Advertisement
ಅಮರನಾಥ ಗುಹೆಯ ಬಳಿ ಮೇಘ ಸ್ಫೋಟದಿಂದ ಪ್ರವಾಹ ಉಂಟಾಗಿ ಯಾತ್ರೆಗೆ ತೆರಳಿದ್ದ 350 ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಯಾತ್ರೆಗೆ ತೆರಳುವ ರಸ್ತೆಯ ಬೇರೆ ಬೇರೆ ಭಾಗಗಳಲ್ಲಿ ರಾಜ್ಯದ 350 ಯಾತ್ರಿಗಳು ಪರದಾಡುತ್ತಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗಾಗಿ ರಾಜ್ಯ ಸರ್ಕಾರ ಆರಂಭಿಸಿರುವ ಸಹಾಯವಾಣಿಗೆ ಈವರೆಗೆ ಯಾತ್ರೆಯಲ್ಲಿ ಸಿಕ್ಕಿಹಾಕಿಕೊಂಡವರ ಕುಟುಂಬಸ್ಥರಿಂದ 48 ಕರೆಗಳು ಬಂದಿದೆ. ಅಲ್ಲಿ ಸಿಲುಕಿಕೊಂಡವರಿಗೆ ನೆಟ್‌ವರ್ಕ್ ಸಮಸ್ಯೆಯಿಂದ ಕರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.
ಕ್ಷಣ-ಕ್ಷಣಕ್ಕೊಂದು ಮಾದರಿಯ ವಾತಾವರಣ, ರಸ್ತೆಯುದ್ದಕ್ಕೂ ಅಲ್ಲಲ್ಲಿ ಕುಸಿತಗಳು, ಜೋರಾದ ಮಳೆ, ಕುದುರೆ ಸವಾರಿ ಮಾಡಲಾಗದೇ ನಡೆದುಕೊಂಡೇ ಹೋಗುವ ಅನಿವಾರ್ಯತೆ, ಜೀವ ಕೈಯಲ್ಲಿ ಹಿಡಿದು ಹೋಗುವ ಪರಿಸ್ಥಿತಿ…. ಇದು ಅಮರನಾಥ ಯಾತ್ರೆಗೆ ಹೋಗಿ ಮರಳಿದ ಕನ್ನಡಿಗರ ಅಭಿಪ್ರಾಯ.
Related Articles
Advertisement
ಮೇಘಸ್ಫೋಟಗೊಂಡಾಗ ನಮ್ಮ ಕಣ್ಣೆದುರಿಗೆ ಹಲವು ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ. ನಾವು ಪವಾಡ ಸದೃಶವಾಗಿ ಕೂದಲೆಳೆ ಅಂತರದಲ್ಲಿ ಬದುಕುಳಿದಿದ್ದೇವೆ. ಪ್ರವಾಹಕ್ಕೆ ಸಿಲುಕಿ ನಮ್ಮ ಮುಂದಿದ್ದ ಬೆಟ್ಟ, ಗುಡ್ಡಗಳು ಸಂಪೂರ್ಣವಾಗಿ ಕುಸಿದು ನೆಲಕ್ಕುರುಳಿದ್ದವು. ಇದೀಗ ಭಾರತೀಯ ಸೇನೆ, ಎನ್‌ಡಿಆರ್‌ಎಫ್ ತಂಡ ನಮಗೆ ಆಶ್ರಯ ಒದಗಿಸಿದ್ದು, ಸದ್ಯ ನಮ್ಮ ತಂಡ ಸುರಕ್ಷಿತವಾಗಿದೆ ಎಂದು ಯಾತ್ರೆಯಲ್ಲಿ ಸಿಲುಕಿಕೊಂಡಿರುವ ಯಾತ್ರಿಗಳ ತಂಡ ತಿಳಿಸಿದೆ.
ಯಾತ್ರೆಗೆ ತೆರಳಿ ಪಾರಾಗಿ ಬಂದ ಬೆಂಗಳೂರು ಬಾಣಸವಾಡಿಯ ನಿವಾಸಿ ಗಾಯತ್ರಿ ಎಂಬುವವರು ತಮ್ಮ ಕರಾಳ ಅನುಭವವನ್ನು ಉದಯವಾಣಿ ಜತೆಗೆ ಹಂಚಿಕೊಂಡಿದ್ದಾರೆ.
ಬೆಂಗಳೂರಿನಿಂದ ಜು.4ಕ್ಕೆ 48 ಮಂದಿಯ ತಂಡದ ಜತೆಗೆ ಅಮರನಾಥ ಯಾತ್ರೆಗೆ ಹೊರಟಿದ್ದೆವು. ಜು.5ರಂದು ಬಾಲ್ಟಲ್‌ನಿಂದ ಅಮರನಾಥ ಯಾತ್ರೆಗೆ ಕುದುರೆ ಮೇಲೆ ಸವಾರಿ ಮಾಡಿಕೊಂಡು ಹೋಗಿ ಬರುವ ವೇಳೆ ನಡು ರಸ್ತೆಯಲ್ಲಿ ಗುಡ್ಡಕುಸಿತ ಉಂಟಾಗಿ ಮುಂದೆ ಸಾಗಲಾಗದೇ ಪರದಾಡಬೇಕಾಗಿತ್ತು. ಕ್ಷಣಕ್ಕೊಂದು ಬಾರಿ ಇಡೀ ವಾತಾವರಣವೇ ಬದಲಾವಣೆ ಯಾಗುತ್ತಿತ್ತು. ನನ್ನ ಕಣ್ಣ ಮುಂದೆಯೇ ಹಲವು ಮಂದಿ ಗುಡ್ಡದಂತಹ ಪ್ರದೇಶದಿಂಧ ಕೆಳಗೆ ಬಿದ್ದು ಗಾಯಮಾಡಿಕೊಂಡಿದ್ದರು. ಕೂಡಲೇ ಎನ್‌ಡಿಆರ್‌ಎಫ್ ಹಾಗೂ ಭಾರತೀಯ ಸೇನಾ ಪಡೆ ನಾವಿದ್ದಲ್ಲಿಗೆ ಬಂದು ನಮ್ಮನ್ನು ಸುರಕ್ಷಿತ ಪ್ರದೇಶಕ್ಕೆ ಕರೆದುಕೊಂಡು ಹೋಗಿತ್ತು. 20 ಕಿ.ಮೀಗೂ ಹೆಚ್ಚು ದೂರ ಕಾಲ್ನಡಿಗೆಯಲ್ಲೇ ಬರಬೇಕಾಯಿತು. ನಾವು ಬಂದಿದ್ದ ಕುದುರೆಗಳು ಮುಂದೆ ಸಾಗಲಾಗದೇ ಅಲ್ಲೇ ನಿಂತಿದ್ದು, ಅವುಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ.
ಊಟ, ನಿದ್ದೆಯ ಪರಿವೇ ಇಲ್ಲದೇ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಊರು ತಲುಪಿದರೆ ಸಾಕು ಎನ್ನಿಸಿತ್ತು. ಜೋರಾದ ಪ್ರವಾಹದಿಂದ ಅದೃಷ್ಟವಶಾತ್ ಪಾರಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಾ ಕೊನೆಗೂ ನಮ್ಮ ತಂಡ ಜು.7ರಂದು ಶ್ರೀನಗರಕ್ಕೆ ಮುಟ್ಟಿತ್ತು. ನಂತರ ಶ್ರೀನಗರದಿಂದ ದೆಹಲಿಗೆ ಬಂದು ಜು.8ರಂದು ತಡರಾತ್ರಿ ತಾಯ್ನಾಡಿಗೆ ಬಂದಿದ್ದೇವೆ ಎಂದು ಗಾಯತ್ರಿ ತಿಳಿಸಿದ್ದಾರೆ.
ಅಮರ ನಾಥ್ ಯಾತ್ರೆ ಮುಗಿಸಿ ಬಂದಿರುವ ನಾಗರಾಜ್ ಸೆಲ್ವನಾಥ್ ಮಾತನಾಡಿ, ನಾವು 16 ಜನ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಹೋಗಿದ್ದೆವು. ಜು.6ರಂದು ನಮಗೆ ಬಾಲ್ಟಾ ಪ್ರಯಾಣಕ್ಕೆ ಅನುಮತಿ ಸಿಕ್ಕಿತ್ತು. ಆದರೆ, ಜು.5ನೇ ತಾರೀಕು ವಾತವರಣ ಏರುಪೇರಿನಿಂದ ಯಾತ್ರೆ ಕ್ಯಾನ್ಸಲ್ ಆಗಿದೆ ಎಂದಿದ್ದರು. ನಂತರ ಇದ್ದಕ್ಕಿದ್ದಂತೆ ಯಾತ್ರೆಗೆ ಹೊರಡಿ ವಾತವರಣ ಸರಿಯಾಗಿದೆ ಎಂದರು. ಹೇಗೋ ನಾವು ಜು.7ರಂದು ಮಧ್ಯಾಹ್ನ ದರ್ಶನ ಮಾಡಿದ್ದೆವು. ನಂತರ ಅಲ್ಲಿಂದ ಹೊರಟೆವು. ನಾವು ಹೊರಟ ನಂತರ ಸಂಜೆ ಅಲ್ಲಿ ಬ್ಲಾಸ್ಟ್ ಆಗಿದೆ.
ಕೆಲವೇ ನಿಮಿಷದಲ್ಲಿ ನಾವು ಅಪಘಾತದಿಂದ ತಪ್ಪಿಸಿಕೊಂಡಿದ್ದೇವೆ. ಪ್ರವಾಹ ಬಂದಿರುವ ಜಾಗದಲ್ಲಿ ನಾವು ನಮ್ಮ ಸಾಮಾಗ್ರಿಗಳನ್ನು ಇಟ್ಟು ದರ್ಶನಕ್ಕೆ ಹೋಗಿದ್ದೆವು. ಇದೀಗ ಅದೇ ಸ್ಥಳದಲ್ಲಿ ಪ್ರವಾಹ ಆಗಿರೋದು ನೋಡಿದರೆ ಭಯ ಆಗುತ್ತದೆ. ದೇವರ ಅನುಗ್ರಹದಿಂದ ಸುರಕ್ಷಿತವಾಗಿ ಬಂದಿದ್ದೇವೆ.
ಅಮರನಾಥ ಯಾತ್ರೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಕೆಲ ಕನ್ನಡಿಗರು ರಕ್ಷಣೆಗಾಗಿ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಅಲ್ಲಿನ ಸೇನೆ, ಎನ್‌ಡಿಆರ್‌ಎಫ್, ಐಟಿಬಿಪಿ, ಸಿಆರ್‌ಪಿಎಫ್, ಬಿಎಸ್‌ಫ್ ಸೇರಿ ಇನ್ನೀತರ ತಂಡಗಳು ಜಂಟಿಯಾಗಿ ಕಾರ್ಯಾಚರಣೆಯಲ್ಲಿ ತೊಡಗಿದೆ. ರಕ್ಷಣಾ ಕಾರ್ಯದಲ್ಲಿ ತೊಡಗಿರುವವರ ಜತೆಗೆ ನಮ್ಮ ತಂಡ ಸಂಪರ್ಕದಲ್ಲಿದೆ.-ಮನೋಜ್ ರಾಜನ್, ಆಯುಕ್ತ, ಕೆಎಸ್‌ಡಿಎಂಎ ಯಾತ್ರೆಯಲ್ಲಿ ಸಿಲುಕಿಕೊಂಡವರು ಸಹಾಯವಾಣಿಗೆ ಕರೆ ಮಾಡಿ ಸಹಾಯಕ್ಕಾಗಿ ಸಂಪರ್ಕಿಸಬಹುದಾಗಿದೆ.
*ಎನ್‌ಡಿಆರ್‌ಎಫ್-011-2343852,001-23438253,
*ಕಾಶ್ಮೀರ್ ಡಿವಿಜನಲ್ ಹೆಲ್ಪ್ ಲೈನ್- 0194-2496240
*ಶೆನ್ ಬೋರ್ಡ್ ಹೆಲ್ಪ್ ಲೈನ್- 0194-2313149
*ಪೊಲೀಸ್ ಕಂಟ್ರೋಲ್ ರೂಂ-9596777669, 9419051940, 01932225870, 01932222870,
*ಜಂಟಿ ಪೊಲೀಸ್ ನಿಯಂತ್ರಣ ಕೊಠಡಿ ಪಹಲ್ಗಾಮ್-9596779039, 9797796217, 01936243233, 01936243018.
ಕರ್ನಾಟಕ ಎಮರ್ಜೆನ್ಸಿ ಆಪರೇಷನ್ ಸೆಂಟರ್-080 1070, 22340676.