Advertisement

T-ಟ್ವೆಂಟಿಯಲ್ಲಿ ಅಮೋಘ ಬೌಲಿಂಗ್‌ ದಾಖಲೆ- 7 ವಿಕೆಟ್‌ಗಳಿಗಾಗಿ ನೀಡಿದ್ದು ಕೇವಲ 8 ರನ್‌!

11:50 PM Jul 26, 2023 | Team Udayavani |

ಕೌಲಾಲಂಪುರ: ಹೆಸರೇ ಅರಿಯದ ಮಲೇಷ್ಯಾದ ಸೀಮ್‌ ಬೌಲರ್‌ ಸಯಾಜ್ರುಲ್‌ ಇದ್ರುಸ್‌ ಪುರುಷರ ಟಿ20 ಬೌಲಿಂಗ್‌ನಲ್ಲಿ ಅಮೋಘ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಚುಟುಕು ಮಾದರಿಯ ಕ್ರಿಕೆಟ್‌ ಪಂದ್ಯವೊಂದರಲ್ಲಿ 7 ವಿಕೆಟ್‌ ಉಡಾಯಿಸಿದ ವಿಶ್ವದ ಮೊದಲ ಬೌಲರ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ 7 ವಿಕೆಟ್‌ಗಳಿಗಾಗಿ ಇದ್ರುಸ್‌ ನೀಡಿದ್ದು ಕೇವಲ 8 ರನ್‌!

Advertisement

ಟಿ20 ವಿಶ್ವಕಪ್‌ ಏಷ್ಯಾ ಬಿ ವಿಭಾಗದ ಅರ್ಹತಾ ಸುತ್ತಿನ ಚೀನ ವಿರುದ್ಧದ ಪಂದ್ಯದಲ್ಲಿ 32 ವರ್ಷದ ಇದ್ರುಸ್‌ ಈ ಸಾಧನೆಗೈದರು. ಇದು ಅವರ 23ನೇ ಟಿ20 ಪಂದ್ಯವಾಗಿದೆ. ಎಲ್ಲ ವಿಕೆಟ್‌ಗಳನ್ನೂ ಅವರು ಬೌಲ್ಡ್‌ ಮೂಲಕ ಪಡೆದದ್ದು ಮತ್ತೂಂದು ವಿಶೇಷ. ಇದ್ರುಸ್‌ ಸಾಹಸದಿಂದ ಮಲೇಷ್ಯಾ 8 ವಿಕೆಟ್‌ಗಳಿಂದ ಗೆದ್ದು ಬಂತು. ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಚೀನ 11.2 ಓವರ್‌ಗಳಲ್ಲಿ 23 ರನ್ನಿಗೆ ಆಲೌಟ್‌ ಆಯಿತು. ಆರಂಭಕಾರ ಗುವೊ ಲೀ 7 ರನ್‌ ಹೊಡೆದರು. 6 ಆಟಗಾರರು ಸೊನ್ನೆ ಸುತ್ತಿದರು. ಮಲೇಷ್ಯಾ 4.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 24 ರನ್‌ ಮಾಡಿತು.

ಹಿಂದಿನ ಟಿ20 ಬೌಲಿಂಗ್‌ ದಾಖಲೆ ನೈಜೀರಿಯಾದ ಪೀಟರ್‌ ಅಹೊ ಹೆಸರಲ್ಲಿತ್ತು. ಅವರು 2021ರ ಸಿಯೆರಾ ಲಿಯೋನ್‌ ವಿರುದ್ಧ 5 ರನ್ನಿಗೆ 6 ವಿಕೆಟ್‌ ಉರುಳಿಸಿದ್ದರು.

ದೀಪಕ್‌ ಚಹರ್‌ ದಾಖಲೆ
ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ದೇಶಗಳ ಬೌಲಿಂಗ್‌ ದಾಖಲೆಯ ಯಾದಿಯ ಮುಂಚೂಣಿಯಲ್ಲಿ ದೀಪಕ್‌ ಚಹರ್‌ ಹೆಸರಿದೆ. ಅವರು 2019ರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 7 ರನ್ನಿತ್ತು 6 ವಿಕೆಟ್‌ ಉಡಾಯಿಸಿದ್ದರು. ಚಹರ್‌ ಸೇರಿದಂತೆ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 12 ಬೌಲರ್‌ಗಳು 6 ವಿಕೆಟ್‌ ಸಾಧನೆಗೈದಿದ್ದಾರೆ.

ವನಿತೆಯರೇ ಮೊದಲು!
ಟಿ20 ಕ್ರಿಕೆಟಿನ ಒಟ್ಟಾರೆ ಬೌಲಿಂಗ್‌ ದಾಖಲೆಗಳಲ್ಲಿ ನೆದರ್ಲೆಂಡ್ಸ್‌ ವನಿತಾ ತಂಡದ ಫ್ರೆಡ್ರಿಕ್‌ ಓವರ್‌ದಿಕ್‌ ಅಗ್ರಸ್ಥಾನ ಅಲಂಕರಿಸಿದ್ದಾರೆ. ಅವರು ಫ್ರಾನ್ಸ್‌ ವಿರುದ್ಧದ 2021ರ ಪಂದ್ಯದಲ್ಲಿ ಕೇವಲ 3 ರನ್‌ ನೀಡಿ 7 ವಿಕೆಟ್‌ ಕೆಡವಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next