Advertisement

ಅಮರ ಸುಳ್ಯ ಹೋರಾಟ ಸ್ಫೂರ್ತಿದಾಯಕ

10:40 AM May 29, 2022 | Team Udayavani |

ಸುಳ್ಯ: ಸ್ವಾತಂತ್ರ್ಯ ಹೋರಾಟಕ್ಕೂ ಮುನ್ನ ಈ ಭಾಗದ ರೈತರು ಒಟ್ಟಾಗಿ ಬ್ರಿಟಿಷರಿಗೆ ಹೆದರದೆ ಅವರ ವಿರುದ್ಧ ಹೋರಾಟ ನಡೆಸಿ, ಸ್ವಾತಂತ್ರ್ಯದ ಕ್ರಾಂತಿ ಆರಂಭವಾಗುವಂತೆ ಮಾಡಿದ್ದರು. ಆದುದರಿಂದ ಅಮರ ಸುಳ್ಯ ಹೋರಾಟ ನಮಗೆಲ್ಲರಿಗೂ ಸ್ಫೂರ್ತಿ ದಾಯಕವಾಗಿದ್ದು, ಅಂದು ಮಡಿ ದವರನ್ನು ನೆನಪಿನಲ್ಲಿಡುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್‌ ಹೇಳಿದರು.

Advertisement

ಅವರು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ.ಜಿಲ್ಲಾಡಳಿತ, ತಾಲೂಕು ಆಡಳಿತ ಸುಳ್ಯ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಲುವಾಗಿ ನಡೆದ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು. ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗಿದೆ. ಇದು ಒಂದು ಮೈಲುಗಲ್ಲು. ಈ ಸಂದರ್ಭದಲ್ಲಿ ನಮ್ಮ ದೇಶಕ್ಕೆ ನಾವೇನು ನೀಡಿದ್ದೇವೆ ಎಂಬುದನ್ನು ಅವಲೋಕಿಸಬೇಕು. ಸಂತಸದ ವಿಚಾರ ಎಂದರೆ ಇಂದು ಭಾರತ ವಿಶ್ವಕ್ಕೆ ಮಾರ್ಗ ದರ್ಶನ ಮಾಡುವ ರೀತಿಯಲ್ಲಿ ಮುಂದು ವರಿದಿದೆ ಎಂದರು.

ಅಪರ ಜಿಲ್ಲಾಧಿಕಾರಿ ಎಚ್‌. ಕೆ.ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯ ಮೂರು ಕಡೆಗಳಲ್ಲಿ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ ನಡೆಯುತ್ತಿದೆ. ದೇಶದ ವೈಭವ, ಘನತೆಯನ್ನು ತಿಳಿಸುವ, ತೋರಿಸುವ ಕಾರ್ಯ ನಡೆಯುತ್ತಿದೆ. ಇವುಗಳಿಂದ ದೇಶಭಕ್ತಿ ರೂಪುಗೊಂಡು, ದೇಶ ಕಟ್ಟುವ ಹೆಜ್ಜೆ ಇಡಬೇಕು ಎಂದರು.

ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಎಸ್.ಅಂಗಾರ ಮಾತನಾಡಿ, ಒಂದು ಅಮರ ತಾಲೂಕಾಗಿ ರೂಪುಗೊಳ್ಳಲು ಅಮರತೆಗೆ ತಕ್ಕಂತೆ ತ್ಯಾಗ ಇರಬೇಕು. ಸುಳ್ಯದಲ್ಲಿ ಸ್ವಾತಂತ್ರ್ಯ ಪೂರ್ವ ದಲ್ಲೇ ಹೋರಾಟಗಳು ನಡೆದಿವೆ. ಸ್ವಾಭಿ ಮಾನ, ಸ್ವಾವಲಂಬಿ ಬದುಕು, ಬ್ರಿಟಿಷರ ದಾಸ್ಯಕ್ಕೆ ಹೊಂದಿಕೊಳ್ಳದೆ ಹೊರಬರಲು ಅಮರ ಸುಳ್ಯ ಹೋರಾಟ ನಡೆಯಿತು. ಪಠ್ಯ ಪುಸ್ತಕದಲ್ಲಿ ಇಲ್ಲದ ವಿಚಾರಗಳ ಬಗ್ಗೆ ನಾವು ತಿಳಿದುಕೊಳ್ಳುವ ಅಗತ್ಯ ಇದೆ ಎಂದರು.

ಮನವಿ ಬೆಳ್ಳಾರೆಯನ್ನು ಐತಿಹಾಸಿಕ ಗ್ರಾಮವಾಗಿ ಘೋಷಿಸಲು ಹಾಗೂ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯ ಸ್ಮಾರಕ ನಿರ್ಮಿಸುವಂತೆ ಬೆಳ್ಳಾರೆ ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಪನ್ನೆ ಎಸ್‌. ಅಂಗಾರ ಅವರಿಗೆ ಮನವಿ ಸಲ್ಲಿಸಿದರು.

Advertisement

ಸಾಂಸ್ಕೃತಿಕ ಕಾರ್ಯಕ್ರಮ

ಸಭಾ ಕಾರ್ಯಕ್ರಮದ ಬಳಿಕ ದೇಶಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬೆಳ್ಳಾರೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಅಮರ ಕ್ರಾಂತಿ ಸುಳ್ಯ ಹೋರಾಟ ಬಿಂಬಿಸುವ ನಾಟಕ ಪ್ರದರ್ಶನ ನಡೆಯಿತು.

ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಗಿರೀಶ್‌ ನಂದನ್‌, ಸುಳ್ಯ ತಹಶೀಲ್ದಾರ್‌ ಅನಿತಾಲಕ್ಷ್ಮೀ, ಸುಳ್ಯ ತಾಲೂಕು ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್‌, ಬೆಳ್ಳಾರೆ ಕೆಪಿಎಸ್‌ ಪ್ರಾಂಶು ಪಾಲ ಬಿ.ವಿ. ಸೂರ್ಯ ನಾರಾಯಣ, ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಸುಳ್ಯ ತಾಲೂಕು ಪಂಚಾಯತ್‌ ಇಒ ಭವಾನಿಶಂಕರ್‌ ಸ್ವಾಗತಿಸಿದರು. ಸಿಡಿಪಿಒ ರಶ್ಮಿ ನೆಕ್ರಾಜೆ ವಂದಿಸಿದರು. ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು.

ಸ್ಮಾರಕ ನಿರ್ಮಾಣ

ಬಂಗ್ಲೆಗುಡ್ಡೆಯಲ್ಲಿ ಬ್ರಿಟಿಷರು ನಿರ್ಮಿಸಿದ ಖಜಾನೆ ಕೊಠಡಿಯನ್ನು ಯಾವುದೇ ಕಾರಣಕ್ಕೂ ಕೆಡವದೆ, ಅದನ್ನು ಉಳಿಸಿಕೊಂಡು ದುರಸ್ತಿ ಪಡಿಸಲಾಗುವುದು. ಅಮರ ಸುಳ್ಯ ಹೋರಾಟದ ನೆನಪಿಗಾಗಿ ಸ್ಮಾರಕ ನಿರ್ಮಿಸುವ ಕೆಲಸವೂ ಆಗಲಿದೆ. ಅಮರ ಸುಳ್ಯ ದಂಗೆಯ ಮಹತ್ವವನ್ನು ಸಾರುವ ಕೆಲಸ ನಡೆಯಲಿದೆ ಎಂದು ಸಚಿವ ಎಸ್.ಅಂಗಾರ ತಿಳಿಸಿದರು.

ಮೆರವಣಿಗೆ

ಬೆಳ್ಳಾರೆಯ ಮುಖ್ಯ ಪೇಟೆಯಲ್ಲಿ ಮೆರವಣಿಗೆ ನಡೆಯಿತು. ಪೇಟೆಯಿಂದ ಬಂಗ್ಲೆಗುಡ್ಡೆಗೆ ಮೆರವಣಿಗೆ ಸಾಗಿತು. ಬಂಗ್ಲೆಗುಡ್ಡೆಯಲ್ಲಿ ಹೋರಾಟದ ಸ್ಮರಣ ಫ‌ಲಕವನ್ನು ಅನಾವರಣಗೊಳಿಸಲಾಯಿತು. ವಿವಿಧ ಸಾಂಸ್ಕೃತಿಕ ತಂಡಗಳು, ಚೆಂಡೆ ಕುಣಿತ ಮೆರವಣಿಗೆಗೆ ಮೆರುಗು ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next