Advertisement

ಹಣಕ್ಕಾಗಿ ಜನ ಏನೆಲ್ಲ ಮಾಡುತ್ತಾರೆ?

09:03 AM May 22, 2019 | Hari Prasad |

ಮುಂಬೈ: ಇತ್ತೀಚೆಗೆ ನ್ಯೂಜಿಲೆಂಡ್‌ ವೇಗದ ಬೌಲರ್‌ ಜಿಮ್ಮಿ ನೀಶಮ್‌, ಐಪಿಎಲ್‌ ಫೈನಲ್‌ನಲ್ಲಿ ಎಂ.ಎಸ್‌. ಧೋನಿ ಔಟಾದ ಕ್ರಮವನ್ನು ವಿಶ್ಲೇಷಿಸಿ, ಭಾರತೀಯ ಅಭಿಮಾನಿಗಳಿಂದ ಕಟು ಟೀಕೆ ಎದುರಿಸಿದ್ದರು.

Advertisement

ಈಗ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಬ್ರಾಡ್‌ ಹಾಜ್‌ ಸರದಿ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಮೊಡವೆ ನಿವಾರಣೆ ಉತ್ಪನ್ನವೊಂದಕ್ಕೆ ಜಾಹೀರಾತು ನೀಡಿದ್ದನ್ನು ತಮ್ಮ ಟ್ವೀಟರ್‌ನಲ್ಲಿ ಹಾಕಿಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಹಾಜ್‌, ಹಣಕ್ಕಾಗಿ ಜನ ಏನೆಲ್ಲ ಮಾಡುತ್ತಾರೆ ಎಂದು ಟೀಕಿಸಿದ್ದರು. ಇದರ ಬೆನ್ನಲ್ಲೇ ಕೊಹ್ಲಿ ಅಭಿಮಾನಿಗಳು ಜೋರಾಗಿ ತಿರುಗಿಬಿದ್ದಿದ್ದಾರೆ. ಕಂಗಾಲಾದ ಹಾಜ್‌, ತನ್ನ ಹೇಳಿಕೆಯ ಅರ್ಥವೇ ಬೇರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಆಗಿದ್ದೇನು?: ವಿರಾಟ್‌ ಕೊಹ್ಲಿ ಮತ್ತು ಭಾರತ ಕ್ರಿಕೆಟ್‌ನ ಹೊಸ ತಾರೆ ರಿಷಭ್‌ ಪಂತ್‌ ಹಿಮಾಲಯ ಮೆನ್‌ ಎಂಬ ಉತ್ಪನ್ನಕ್ಕೆ ಜಾಹೀರಾತು ನೀಡಿದ್ದರು. ಅದನ್ನು ಟ್ವೀಟ್‌ ಮಾಡಿದ್ದ ಕೊಹ್ಲಿ, ಇದನ್ನು ನೋಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಹಾಜ್‌, ಹಣಕ್ಕಾಗಿ ಜನ ಏನೇನೆಲ್ಲ ಮಾಡುತ್ತಾರೆಂದು ನೋಡಿ ಅಚ್ಚರಿಯಾಗುತ್ತದೆ ಎಂದಿದ್ದರು.

ಕೂಡಲೇ ಕೊಹ್ಲಿ ಅಭಿಮಾನಿಗಳು ಹಾಜ್‌ಗೆ ಕಟುವಾದ ಪ್ರತಿಕ್ರಿಯೆ ನೀಡಿದರು. ಗೆಲುವಿಗಾಗಿ ಕೆಲವರು ಏನೇನೆಲ್ಲ ಮಾಡುತ್ತಾರೆಂದು ಅಚ್ಚರಿಯಾಗುತ್ತದೆ ಎಂದು ಒಬ್ಬರು ಕುಟುಕಿದರು.

Advertisement

ಅದು ಕಳೆದ ವರ್ಷ ಆಸ್ಟ್ರೇಲಿಯದ ಮೂವರು ಕ್ರಿಕೆಟಿಗರಾದ ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌, ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್, ದಕ್ಷಿಣ ಆಫ್ರಿಕಾದಲ್ಲಿ ಚೆಂಡು ವಿರೂಪ ಮಾಡಿ ನಿಷೇಧಕ್ಕೊಳಗಾಗಿದ್ದರ ಟೀಕೆಯಾಗಿತ್ತು. ಇನ್ನೊಬ್ಬರು ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಮತ್ತು ಇಂಗ್ಲೆಂಡ್‌ ಆಲ್‌ರೌಂಡರ್‌ ಬೆನ್‌ಸ್ಟೋಕ್ಸ್‌ ರಾಜಸ್ಥಾನ್‌ ರಾಯಲ್ಸ್‌ ತಂಡದ ಜಾಹೀರಾತೊಂದರಲ್ಲಿ ನರ್ತಿಸಿದ್ದನ್ನು ಟ್ವೀಟ್‌ ಮಾಡಿದ್ದಾರೆ.

ಅಷ್ಟು ಮಾತ್ರವಲ್ಲ ಆಸೀಸ್‌ ಕ್ರಿಕೆಟಿಗರು ಭಾರತೀಯರಿಗೆ ಸಂಬಂಧಿಸಿದ ಜಾಹೀರಾತಿನಲ್ಲಿ ಏಕೆ ಕುಣಿಯುತ್ತಾರೆಂದು ನನಗೆ ಅಚ್ಚರಿಯಾಗುತ್ತದೆ ಎಂದು ಟೀಕಿಸಿದ್ದಾರೆ. ಇದೆಲ್ಲ ಟೀಕೆಗಳಿಂದ ಬೆಚ್ಚಿಬಿದ್ದ ಹಾಜ್‌, ದಿಢೀರನೆ ತಮ್ಮ ಹೇಳಿಕೆಯನ್ನು ಬದಲಿಸಿದ್ದಾರೆ.

ಜನ ಪ್ರತಿಕ್ರಿಯೆ ನೀಡುವಾಗ ಎಷ್ಟು ಕ್ರೂರವಾಗಿರುತ್ತಾರೆಂದು ನೋಡಿ ನನಗೆ ಅಚ್ಚರಿಯಾಗಿದೆ. ಇದು ಬಹಳ ಋಣಾತ್ಮಕವಾಗಿದೆ. ನಾನು ಋಣಾತ್ಮಕ ಅರ್ಥದಲ್ಲಿ ಹೇಳಿಲ್ಲ. ನನಗೆ ಹಣ ನೀಡಿದರೂ, ಮಾಡುವುದು ಅದನ್ನೇ ಎಂದು ರಾಗ ಬದಲಿಸಿದ್ದಾರೆ.

ಯಾರು ಹಾಜ್‌?: ಬ್ರಾಡ್‌ ಹಾಜ್‌ ಆಸ್ಟ್ರೇಲಿಯದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌, ಅರೆಕಾಲಿಕ ಸ್ಪಿನ್ನರ್‌ ಕೂಡ ಹೌದು. ಈಗವರಿಗೆ 44 ವರ್ಷ. ಆಸ್ಟ್ರೇಲಿಯ ಪರ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತ ನೈಟ್‌ ರೈಡರ್ಸ್‌ ಪರ ಆಡಿದ್ದಾರೆ. ಕೆಲ ಐಪಿಎಲ್‌ ತಂಡಗಳಿಗೆ ತರಬೇತಿಯನ್ನೂ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next