ನವದೆಹಲಿ: ಓಟಿಟಿ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಒಂದಾದ ಅಮೆಜಾನ್ ಪ್ರೈಮ್ ತನ್ನ, ಒಂದು ತಿಂಗಳ ಕಾಲಾವಧಿಯ ಸಬ್ ಸ್ಕ್ರಿಫ್ಷನ್ ಪ್ಲ್ಯಾನ್ (ಚಂದಾದಾರಿಕೆ) ನನ್ನು ರದ್ದುಗೊಳಿಸಿದೆ. ಮಾತ್ರವಲ್ಲದೆ ಅಮೇಜಾನ್ ಪ್ರೈಮ್ ಟ್ರಯಲ್ ಪ್ಯಾಕ್ ಯೋಜನೆಯನ್ನೂ ಸ್ಥಗಿತಗೊಳಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಮೆಜಾನ್ ಪ್ರೈಮ್ ತಿಳಿಸಿದೆ. ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಆರ್ ಬಿಐ, ಪುನರಾವರ್ತಿತ ಆನ್ ಲೈನ್ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು ಧೃಡೀಕರಣದ ಅಂಶಗಳನ್ನು ಸೇರಿಸುವಂತೆ ಸೂಚನೆ ನೀಡಿತ್ತು. ಜೊತೆಗೆ ಸೆಪ್ಟೆಂಬರ್ 30ರ ಗಡುವನ್ನು ಕೂಡ ವಿಧಿಸಿತ್ತು.
ಅಮೆಜಾನ್ ತನ್ನ FAQ(Frequently asked questions) ಪೇಜ್ ಅನ್ನು ನವೀಕರಣಗೊಳಿಸಿದ್ದು, ಕೆಲವೊಂದು ಯೋಜನೆಗಳನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಹೊಸ ಮಾರ್ಗಸೂಚಿಯ ಪ್ರಕಾರ ಬ್ಯಾಂಕ್ ಗಳಿಗೆ ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳ ಮೂಲಕ ಮಾಡಲಾಗುವ ಹೊಸ ಸ್ವಯಂಚಾಲಿತ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ ಎಂದಿದೆ.
ಅಮೇಜಾನ್ ಪ್ರೈಮ್ ಒಂದು ತಿಂಗಳ ಚಂದಾದಾರಿಕೆ ಪಡೆಯಲು 129 ರೂ. ಪಾವತಿಸಬೇಕಾಗಿತ್ತು. ಇದೀಗ ಈ ಸೇವೆ ರದ್ದುಗೊಂಡಿದ್ದರಿಂದ, 3 ತಿಂಗಳ (329 ರೂ.) ಅಥವಾ ಒಂದು ವರ್ಷದ ಚಂದಾದಾರಿಕೆ (999 ರೂ.) ಪ್ಲ್ಯಾನ್ ಪಡೆಯಲು ಮಾತ್ರ ಅವಕಾಶವಿದೆ. ಏಪ್ರಿಲ್ 27, 2021ರಿಂದಲೇ ಹೊಸ ನೀತಿ ಅನ್ವಯವಾಗಲಿದ್ದು, ಹೊಸ ಚಂದಾದಾರಿಕೆ ಪಡೆಯಲಿಚ್ಚಿಸುವವರು ಫ್ರೀ ಟ್ರಯಲ್ ಹಾಗೂ ಮಾಸಿಕ ಚಂದಾದಾರರಾಗಲು ಸಾಧ್ಯವಿಲ್ಲ.