Advertisement

ಆಡಳಿತ ವಿರೋಧಿ ಅಲೆಯೇರಿ ದಡ ಹತ್ತಿದ ಅಮರಿಂದರ್‌!

03:45 AM Mar 12, 2017 | Harsha Rao |

-ಪಂಜಾಬ್‌ನಲ್ಲಿ ಅಮರಿಂದರ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ಗೆ ಭಾರೀ ಜಯ
-ಆಡಳಿತ ವಿರೋಧಿ ಅಲೆಗೆ ಕೊಚ್ಚಿ ಹೋದ ಶಿರೋಮಣಿ-ಬಿಜೆಪಿ ಸರ್ಕಾರ
-ಸೋತರೂ ಕುಗ್ಗದ ಆಮ್‌ ಆದ್ಮಿ ಪಕ್ಷಕ್ಕೆ 2ನೇ ಸ್ಥಾನ, ಮೂಡಿದ ಭರವಸೆ

ಚಂಡೀಗಢ: ಪಂಜಾಬ್‌ನಲ್ಲಿ ಬೀಸಿದ ಆಡಳಿತ ವಿರೋಧಿ ಅಲೆಗೆ ಶಿರೋಮಣಿ ಅಕಾಲಿದಳ-ಬಿಜೆಪಿ ನೇತೃತ್ವದ ಸಮ್ಮಿಶ್ರ ನೇತೃತ್ವದ ಸಮ್ಮಿಶ್ರ ಸರ್ಕಾರ ಕೊಚ್ಚಿಕೊಂಡು ಹೋಗಿದೆ. ಮತ್ತೂಂದು ಕಡೆ ಮೊದಲ ಬಾರಿ ಸ್ಪರ್ಧಿಸಿ ಅದೇ ಅವಕಾಶದಲ್ಲಿ ಪಂಜಾಬ್‌ ಗದ್ದುಗೆ ಹತ್ತುವ ತವಕದಲ್ಲಿದ್ದ ಆಮ್‌ ಆದ್ಮಿ ಪಕ್ಷ 2ನೇ ಸ್ಥಾನ ಗಳಿಸುವ ಮೂಲಕ ನಿರಾಶೆ ಅನುಭವಿಸಿದೆ. ಆದರೆ ಇವೆರಡರ ವೈಫ‌ಲ್ಯದ ಪೂರ್ಣ ಲಾಭ ಎತ್ತಿದ್ದು ಅಮರಿಂದರ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌. ಅದು 117 ಕ್ಷೇತ್ರಗಳ ಪೈಕಿ 77ನ್ನು ತನ್ನದಾಗಿಸಿಕೊಂಡು ಮೆರೆದಾಡಿದೆ. ಅಮರಿಂದರ್‌ 4ನೇ ಬಾರಿ ಮುಖ್ಯಮಂತ್ರಿಯಾಗುವುದಕ್ಕೆ ಸರ್ವಸಿದ್ಧತೆ ನಡೆಸಿದ್ದಾರೆ.

Advertisement

ಪಂಜಾಬ್‌ನಲ್ಲಿ ಕಾಂಗ್ರೆಸ್‌ ಗೆಲ್ಲುವ ನಿರೀಕ್ಷೆಯಿತ್ತಾದರೂ ಈ ಮಟ್ಟದ ಗೆಲುವು ಅದಕ್ಕೂ ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರಣ ಶಿರೋಮಣಿ-ಬಿಜೆಪಿಯ ಹೀನಾಯ ಸೋಲಲ್ಲ, ಆಮ್‌ ಆದ್ಮಿ ಪಕ್ಷದ ನಿರೀಕ್ಷೆಗೂ ಕಡಿಮೆ ಸಾಧನೆ. ಈ ಬಾರಿ ಆಮ್‌ ಆದ್ಮಿ ಅಧಿಕಾರಕ್ಕೇರಿದರೂ ಅಚ್ಚರಿಯಿಲ್ಲ ಎಂಬ ವಾತಾವರಣವಿತ್ತು. ಅಲ್ಲಿನ ಆಡಳಿತ ವಿರೋಧಿ ಅಲೆ, ಮಾದಕ ದ್ರವ್ಯ ಸೇವನೆ ಹಾವಳಿ, ಕೃಷಿಕರ ಆತ್ಮಹತ್ಯೆ, ನಿರುದ್ಯೋಗದ ಉಗ್ರಸ್ವರೂಪ ಇವೆಲ್ಲವೂ ಸಮ್ಮಿಶ್ರ ಸರ್ಕಾರವನ್ನು ಆಪೋಶನ ತೆಗೆದುಕೊಳ್ಳುವುದು ಮೊದಲೇ ಖಚಿತವಾಗಿತ್ತು. ಇದರ ಪೂರ್ಣ ಲಾಭ ಎತ್ತಲು ಆಮ್‌ ಆದ್ಮಿ ಪಕ್ಷ ದೆಹಲಿ ಮಾದರಿಯಲ್ಲೇ ಸಜ್ಜಾಗಿತ್ತು. ಇದು ಅಧಿಕಾರ ಹಿಡಿಯುವ ತೀವ್ರ ಹಪಾಹಪಿಯಲ್ಲಿದ್ದ ಕಾಂಗ್ರೆಸ್‌ಗೆ ಆತಂಕ ಮೂಡಿಸಿತ್ತು. ಈ ಆತಂಕ ಅಗತ್ಯವಿಲ್ಲವೆಂದು ಫ‌ಲಿತಾಂಶ ಸಾಬೀತುಪಡಿಸಿದೆ. ಮುಂದಿನ ದಿನಗಳಲ್ಲೂ ಅದಕ್ಕೆ ಅತಂತ್ರ ಸ್ಥಿತಿ ಸ್ಥಿತಿ ಎದುರಿಸುವ ಭೀತಿಯಿಲ್ಲ. ಅಷ್ಟು ಶಾಸಕರ ಬಲ ಅದಕ್ಕೆ ಸಿಕ್ಕಿದೆ.
ಶಿರೋಮಣಿ-ಬಿಜೆಪಿ ನಿರ್ನಾಮ: ಆದರೆ ಹಾನಿ ಅನುಭವಿಸಿದ್ದು ಶಿರೋಮಣಿ-ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ. ಸೋಲುವ ವಾಸನೆ ಅದಕ್ಕೆ ಬಡಿದಿದ್ದರೂ ಇಷ್ಟು ಹೀನಾಯ ಸೋಲನ್ನು ನಿರೀಕ್ಷಿಸಿರಲಿಲ್ಲ. ಅದರ ಹಲವು ಸಚಿವರು ಸೇರಿ ಬಹುತೇಕ ಶಾಸಕರು ಸೋತು ಹೋಗಿದ್ದಾರೆ. ಇದು ಸ್ಪಷ್ಟಗೊಳ್ಳಬೇಕಿದ್ದರೆ 2012ರ ಚುನಾವಣೆ ಫ‌ಲಿತಾಂಶ ಪರಿಶೀಲಿಸಬೇಕು. ಆಗ ಶಿರೋಮಣಿ ಅಕಾಲಿದಳ 56 ಸ್ಥಾನ ಗೆದ್ದಿದ್ದರೆ, ಜೊತೆಗಾರ ಬಿಜೆಪಿ 12 ಗೆದ್ದಿತ್ತು. ಇಬ್ಬರೂ ಒಟ್ಟಾಗಿ 68 ಸ್ಥಾನ ಗೆದ್ದಿದ್ದವು. ಈ ಬಾರಿ ಪೂರ್ಣ ವಿರುದ್ಧ ಚಿತ್ರ. ಶಿರೋಮಣಿ ಗೆದ್ದಿದ್ದು ಕೇವಲ 15, ಬಿಜೆಪಿಗೆ ದಕ್ಕಿದ್ದು ಬರೀ 3. ಆಗ ಅಸ್ತಿತ್ವದಲ್ಲೇ ಇಲ್ಲದ ಆಪ್‌ ಗೆದ್ದಿರುವುದು 20!
ಭಾರೀ ಅಂತರದಿಂದ ಗೆದ್ದ ಕ್ಯಾಪ್ಟನ್‌: ಇಲ್ಲಿನ ಮತ್ತೂಂದು ಗಮನಿಸಬೇಕಾದ ಸಂಗತಿ ಕೈ ನಾಯಕ ಅಮರಿಂದರ್‌ ಸಿಂಗ್‌ 2 ಕಡೆ ಸ್ಪರ್ಧಿಸಿ 1 ಕಡೆ ಗೆದ್ದು, 1 ಕಡೆ ಸೋತರು. ತಮ್ಮ ಸ್ವಕ್ಷೇತ್ರ ಪಟಿಯಾಲದಲ್ಲಿ ಬೃಹತ್‌ ಅಂತರದಿಂದ (52,407) ವಿರೋಧಿಗಳನ್ನು ಹಣಿದರು. ಸಮ್ಮಿಶ್ರ ಸರ್ಕಾರಕ್ಕೆ ಸಿಕ್ಕಿದ ಸಮಾಧಾನವೆಂದರೆ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ಗೆದುರಾಗಿ ಲಂಬಿಯಲ್ಲಿ ಸ್ಪರ್ಧಿಸಿದ್ದ ಅಮರಿಂದರ್‌ ಅಲ್ಲಿ 22,770 ಮತಗಳಿಂದ ಸೋತಿದ್ದು. ಉಪಮುಖ್ಯಮಂತ್ರಿ ಸುಖಬೀರ್‌ ಸಿಂಗ್‌ ಬಾದಲ್‌ ಜಲಾಲಾಬಾದ್‌ನಲ್ಲಿ ಗೆದ್ದು ನಿಟ್ಟುಸಿರುಬಿಟ್ಟಿದ್ದು ಸಮ್ಮಿಶ್ರಸರ್ಕಾರದ ಮತ್ತೂಂದು ಸಾಧನೆ!
ಅಮರಿಂದರ್‌ ಕೊನೆ ಚುನಾವಣೆ?: ಚುನಾವಣೆ ಗೆದ್ದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮರಿಂದರ್‌, ಮಾದಕ ದ್ರವ್ಯ ಹಾವಳಿಯನ್ನು ತಡೆಯುವುದು ತನ್ನ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಇದೇ ಅಮರಿಂದರ್‌ಗೆ ಕೊನೆಯ ಚುನಾವಣೆಯಂತೆ. ಈಗಾಗಲೇ 75 ಮುಟ್ಟಿರುವ ಅಮರಿಂದರ್‌ ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಕುಟುಂಬ ಮೂಲಗಳು ತಿಳಿಸಿವೆ.
ದಲಿತರ ಓಲೈಕೆ: ಈ ಬಾರಿ ಮೂರೂ ಪಕ್ಷಗಳು ದಲಿತರ ಓಲೈಕೆ ಮಾಡಿದ್ದು ಸ್ಪಷ್ಟವಾಗಿತ್ತು. ಆಮ್‌ ಆದ್ಮಿ ಪಕ್ಷ ತಾನು ಗೆದ್ದರೆ ದಲಿತ ಶಾಸಕನನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಿತ್ತು. ಬಿಜೆಪಿ ದಲಿತ ವ್ಯಕ್ತಿಯೊಬ್ಬರನ್ನು ತನ್ನ ರಾಜ್ಯಾಧ್ಯಕ್ಷನನ್ನಾಗಿ ಘೋಷಿಸಿತ್ತು. ಕಾಂಗ್ರೆಸ್‌ ಹಲವು ದಲಿತ ಕಲ್ಯಾಣ ಭರವಸೆ ನೀಡಿ ಓಲೈಕೆಯಲ್ಲಿ ಮುಂಚೂಣಿಯಲ್ಲಿತ್ತು.

Advertisement

Udayavani is now on Telegram. Click here to join our channel and stay updated with the latest news.

Next