಕಮಟು ವಾಸನೆ ತರಿಸುತ್ತಿದೆ. ನಿನ್ನ ವಂಶದವರ ಮುಡಿಗೆ ಕೈಯಿಕ್ಕಿದ ದೋಷವೂ ವಂಶ ನಾಶಕ್ಕೆ ಕಾರಣವಾಗಲಿ. ಉರಿ ಭೀಷ್ಮ, ಉರಿ. ಈ ಉರಿಯೇ ಚಂದ್ರವಂಶದ ವಿನಾಶಕ್ಕೆ ಹೇತುವಾಗಲಿ. ಹೆಣ್ಣಿನೆದುರು ಹೋರಾಡಲಾರೆ, ಗಂಡಿನೆದುರು ಸೋಲಲಾರೆ ಎನ್ನುವ ನಿನ್ನೆದುರು ಮುಂದಿನ ಜನ್ಮದಲ್ಲಿ ಎರಡೂ ಅಲ್ಲದವನಾಗಿ ಕಾಣಿಸಿಕೊಳ್ಳುವೆ. ಹೀಗೆ ಓತಪ್ರೋತವಾಗಿ ರೂಪಕದೋಪಾದಿಯಲ್ಲಿ ಕೌರವರ ನಾಶ, ಕುರುಕ್ಷೇತ್ರದ ಕುರಿತು ಶಾಪವಾಕ್ಯವಾಗಿ ಹೇಳಿದ್ದು ಅಂಬೆ ಪಾತ್ರಧಾರಿ ಶಶಿಕಾಂತ ಶೆಟ್ಟಿ ಕಾರ್ಕಳ ಅವರು.

Advertisement

ಉಡುಪಿ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋದೆ ಮಠದ ವತಿಯಿಂದ ಕಲಾರಂಗ ಉಡುಪಿ ಅವರ ಎಂದಿನಂತೆ ವಿಶಿಷ್ಟ ಸಂಯೋಜನೆಯಲ್ಲಿ ನಡೆದ ಯಕ್ಷಗಾನದಲ್ಲಿ ಈಗಿನ ತಲೆಮಾರಿನ ಕಲಾವಿದರ ಪೈಕಿ ಪಾತ್ರಪೋಷಣೆಗಾಗಿ ಯಕ್ಷರಂಗದ ಅಂಬೆ ಎಂದೇ ಪ್ರಶಂಸೆಯನ್ನು ಪಡೆದ ಶಶಿಕಾಂತರಿಗೆ ಎದುರಾದದ್ದು ಯಕ್ಷರಂಗದ ಭೀಷ್ಮ ಎಂಬ ನೆಗಳೆ¤ಯನ್ನು ಪಡೆದ ಬಳ್ಕೂರು ಕೃಷ್ಣ ಯಾಜಿ. ಯಾವುದೇ ಕಲಾವಿದರು ಪ್ರಸಂಗದಲ್ಲಿ ಮುಂದೆ ನಡೆಯುವುದನ್ನು ಮೊದಲೇ ಹೇಳಬಾರದು ಎನ್ನುವುದು ನಿಯಮ. ಆದರೆ ಆತನಿಗೆ ಪೂರ್ಣ ಪ್ರಸಂಗದ ಅರಿವಿರಬೇಕು, ಯಾವ ಘಟನೆಯ ನಂತರ ಯಾವುದು ಎನ್ನುವ ಕಾಲಮಾಹಿತಿ ಇರಬೇಕು. ಮುಂದಿನ ದಿನಗಳಲ್ಲಿ ನಡೆಯುವ ದ್ರೌಪದಿ ವಸ್ತ್ರಾಪಹಾರ, ದುರ್ಯೋಧನನ ಊರುಭಂಗವನ್ನು ಶಶಿಕಾಂತರು ಅಂಬೆಯಾಗಿ ಹೇಳುವುದು ತಪ್ಪು ಎಂಬ ಒಂದು ಅಭಿಪ್ರಾಯ ಇದೆ. ಆದರೆ ಇದಕ್ಕೆ ಶಶಿಕಾಂತರೂ ಅನೇಕ ಬಾರಿ ಸಮರ್ಥನೆ ನೀಡಿದ್ದಾರೆ. ಇದು ರಂಗದಲ್ಲಿ ಬಳಸುವ ನಾಟಕೀಯ ಕ್ರಮ. ಶಾಪವಾಕ್ಯವಾಗಿ ಹೇಳುವುದು ಮುಂದೆ ನಡೆಯುವ ಘಟನೆಗಳಿಗೆ ತಾಳೆಯಾಗಬಾರದು ಎಂದೇನೂ ಇಲ್ಲ. ಉಂಡವ ಹರಸುವುದು ಬೇಡ, ನೊಂದವ ಶಪಿಸುವುದು ಬೇಡ ಎಂಬ ಮಾತಿನಂತೆ ಹೆಣ್ಣೊಬ್ಬಳು ನೊಂದು ಬೆಂದು ಶಪಿಸುವಾಗ ಹಾಕುವ ಮಾತುಗಳು ಯಾವುದೂ ಇರಬಹುದು, ಅದೇ ಶಾಪವಾಗಿ ಮುಂದಿನ ದಿನಗಳಲ್ಲಿ ಅಘಟಿತ ಘಟನೆಗಳಾಗಿ ಘಟಿಸಲೂಬಹುದು ಎನ್ನುವ ವಾದವಿದೆ. ಇದು ನಾಟಕರಂಗದ ಪರಿಕಲ್ಪನೆ. ಕೋಳ್ಯೂರು, ಪಾತಾಳ ಮೊದಲಾದ ಅನೇಕ ಸ್ತ್ರೀಪಾತ್ರಧಾರಿಗಳ ಬಳಿ ಅಧ್ಯಯನ ಮಾಡಿ, ಸ್ವಂತದ್ದೂ ಅನುಭವದ ಮೂಲಕ ಸೇರಿಸಿ ಪಾತ್ರಪೋಷಿಸುವ ಶಶಿಕಾಂತರು ಈ ಮೂಲಕ ಅಭಿಮಾನಿಗಳನ್ನು ಗೆಲ್ಲುತ್ತಾ ಸಾಗುತ್ತಾರೆ. ಹೀಗೆ ಪ್ರಸಂಗದ ಕೊನೆಗೆ ಕುಳಿತ ಆಸನದ ತುದಿಗೆ ಬಂದು ಕೂರುವಂತೆ ಮಾಡುವಲ್ಲಿ ಆ ದಿನ ವಾಸುದೇವ ಸಾಮಗರ ಪರಶುರಾಮ, ಯಾಜಿಯವರ ಭೀಷ್ಮನ ಪಾತ್ರಗಾರಿಕೆ ಅನನ್ಯವಾಗಿ ಪ್ರಮುಖವಾಗಿತ್ತು.

“ಎತ್ತಲಿರಿಸಿದೇ ಭೀಷ್ಮ ಬುದ್ಧಿಗಳ ನೀನೀಗ’ ಎಂದು ದೇಹಾಯಾಸವನ್ನೂ ಪರಿಗಣಿಸದೇ ಜನ್ಸಾಲೆಯವರ ಹಾಡಿಗೆ ಹೆಜ್ಜೆ ಹಾಕಿದ ಸಾಮಗರು ಅರ್ಥಗಾರಿಕೆಯಲ್ಲಿ ಬಳಲುವಿಕೆ ತೋರ್ಗೊಡದೇ ತಮ್ಮ ಮಾತಿನ ಶೈಲಿ ಮೂಲಕ ಪರಶುರಾಮನನ್ನು ಎತ್ತರಕ್ಕೆ ಏರಿಸಿದರು. ಪರಶುರಾಮನಿಗೆ ದ್ವಂದ್ವ ಇತ್ತೇ, ಸಂಶಯ ಇತ್ತೇ, ಭೀಷ್ಮನ ಕುರಿತು ಅಸಹನೆ ಇತ್ತೇ, ಭೀಷ್ಮನ ನಿರ್ಧಾರದ ಕುರಿತು ಮೆಚ್ಚುಗೆ ಇತ್ತೇ, ತಾನು ಚಿರಂಜೀವಿ ಭೀಷ್ಮ ಇಚ್ಛಾ ಮರಣಿ ಎಂದು ತಿಳಿದೂ ಯುದ್ಧ ಮಾಡುವ ಅನಿವಾರ್ಯ ಯಾಕೆ ಬಂತು, ಅಂಬೆಗೆ ನ್ಯಾಯ ಕೊಡಿಸುವಲ್ಲಿ ಪರಶುರಾಮರು ಎಡವಿದರೇ ಹೀಗೆ ಅನೇಕ ಪ್ರಶ್ನೆಗಳನ್ನು ಪ್ರೇಕ್ಷಕರ ಮನದಲ್ಲಿ ಹುಟ್ಟಿಸಿಹಾಕಿ ಅದಕ್ಕೆ ಸೂಕ್ತ ಸಮರ್ಥನೆಗಳನ್ನು ಕೊಡುತ್ತಾ ಹೋದರು. ಭೀಷ್ಮ ಕೂಡಾ ಎಲ್ಲಿಯೂ ಪರಶುರಾಮನ ಗೌರವಕ್ಕೆ ಚ್ಯುತಿಯಾಗದಂತೆ ಮಾತಿನ ಮೊನಚನ್ನು ಕಡಿಮೆ ಮಾಡದೇ ತನ್ನತನವನ್ನು ಬಿಟ್ಟುಕೊಡದೇ ಸಾಗಿದರು.

ಮೊದಲ ಭಾಗದ ಸಾಲ್ವನಾಗಿ ಪ್ರಸನ್ನ ಶೆಟ್ಟಿಗಾರ್‌ ಅವರು ಶೃಂಗಾರ ಭಾವದಲ್ಲಿ ಶಶಿಕಾಂತರಿಗೆ ಉತ್ತಮ ಜೋಡಿವೇಷವಾದರು. ಎರಡನೆ ಸಾಲ್ವನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ಸಾಲ್ವನ ಪ್ರತೀಕಾರ, ಸೇಡು, ಅಸಹನೆ, ಸಿಟ್ಟನ್ನು ಅಭಿವ್ಯಕ್ತಿಗೊಳಿಸಿದರು. ವೃದ್ಧ ಬಾಹ್ಮಣನ ಪಾತ್ರವನ್ನು ಚಪ್ಪರಮನೆ ಶ್ರೀಧರ ಹೆಗಡೆ ಅವರು ನಿರ್ವಹಿಸಿದರು.

ಕಾಲಮಿತಿ ಯಕ್ಷಗಾನದಲ್ಲಿ ನಡೆಯುವ ದೊಡ್ಡ ದೋಷದಂತೆ ಇಲ್ಲೂ ಪ್ರಸಂಗ ಪೀಠಿಕೆ ನಿಧಾನವಾಗಿ ಸಾಗಿ ನಂತರ ವೇಗೋತ್ಕರ್ಷ ಪಡೆಯಿತು. ಚುನಾವಣಾ ಆಯೋಗದ ಸಮಯಮಿತಿಯ ಸಮಯದ ಅಭಾವದಿಂದ ಭೀಷ್ಮ  -ಪರಶುರಾಮ, ಅಂಬೆ – ಭೀಷ್ಮರ ಸಂವಾದವನ್ನು ಹೃಸ್ವಗೊಳಿಸಲಾಗಿತ್ತು. ಇದರಿಂದಾಗಿ ಪ್ರಸಂಗದ ಪ್ರಮುಖ ಘಟ್ಟ, ಅಂಬಾಶಪಥ ಕಿರಿದು ಅವಧಿಯಲ್ಲಿ ಮುಗಿಯಿತು. ಇದಕ್ಕಾಗಿ ಕಲಾವಿದರು ಒಂದಷ್ಟು ಸಿದ್ಧತೆ ಮಾಡಬಹುದಿತ್ತು. ಪ್ರತಾಪಸೇನನ ದೂತನ ಪಾತ್ರವನ್ನು ಬಿಟ್ಟಿದ್ದರೂ ಸ್ವಲ್ಪ ಸಮಯ ಉಳಿತಾಯವಾಗುತ್ತಿತ್ತು. ಚಪ್ಪರಮನೆಯವರಿಗೂ ಸಮಯ ಸಾಲಲಿಲ್ಲ.

Advertisement

ಚಂದ್ರಕುಮಾರ ನೀರ್ಜಡ್ಡು ಅವರ ಪ್ರತಾಪಸೇನ, ಸ್ಫೂರ್ತಿ ಭಟ್‌, ರವಿಚಂದ್ರ ಅವರ ಸ್ವಯಂವರಕ್ಕೆ ಆಗಮಿಸುವ ರಾಜರು, ಜಯ ಕೆ. ಅವರು ಅಂಬೆ, ಮನೋಹರ ಅವರ ಅಂಬಾಲಿಕೆ, ಭಾಗವತಿಕೆ ಜನ್ಸಾಲೆ ರಾಘವೇಂದ್ರ ಆಚಾರ್‌, ಮದ್ದಳೆಯಲ್ಲಿ ಸುನಿಲ್‌ ಭಂಡಾರಿ ಕಡತೋಕಾ, ಚೆಂಡೆಯಲ್ಲಿ ಶಿವಾನಂದ ಕೋಟ ಒಟ್ಟು ಪ್ರಸಂಗವನ್ನು ಕಳೆಗಟ್ಟಿಸಿತು. ಉರಗವೇಣಿಯರೆಲ್ಲ ಕೇಳಿರಿ ಸುರನದಿಯೊಳು, ಧರಣಿಪಾತ್ಮಜೆ ಧನುಜೇಂದ್ರನ ಕಾಣುತ, ಸರಸಿಜಾಂಬಕಿಯರೆ ಕೇಳಿ, ಪರಮಋಷಿ ಮಂಡಲದ ಮಧ್ಯದಿ, ಪರಿಕಿಸುತ ಅಭಿನಮಿಸಿ ಭೀಷ್ಮನು ಮೊದಲಾದ ಹಾಡುಗಳು ಜನ್ಸಾಲೆಯವರ ತುಂಬುಕಂಠದಿಂದ ಕೇಳಿದ್ದು ಪ್ರೇಕ್ಷಕರನ್ನು ಸದಾ ಗುನುಗುನಿಸುವಂತೆ ಮಾಡಿತು.

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next