Advertisement

ಎಪಿಎಂಸಿ ಅಧ್ಯಕ್ಷರಾಗಿ ಅಮರೇಗೌಡ ಅಧಿಕಾರ ಸ್ವೀಕಾರ

11:38 AM Jul 07, 2017 | Team Udayavani |

ರಾಯಚೂರು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಳಿದ ಅಲ್ಪಾವಧಿಗೆ ಅಧ್ಯಕ್ಷರಾಗಿ ಅಮರೇಗೌಡ ಹಂಚಿನಾಳ ಗುರುವಾರ ಅಧಿಕಾರ ಸ್ವೀಕರಿಸಿದರು. 

Advertisement

ಕಳೆದ ಒಂದು ವರ್ಷದಿಂದ ಅಧ್ಯಕ್ಷರ ಹುದ್ದೆ ಖಾಲಿಯಿತ್ತು. ದೇವದುರ್ಗ ಮತ್ತು ರಾಯಚೂರು ಎಪಿಎಂಸಿ ಪ್ರತ್ಯೇಕಗೊಳಿಸಿದ್ದರಿಂದ ಎರಡು ಕಡೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಅದು ರದ್ದಾಗಿದ್ದರಿಂದ ಆಗ ಅಧ್ಯಕ್ಷರಾಗಿದ್ದ ಕುರುಕನದೋಣಿ ಬಸನಗೌಡ ಅಧಿಕಾರ ತೊರೆದಿದ್ದರು. ಕಾರಣಾಂತರಗಳಿಂದ ಅಧ್ಯಕ್ಷರ ಆಯ್ಕೆ ವಿಳಂಬವಾಗಿತ್ತು. ಜಿಲ್ಲಾಧಿಕಾರಿಗಳೇ ಎಪಿಎಂಸಿ ಉಸ್ತುವಾರಿ
ಹೊತ್ತಿದ್ದರು. ಈಗ ಕಾಂಗ್ರೆಸ್‌ ಮುಖಂಡ ಅಮರೇಗೌಡ ಹಂಚಿನಾಳರನ್ನು ನಾಮನಿರ್ದೇಶನ ಮಾಡಿದ್ದರಿಂದ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಅವರು ಅಧಿಕಾರ  ಸ್ವೀಕರಿಸಿದರು. ನಂತರ ಮುಖಂಡರು, ಎಪಿಎಂಸಿ ಅಧಿಕಾರಿಗಳು ಹೂ ಗುತ್ಛ ನೀಡಿ ಅಭಿನಂದಿಸಿದರು. ಈ ವೇಳೆ ಮಾತನಾಡಿದ ಅಮರೇಗೌಡ ಹಂಚಿನಾಳ, ಎಪಿಎಂಸಿಯಲ್ಲಿ ರೈತರಿಗೆ ಯಾವುದೇ ಸಮಸ್ಯೆಗಳು
ಆಗದಂತೆ ಕ್ರಮ ವಹಿಸಲಾಗುವುದು. ಮುಖ್ಯವಾಗಿ ರೈತರು ಮತ್ತು ವ್ಯಾಪಾರಿಗಳ ನಡುವಿನ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು. ಇನ್ನು ಕೆಲವೇ ತಿಂಗಳು ಅಧಿಕಾರಾವಧಿ  ಉಳಿದಿದ್ದು, ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು.

ಕಳೆದ 20 ವರ್ಷದಿಂದ ಪಕ್ಷದಲ್ಲಿ ಮಾಡಿದ ಸೇವೆ ಪರಿಗಣಿಸಿ ಈ ಸ್ಥಾನ ನೀಡಲಾಗಿದೆ. ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.

ವಿಧಾನ ಪರಿಷತ್‌ ಸದಸ್ಯರಾದ ಎನ್‌.ಎಸ್‌ .ಬೋಸರಾಜ್‌, ಬಸವರಾಜ ಪಾಟೀಲ ಇಟಗಿ, ಸಂಸದ ಬಿ.ವಿ.ನಾಯಕ, ಶಾಸಕ ಹಂಪಯ್ಯ ನಾಯಕ, ಮಾಜಿ ಶಾಸಕ ರಾಜಾರಾಯಪ್ಪ ನಾಯಕ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ನಗರಸಭೆ ಅಧ್ಯಕ್ಷೆ ಹೇಮಲತಾ ಬೂದಪ್ಪ, ಆರ್‌ಡಿಎ ಅಧ್ಯಕ್ಷ ಜಿಂದಪ್ಪ, ನಗರಸಭೆ ಉಪಾಧ್ಯಕ್ಷ ಜಯಣ್ಣ ಸೇರಿ ಇತರ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next