ಆಳಂದ: ತಾಲೂಕಿನಲ್ಲಿ ಸತತವಾಗಿ ಒಂದೂವರೆ ತಿಂಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಮರ್ಜಾ ಅಣೆಕಟ್ಟೆ ಹಾಗೂ ಸಣ್ಣ ನೀರಾವರಿ ಇಲಾಖೆಯ 35 ಕೆರೆಗಳು ಶೇ.90ರಷ್ಟು ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲೂ ಪ್ರವಾಹ ಉಕ್ಕಿ ಹರಿಯುವ ಸಾಧ್ಯತೆಯಿದೆ. ನದಿದಂಡೆಯ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮರ್ಜಾ ಅಣೆಕಟ್ಟೆ: ಮಧ್ಯಮ ನೀರಾವರಿ ಇಲಾಖೆಯ ಅಮರ್ಜಾ ಅಣೆಕಟ್ಟೆ ಶೇ.90 ಭರ್ತಿಯಾಗಿದ್ದು, ಒಳಹರಿವು ಹೆಚ್ಚಾದಂತೆ ಗೇಟ್‌ಗಳಿಂದ ನೀರು ಹೊರಗೆ ಬಿಡಲಾಗುತ್ತಿದೆ. ಸೋಮವಾರ ಅಣೆಕಟ್ಟೆಯ ಒಳಹರಿವು ಹೆಚ್ಚಾಗಿದ್ದರಿಂದ ಮಂಗಳವಾರ ಬೆಳಗಿನ ಜಾವದಿಂದ ಎರಡು ಗೇಟ್ ಮೂಲಕ 600 ಕ್ಯೂಸೆಕ್ ನೀರನ್ನು ಹೊರಗೆ ಹರಿಬಿಡಲಾಗುತ್ತಿದೆ. ಆದ್ದರಿಂದ ನದಿ ದಂಡೆ ಜನರು ಸುರಕ್ಷಿತ ಸ್ಥಳಕ್ಕೆ ತೆರಳಿ ಮುಂಜಾಗ್ರತೆ ವಹಿಸಬೇಕೆಂದು ಅಣೆಕಟ್ಟೆ ಎಂಜಿನಿಯರ್ ಮಲ್ಲಿಕಾರ್ಜುನ ತಿಳಿಸಿದ್ದಾರೆ.
35ಕೆರೆ ಭರ್ತಿ: ಸಣ್ಣ ನೀರಾವರಿ ಇಲಾಖೆಯ ತಾಲೂಕಿನ 17ಜಿನಗು ಕೆರೆ, ನೀರಾವರಿಯಂತಹ 18ದೊಡ್ಡ ಕೆರೆ ಸೇರಿ 35 ಕೆರೆಗಳಿಗೆ ಒಳಹರಿವು ಹೆಚ್ಚಿ ವಾರದಿಂದ ಈಚೆಗೆ ಭರ್ತಿಯಾಗಿದೆ. ಸಾಲೇಗಾಂವ, ಮಟಕಿ, ಹೊನ್ನಳ್ಳಿ, ತಡಕಲ್, ಕೆರೆಗಳು ಭರ್ತಿಯಾಗಿವೆ. ಕೆರೆಗಳ ಪರಿಸ್ಥಿತಿ ಮೇಲೆ ನಿಗಾ ವಹಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ಶಾಂತಪ್ಪ ಜಾಧವ ತಿಳಿಸಿದ್ದಾರೆ.
ಬೆಳೆ ಹಾನಿ ಸಮೀಕ್ಷೆ: ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಸಿಬ್ಬಂದಿ ಜಂಟಿಯಾಗಿ ನೆಲಕಚ್ಚಿದ ಮುಂಗಾರಿನ ಬಿತ್ತನೆಯ ಬೆಳೆ ಹಾನಿ ಸಮೀಕ್ಷೆ ಆರಂಭಿಸಿದ್ದಾರೆ. ಅಧಿಕಾರಿಗಳು ಗ್ರಾಮಕ್ಕೆ ಅಥವಾ ಹೊಲಕ್ಕೆ ಬಂದಾಗ ರೈತರು ತಮ್ಮ ಬೆಳೆ ಹಾನಿ ಮಾಹಿತಿ ನೀಡಬೇಕೆಂದು ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ತಿಳಿಸಿದ್ದಾರೆ.
ವಾಡಿಕೆಗಿಂತ ಹೆಚ್ಚು ಮಳೆ: ಆಳಂದ ತಾಲೂಕಿನಲ್ಲಿ ಆಗಸ್ಟ್ ತಿಂಗಳಲ್ಲಿ 39.2ಮಿ. ಮೀ ಮಳೆಯಾಗಬೇಕಿತ್ತು. ಆದರೆ 78.9ಮಿ. ಮೀ ಮಳೆಯಾಗಿದೆ. ಇಡೀ ತಾಲೂಕಿನಲ್ಲಿ ಶೇ.101ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.