Advertisement

ಕ್ಯಾಪ್ಟನ್‌-ಬಿಜೆಪಿ ಮೈತ್ರಿ ಫಿಕ್ಸ್‌;  ರಂಗೇರಿದ ಪಂಜಾಬ್‌ ಕಣ

08:32 PM Dec 17, 2021 | Team Udayavani |

ನವದೆಹಲಿ: ಪಂಜಾಬ್‌ ಮಾಜಿ ಮುಖ್ಯಮಂತ್ರಿ ಕ್ಯಾ. ಅಮರೀಂದರ್‌ ಸಿಂಗ್‌ ಅವರ ಪಂಜಾಬ್‌ ಲೋಕ ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದಾಗಿ ಬಿಜೆಪಿ ಶುಕ್ರವಾರ ಘೋಷಿಸಿದೆ. ಈ ಮೂಲಕ ಈ ಬಾರಿಯ ಪಂಜಾಬ್‌ ವಿಧಾನಸಭೆ ಚುನಾವಣಾ ಕಣ ಮತ್ತಷ್ಟು ರಂಗೇರಿದಂತಾಗಿದೆ.

Advertisement

7 ಸುತ್ತುಗಳ ಮಾತುಕತೆಯ ಬಳಿಕ ಶುಕ್ರವಾರ ಬಿಜೆಪಿ ರಾಜ್ಯ ಉಸ್ತುವಾರಿ ಗಜೇಂದ್ರ ಸಿಂಗ್‌ ಶೇಖಾವತ್‌ ಅವರು “ಮೈತ್ರಿ’ ಘೋಷಣೆ ಮಾಡಿದ್ದಾರೆ. ಸದ್ಯದಲ್ಲೇ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಯಲಿದೆ ಎಂದೂ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್‌ನಿಂದ ಹೊರಬಂದು ಹೊಸ ಪಕ್ಷ ಸ್ಥಾಪಿಸಿರುವ ಕ್ಯಾ. ಅಮರೀಂದರ್‌ ಅವರು ಟ್ವೀಟ್‌ ಮೂಲಕ ಮೈತ್ರಿಯನ್ನು ಅಧಿಕೃತಗೊಳಿಸಿದ್ದು, “ಚುನಾವಣಾ ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ’ ಎಂದಿದ್ದಾರೆ. ಈ ಹಿಂದೆಯೇ ಅವರು ಸುಖ್‌ದೇವ್‌ ಸಿಂಗ್‌ ಧಿಂಡ್ಸಾ ಅವರ ಎಸ್‌ಎಡಿ ಸಂಯುಕ್ತ ಪಕ್ಷದೊಂದಿಗೂ ಮೈತ್ರಿ ಘೋಷಿಸಿದ್ದರು.

ಅಲ್ಲದೇ, ಈ ಹಿಂದೆ ಸುದ್ದಿವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕ್ಯಾ. ಅಮರೀಂದರ್‌ ಅವರು, “ನನ್ನ ಪರ ಪ್ರಧಾನಿ ಮೋದಿ ಅವರು ಪ್ರಚಾರ ಮಾಡಬೇಕೆಂದು ಬಯಸುತ್ತೇನೆ. ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಪರ ನಾನು ಪ್ರಚಾರ ಮಾಡುತ್ತೇನೆ’ ಎಂದಿದ್ದರು.

ಇದನ್ನೂ ಓದಿ:ಕೊರಟಗೆರೆ: ಕರಡಿ ಕೊಂದು ತಿಂದ 6 ಮಂದಿ ಆರೋಪಿಗಳ ಬಂಧನ

Advertisement

ಜ.ರಾವತ್‌ ಗ್ರಾಮದಿಂದ ಕಾಂಗ್ರೆಸ್‌ ಯಾತ್ರೆ
ಹೆಲಿಕಾಪ್ಟರ್‌ ದುರಂತದಲ್ಲಿ ಇತ್ತೀಚೆಗೆ ಹುತಾತ್ಮರಾದ ರಕ್ಷಣಾ ಪಡೆಗಳ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಅವರ ಗ್ರಾಮದಿಂದ ಮೂರು ದಿನಗಳ ಯಾತ್ರೆ ಕೈಗೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ. ಜ.ರಾವತ್‌ ಅವರ ಸ್ಮರಣಾರ್ಥ ಉತ್ತರಾಖಂಡದ ಅವರ ಹುಟ್ಟೂರಿನಿಂದಲೇ 20 ಅಥವಾ 21ರಿಂದ ಯಾತ್ರೆ ನಡೆಸಲಾಗುವುದು ಎಂದು ಕಾಂಗ್ರೆಸ್‌ ಪ್ರಚಾರ ಉಸ್ತುವಾರಿ ಹರೀಶ್‌ ರಾವತ್‌ ಹೇಳಿದ್ದಾರೆ. ಜತೆಗೆ, ಎಲ್ಲ ಹುತಾತ್ಮರ ಗ್ರಾಮಗಳಲ್ಲೂ “ವೀರ ಗ್ರಾಮ ಪರಿಕ್ರಮ ಯಾತ್ರೆ’ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.

ಅಮೇಠಿ, ರಾಯ್‌ಬರೇಲಿಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲ್ಲ
ಉತ್ತರಪ್ರದೇಶದ ಎಲ್ಲ 403 ಅಸೆಂಬ್ಲಿ ಕ್ಷೇತ್ರಗಳಲ್ಲೂ ನಮ್ಮ ಪಕ್ಷ ಸ್ಪರ್ಧಿಸಲಿದ್ದು, ಈ ಬಾರಿ ಅಮೇಠಿ ಮತ್ತು ರಾಯ್‌ಬರೇಲಿಯನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖೀಲೇಶ್‌ ಯಾದವ್‌ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ರಾಯ್‌ಬರೇಲಿಯಲ್ಲಿ ತಮ್ಮ ವಿಜಯ ಯಾತ್ರೆಯ 7ನೇ ಹಂತಕ್ಕೆ ಚಾಲನೆ ನೀಡಿ ಮಾತನಾಡಿದ ಅಖೀಲೇಶ್‌, ಲೋಕಸಭೆ ಚುನಾವಣೆ ವೇಳೆ ಪರಸ್ಪರ ಗೌರವ ಹಾಗೂ ಸೌಜನ್ಯದ ಸಂಕೇತವಾಗಿ ಎಸ್‌ಪಿ ಮತ್ತು ಕಾಂಗ್ರೆಸ್‌ ಕೆಲವು ಕ್ಷೇತ್ರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾ ಬಂದಿವೆ. ಆದರೆ ಇದು ವಿಧಾನಸಭೆ ಚುನಾವಣೆ. ಎಲ್ಲ ಕ್ಷೇತ್ರಗಳಲ್ಲೂ ನಾವು ಸ್ಪರ್ಧಿಸಿ, ಮುಂದಿನ ಸರ್ಕಾರ ರಚಿಸುತ್ತೇವೆ ಎಂದಿದ್ದಾರೆ.

ಕೆಲವು ಜಾತಿಗಳಿಗಾಗಿ ಕೆಲಸ ಮಾಡಿದ್ದ ಪ್ರತಿಪಕ್ಷಗಳು
ಉತ್ತರಪ್ರದೇಶದ ಲಕ್ನೋದಲ್ಲಿ ಶುಕ್ರವಾರ ಮಿತ್ರಪಕ್ಷ ನಿಶಾದ್‌ ಪಕ್ಷದೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು “ಸರ್ಕಾರ್‌ ಬನಾವೋ, ಅಧಿಕಾರ್‌ ಪಾವೋ’ ರ‍್ಯಾಲಿ ನಡೆಸಿದ್ದಾರೆ. ಈ ವೇಳೆ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ ಅವರು, ಪ್ರತಿಪಕ್ಷಗಳ ಸರ್ಕಾರಗಳು ಉತ್ತರಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದಾಗ ಕೆಲವೇ ಕೆಲವು ಜಾತಿಗಳ ಪರವಾಗಿ ಮಾತ್ರ ಕೆಲಸ ಮಾಡಿದ್ದವು ಎಂದು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಅವರು ಮಾತ್ರ ಎಲ್ಲ ಹಿಂದುಳಿದ ವರ್ಗಗಳಿಗಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರಿಗೆ ಜನರ ಹಿತಾಸಕ್ತಿಯೇ ಮುಖ್ಯ ಎಂದೂ ಶಾ ಹೇಳಿದ್ದಾರೆ.

ಗೋವಾದಲ್ಲಿ ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಜನರ ಒಪ್ಪಿಗೆಯಿಲ್ಲದೇ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವುದಿಲ್ಲ. ನಮ್ಮದು ಪ್ರಾಮಾಣಿಕ ಪಕ್ಷವಾಗಿದೆ.
– ಅರವಿಂದ ಕೇಜ್ರಿವಾಲ್‌, ಆಪ್‌ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next