ಲಾಕ್‌ಡೌನ್‌ನಿಂದ ಎಲ್ಲಾ ಕ್ಷೇತ್ರಕ್ಕೂ ಪೆಟ್ಟು ಬಿದ್ದಿದೆ. ಇದಕ್ಕೆ ಸಿನಿಮಾರಂಗ ಹೊರತಲ್ಲ. ಚಿತ್ರಮಂದಿರಗಳೀಗ ಬಿಕೋ ಎನ್ನುತ್ತಿವೆ. ಪ್ರತಿಯೊಬ್ಬರೂ ಈಗ ಅಮೆಜಾನ್,ನೆಟ್ ಫ್ಲಿಕ್ಸ್ ಇನ್ನಿತರೆ ಡಿಜಿಟಲ್ ಫ್ಲಾಟ್‌ಫಾರ್ಮ್ ಮೊರೆ ಹೋಗಿ, ತಮ್ಮಿಷ್ಟದ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಮನರಂಜನೆ ಪಡೆಯುತ್ತಿದ್ದಾರೆ. ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವ ಮಂದಿ ಈಗಾಗಲೇ ಇವುಗಳ ಮೂಲಕವೇ ಹೊಸಬಗೆಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಚಿತ್ರ ನೋಡುತ್ತಿದ್ದಾರೆ. ಆ ಮೂಲಕ ತಮ್ಮ ಸಮಯವನ್ನೂ ಕಳೆಯುತ್ತಿದ್ದಾರೆ. ಹಾಗಾಗಿ, ಈ ಡಿಜಿಟಲ್ ಫ್ಲಾಟ್‌ಫಾರ್ಮ್ ಗೆ ಬೇಡಿಕೆ ಹೆಚ್ಚಿದೆ.
ಇಷ್ಟೆಲ್ಲಾ ಆಗಿದ್ದರೂ, ಈ ಓಟಿಟಿಗಳಲ್ಲಿ ಕನ್ನಡದ ಸಿನಿಮಾಗಳಾಗಲಿ, ಧಾರಾವಾಹಿಗಳಾಗಲಿ, ವೆಬ್‌ಸೀರಿಸ್‌ಗಳಾಗಲಿ ಹೆಚ್ಚಾಗಿ ಕಾಣಸಿಗಲ್ಲ. ಬೆರಳೆಣಿಕೆಯಷ್ಟು ಮಾತ್ರ ನೋಡಬಹುದಾಗಿದೆ. ಉಳಿದಂತೆ ಪರಭಾಷೆಯ ಚಿತ್ರಗಳು, ವೆಬ್‌ಸೀರಿಸ್‌ಗಳ ಅಬ್ಬರವೇ ಜಾಸ್ತಿ. ಈ ನಿಟ್ಟಿನಲ್ಲೀಗ ಕನ್ನಡದ ಎಲ್ಲಾ ಸಿನಿಮಾಗಳು, ಧಾರಾವಾಹಿಗಳು, ವೆಬ್ ಸೀರಿಸ್‌ಗಳು ಒಂದೇ ಓಟಿಟಿ ಅಡಿಯಲ್ಲಿ ಸಿಕ್ಕರೆ ಹೇಗೆ?
ಹೌದು, ಇಂಥದ್ದೊಂದು ಒಳ್ಳೆಯ ಯೋಚನೆಗೆ ಈಗಾಗಲೇ ಪ್ರಯತ್ನ ಶುರುವಾಗಿದೆ. ಇಷ್ಟರಲ್ಲೇ ಅಮೆಜಾನ್, ನೆಟ್ ಫ್ಲಿಕ್ಸ್ ಮಾದರಿಯಲ್ಲೇ ಪ್ರತ್ಯೇಕ ಓಟಿಟಿ ಶುರು ಮಾಡಿ, ಕನ್ನಡಕ್ಕೆ ಆದ್ಯತೆ ಕೊಡಬಾರದೇಕೆ ಎಂಬ ಚಿಂತನೆ ನಡೆದಿದ್ದು, ಸಾಕಷ್ಟು ಚರ್ಚೆಗಳು ಶುರುವಾಗಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಕೆಲವೇ ತಿಂಗಳಲ್ಲಿ ಈ ಶುಭ ಕಾರ್ಯಕ್ಕೆ ಚಾಲನೆ ಸಿಗಬಹುದು. ಅಂದಹಾಗೆ, ಈ ಕುರಿತಂತೆ ಈಗಾಗಲೇ ಆನ್‌ಲೈನ್ ಸಮೀಕ್ಷೆ ಕೂಡ ನಡೆದಿದೆ. ಇದಕ್ಕೆ ಚಾಲನೆ ನೀಡಬೇಕು ಎಂಬ ನಿಟ್ಟಿನಲ್ಲಿ ನಿರ್ದೇಶಕ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಅವರು, ಕನ್ನಡಕ್ಕೆ ಪ್ರತ್ಯೇಕ ಓಟಿಟಿಯ ಅಗತ್ಯತೆ ಬಗ್ಗೆ ತಮ್ಮ ಸಾಮಾಜಿಕ ತಾಣದಲ್ಲಿ ಬರೆದುಕೊಳ್ಳುವ ಮೂಲಕ ವಿಡಿಯೋದಲ್ಲಿ ಅದರ ಕುರಿತು ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾ ಹಾಗು ಧಾರಾವಾಹಿಗಳ ಕುರಿತಂತೆ ಆನ್‌ಲೈನ್ ಸಮೀಕ್ಷೆ ನಡೆಸಿರುವ ಅವರು, ಕ್ರೈಂ, ಆ್ಯಕ್ಷನ್, ಥ್ರಿಲ್ಲರ್ ಕಂಟೆಂಟ್ ಇರುವ ಸಿನಿಮಾ ಹಾಗು ವೆಬ್‌ಸೀರಿಸ್ ಮಾಡಿಕೊಡುವಂತೆ ಅಮೆಜಾನ್, ನೆಟ್ ಫ್ಲಿಕ್ಸ್ ಬೇಡಿಕೆ ಇಟ್ಟಿವೆ.
ಹೀಗಾಗಿ, ಕನ್ನಡದ ಕಂಟೆಂಟ್ ರೆಡಿ ಮಾಡಿ ಅವರಿಗೆ ಕೊಟ್ಟರೆ, ಅಲ್ಲಿ ಕನ್ನಡಕ್ಕೆ ಹೆಚ್ಚು ಪ್ರಾಧಾನ್ಯತೆ ಸಿಗಲ್ಲ. ಅದರ ಬದಲು, ಕನ್ನಡಕ್ಕೆ ಆದರದ್ದೇ ಆದ ಪ್ರತ್ಯೇಕ ಓಟಿಟಿ ಇದ್ದರೆ, ಇಲ್ಲಿನ ಹೊಸ ಸಿನಿಮಾಗಳಿಗೆ, ಹೊಸ ನಿರ್ದೇಶಕರಿಗೊಂದು ವೇದಿಕೆ ಕಲ್ಪಿಸಿದಂತಾಗುತ್ತದೆ ಎಂಬ ಅಭಿಪ್ರಾಯ ಅವರದು. ಅವರೀಗ ಇದಕ್ಕೊಂದು ಹೊಸ ಯೋಚನೆ ಮಾಡಿದ್ದಾರೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯ 0.2% ರಷ್ಟು ಜನರು ವರ್ಷಕ್ಕೆ 1 ಸಾವಿರ ರುಪಾಯಿ ನೀಡಿದರೆ, 12 ಸಿನಿಮಾ ತಯಾರಿಸಿ, ಉಚಿತವಾಗಿಯೇ ಜನರಿಗೆ ನೋಡಲು ಅವಕಾಶ ಕಲ್ಪಿಸಿಕೊಡಬಹುದು. ಇದರಿಂದ ಹಣ ಗಳಿಸಲೂಬಹುದು ಎಂದ ಯೋಚನೆ ಮಾಡಿದ್ದಾರೆ. ಇದರಿಂದ ಹೊಸ ಕಥೆಗಳಿಗೆ ಆವಕಾಶ ಸಿಗುತ್ತದೆ, ಹೊಸಬರಿಗೂ ಒಂದು ವೇದಿಕೆ ಸಿಗುತ್ತದೆ ಎಂಬ ಉದ್ದೇಶ ಅವರದು.
ಅವರ ಈ ಯೋಚನೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೆಂಬಲಿಸಿದ್ದಾರೆ. ಅದೇನೆ ಇರಲಿ, ಈ ಯೋಚನೆಯೇನೋ ಸರಿಯಾಗಿದೆ. ಆದಷ್ಟು ಬೇಗ ಅದು ಕಾರ್ಯಗತವಾದರೆ, ಕನ್ನಡ ಚಿತ್ರರಂಗದ ಮಾರ್ಕೆಟ್ ಇನ್ನಷ್ಟು ವಿಸ್ತಾರವಾಗುವುದರಲ್ಲಿ ಅನುಮಾನವಿಲ್ಲ. ಇದು ಹೊಸಬರಿಗೂ ಒಂದೊಳ್ಳೆಯ ಅವಕಾಶವೂ ಹೌದು.