ಸಿದ್ದಾಪುರ: ಅಮಾಸೆಬೈಲಿನಲ್ಲಿ ಬೆಳಕು ಮೂಡುವ ಮೂಲಕ ಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್ ಯೋಜನೆಯ ಕಲ್ಪನೆ ಇಲ್ಲಿ ಸಾಕಾರವಾಗಿದೆ. ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಎ.ಜಿ. ಕೊಡ್ಗಿ ಅವರು ಪ್ರಕೃತಿಯನ್ನು ನಿಯಂತ್ರಣ ಮಾಡುವ ಸೂರ್ಯ ದೇವನ ಶಾಖವನ್ನು ಬಳಸಿಕೊಂಡು ಗ್ರಾಮಕ್ಕೆ ಸೋಲಾರ್ ಬೆಳಕು ನೀಡಿದ್ದಾರೆ. ಇದು ದೇಶಕ್ಕೇ ಮಾದರಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ಣಾಟಕ ಬ್ಯಾಂಕ್, ಅಮಾಸೆಬೈಲು ಗ್ರಾ.ಪಂ., ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಉಡುಪಿ ಜಿಲ್ಲಾಡಳಿತದ ಜಂಟಿ ಆಶ್ರಯದಲ್ಲಿ ಅಮಾಸೆಬೈಲು ಗ್ರಾಮದಲ್ಲಿ ಅನುಷ್ಠಾನಗೊಂಡಿರುವ ಸೋಲಾರ್ ದೀಪಗಳ ಕೊಡುಗೆ ಸಮಾರೋಪ ಸಮಾರಂಭವನ್ನು ಜೂ. 9ರಂದು ಅಮಾಸೆಬೈಲು ಸರಕಾರಿ ಪ್ರೌಢ ಶಾಲೆಯ ಮೈದಾನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಸೋಲಾರ್ ಯೋಜನೆಯಿಂದಾಗಿ ಗ್ರಾಮದ ಪ್ರತಿ ಮನೆಯಲ್ಲೂ ಬೆಳಕು ಮೂಡಿದೆ. ಬೆಳಕು ಅಭಿವೃದ್ಧಿಯ ಸಂಕೇತ. ಸೋಲಾರ್ ಮೂಲಕ ಅಮಾಸೆಬೈಲು ಆಭಿವೃದ್ಧಿ ಹೊಂದಿದೆ ಎಂದು ತಿಳಿಸಿದರು. ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಕೊಡ್ಗಿ ಅವರು ಸೂರ್ಯ ಶಕ್ತಿಯ ಮೂಲಕ ರಾತ್ರಿಯಲ್ಲೂ ಗ್ರಾಮ ಬೆಳಗುವಂತೆ ಮಾಡಿದ್ದಾರೆ. ಕೊಡ್ಗಿ ಅವರ ಸಮಾಜಿಕ ಸೇವೆ ಬಡವರ ಕಲ್ಯಾಣದ ಉದ್ದೇಶ ಹೊಂದಿದೆ ಎಂದರು.
ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮಹಾಬಲೇಶ್ವರ ಭಟ್ ಆಧ್ಯಕ್ಷತೆ ವಹಿಸಿದ್ದರು. ಸೆಲ್ಕೋ ಇಂಡಿಯಾದ ಅಧ್ಯಕ್ಷ ಡಾ| ಎಚ್. ಹರೀಶ್ ಹಂದೆ ಅವರು ದಿಕ್ಸೂಚಿ ಭಾಷಣ ಮಾಡಿದರು. ವಿಧಾನಪರಿಷತ್ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಯೋಜನೆ ಕುರಿತು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಅಧ್ಯಕ್ಷ ಅನಂತ ಕೃಷ್ಣ, ಎಸ್‌ಕೆಡಿಆರ್‌ಡಿಪಿ ಕಾರ್ಯನಿರ್ವಹಣಾಧಿಕಾರಿ ಡಾ| ಎಲ್.ಎಚ್. ಮಂಜುನಾಥ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಅಮಾಸೆಬೈಲು ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಉಳ್ಳೂರು- ಮಚ್ಚಟ್ಟು ಮತ್ತು ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಟಿ. ಚಂದ್ರಶೇಖರ ಶೆಟ್ಟಿ ಮತ್ತು ಮಂಜಯ್ಯ ಶೆಟ್ಟಿ, ಮಾಜಿ ಅಧ್ಯಕ್ಷ ನರಸಿಂಹ ಶೆಟ್ಟಿ ಬೊಳ್ಮನೆ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ತಿಮ್ಮಪ್ಪ, ಪಿಡಿಒ ಸತೀಶ್ ನಾಯ್ಕ ಉಪಸ್ಥಿತರಿದ್ದರು.
ಸಮ್ಮಾನ
ಪೇಜಾವರ ಶ್ರೀಗಳು ಡಾ| ಹೆಗ್ಗಡೆ ಅವರನ್ನು ಸಮ್ಮಾನಿಸಿದರು. ಡಾ| ಹೆಗ್ಗಡೆ ಅವರಿಗೆ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದಲೂ ಸಮ್ಮಾನ ನಡೆಯಿತು. ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್‌ನ ಪರವಾಗಿ ಎ.ಜಿ. ಕೊಡ್ಗಿ ಅವರು ಪೇಜಾವರ ಶ್ರೀಗಳನ್ನು ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಮ್ಮಾನಿಸಿದರು. ಎ.ಜಿ. ಕೊಡ್ಗಿ ಅವರು ತಮ್ಮ ತಂದೆ ಕೃಷ್ಣರಾಯ ಕೊಡ್ಗಿ ಅವರಹೆಸರಿನಲ್ಲಿ ಅಮಾಸೆಬೈಲು ಪ್ರೌಢಶಾಲೆಯಲ್ಲಿ ಉತ್ತಮ ಆಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದರು.ಎ.ಜಿ. ಕೊಡ್ಗಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸತ್ಯನಾರಾಯಣ ಭಟ್ ರಟ್ಟಾಡಿ ನಿರೂಪಿಸಿದರು. ಕುಂದಾಪುರ ತಾ| ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮುರಳೀಧರ ಶೆಟ್ಟಿ ವಂದಿಸಿದರು.