ರಜಾ ಸಿಕ್ಕಾಗ ಅಜ್ಜಿಮನೆಗೆ ಹೋಗುವ ಗಳಿಗೆ ನಮ್ಮ ಜೀವನವನ್ನು ಇನ್ನಷ್ಟು ಚಂದಗೊಳಿಸಿದ ಅಮೃತ ನೆನಪುಗಳನ್ನು ಸಿಕ್ಕಂತಾಗಿದೆ. ಅದರಲ್ಲೂ ಕೆಲವೊಂದು ಸಿಹಿ ನೆನಪುಗಳಾದರೆ ಇನ್ನೂ ಕೆಲವು ಕಹಿ ಘಟನೆಗಳು. ಆದರೆ ಈ ಜೀವನ ಅಂದರೆ ಸಿಹಿ, ಕಹಿ,ಉಪ್ಪು,ಕಾರಗಳ ಮಿಶ್ರಣವಲ್ಲವಾ? ಇವುಗಳು ಇಲ್ಲ ಅಂದ್ರೆ ಲೈಫ್ ಸಕ್ಕತ್ ಬೋರ್ ಅನ್ನೋದು ನನ್ನ ಅಭಿಪ್ರಾಯ.
ಹೀಗೆ ಒಂದು ದಿನ ನಾನು ಸುಮ್ನೆ ಕೂತಿರುವಾಗ ನನ್ನ ಕಣ್ಣ ಮುಂದೆ ಕೆಲವೊಂದು ನೆನಪುಗಳು ಒಂದು ಬಾರಿ ಬಂದು ಬಿಟ್ಟಿತ್ತು.ಅದರಲ್ಲಿ ನಾನು ನಿಮಗೆ ಹೇಳಬೇಕಿರುವ ಸಣ್ಣ ನೆನಪು ಅಂದ್ರೆ ನನ್ನ ಅಮ್ಮಮ್ಮನ ಬಿಂದಿಗೆಯ ಬಗ್ಗೆ. ಏಳನೇ ತರಗತಿಯಲ್ಲಿ ಕಲಿಯುತ್ತಿದ್ದ ನಾನು ಸುಗ್ಗಿ ಹಬ್ಬಕ್ಕೆ ಎಂದು ನನ್ನ ಅಮ್ಮಮ್ಮನ ಮನೆಗೆ ಹೋಗಿದ್ದೆ. ಅದು ಚಿಕ್ಕಮಂಗಳೂರಿನಿಂದ 1 ಗಂಟೆ ದೂರದಲ್ಲಿರುವ ಪುಟ್ಟ ಹಳ್ಳಿ ಗುತ್ತಿಹಳ್ಳಿ. ಬೆಟ್ಟಗುಡ್ಡಗಳ ನಡುವೆ ಇರುವ ಅಮ್ಮಮ್ಮನ ಮನೆ ಅಂದ್ರೆ ಯಾಕೋ ಏನೋ ಬಹಳ ಖುಷಿ ನೀಡೋ ತಾಣ.
ಸುಗ್ಗಿ ಹಬ್ಬದ ಸಮಯ ನಮ್ಮ ಅಜ್ಜಿ ಮನೇಲಿ ಸ್ನಾನ ಮಾಡಲು ಬಾವಿ ನೀರನ್ನೇ ಬಳಸುತ್ತಾ ಇದ್ದರು. ಆ ಬಾವಿ ನೋಡಲು ತುಂಬಾ ಖುಷಿ,ಯಾಕೆಂದರೆ ಆ ಬಾವಿಯ ನೀರು ಹರಿದು ಹೋಗುವ ರೀತಿ ಇತ್ತು. ಉದಾಹರಣೆಗೆ ಅದರ ಆಕೃತಿಯು ಚಮಚದ ರೀತಿ. ಅಮ್ಮ ಹಾಗೂ ಅಮ್ಮಮ್ಮ ಇಬ್ಬರೂ ಕಾಫಿ ತೋಟದ ಕಡೆ ಹೋಗಿ ಬರ್ತೇವೆ ಎಂದು ಹೋದ್ರು. ನನಗೆ ಆಗ ನಾನು ಮತ್ತು ನನ್ನ ಸಹೋದರ ಸಂಬಂಧಿಯೊಬ್ಬರಿಗೆ ಅಮ್ಮಮ್ಮನ ಬಿಂದಿಗೆ ಹಿಡ್ಕೊಂಡು ಬಾವಿ ಹತ್ರ ಹೋಗಿ ನೀರು ತರೋ ಪ್ರಯತ್ನ ಮಾಡೋಣ ಅಂತ ಅನಿಸಿತ್ತು. ಆದರೆ ದುರದೃಷ್ಟ ಏನಂದ್ರೆ ಆ ಬಿಂದಿಗೆ ಮಣ್ಣಿನಿಂದ ಮಾಡಿದ್ದಾಗಿತ್ತು.
ನಾವು ಹೋಗುವಾಗ ಬಿದ್ದು ಒಡೆದು ಹೋಯ್ತು. ಇನ್ನೇನು ಅಮ್ಮಮ್ಮ ಬಂದ್ರೆ ಬೈತಾರೆ ಅನ್ನೋ ಭಯಕ್ಕೆ ಅಲ್ಲಿಂದ ಓಡಿ ಹೋಗಿ ಮನೇಲಿ ಟಿವಿ ಮುಂದೆ ಕೂತ್ಕೊಂಡ್ವಿ. ಅನಂತರ ಅಮ್ಮ ಹಾಗೂ ಅಮ್ಮಮ್ಮ ಬಂದು ಒಡೆದು ಹೋಗಿರೋ ಬಿಂದಿಗೆಯನ್ನು ನೋಡಿದಾಗ, ಮಕ್ಕಳೇ ಏನೋ ಮಾಡಿರಬೇಕು ಎಂದು ನಮ್ಮ ಹತ್ತಿರ ಬಂದರು. ನಾವು ಬಲು ಜಾಣರು ಅದು ನಾವಲ್ಲ ತಾತ ಹೊಡ್ಸಿದ್ದು ಅಂತ ಹೇಳಲಿಕ್ಕು ತಾತ ಶಾಕ್ ಆಗಿ ಮಾತಾಡ್ದೆ ಇರೋದಿಕ್ಕು ಸರಿಯಾಗಿ ನಮ್ಮ ಅಮ್ಮಮ್ಮ ಚೆನ್ನಾಗಿ ಕ್ಲಾಸ್ ತೆಗೊಂಡ್ರು. ನಮಗೆ ತಾತನ ನೋಡಿ ಪಾಪ ಅನಿಸಿದ್ರೂ, ಅವರಿಬ್ಬರ ಜಗಳ ನೋಡಿ ನಗು ಬಂತು. ನಮ್ಮ ತಾತ ನಾನಲ್ಲ ತಾಯಿ ನಿನ್ನ ಮೊಮ್ಮಕಳೆ ಆಗಿರಬೇಕು ಅನ್ನೋರು. ಆದ್ರೂ ನಮ್ಮಮ್ಮ ತಾತನೇ ಅಂತ ತಲೇಲಿ ಫಿಕ್ಸ್ ಆಗಿದ್ರು. ಹೀಗೆ ಆ ದಿನ ಕಳೆದು ಹೋಯ್ತು.
ಈಗ ಇವೆಲ್ಲ ನೆನಪಿಸಿಕೊಳ್ಳುತ್ತಾ ಇದ್ದರೆ ಏನು ಮಾತಾಡಬೇಕು ಅಂತ ಅರಿವೆ ಆಗಲ್ಲ.ಆದರೆ ಹಲವರು ಜೀವನದಲ್ಲಿ ತಮ್ಮ ಬಾಲ್ಯವನ್ನು ಸರಿಯಾಗಿ ಕಳೆಯಲು ಸಾಧ್ಯ ಆಗದೆ ಇರೋ ಪರಿಸ್ಥಿತಿಯಲ್ಲಿ ಇರುತ್ತಾರೆ. ಇನ್ನೂ ಅನೇಕರು ತುಂಬಾ ಸವಿಯಾದ ನೆನಪುಗಳನ್ನು ಕೂಡಿಕೊಂಡು ಇಟ್ಟಿರುತ್ತಾರೆ. ಜೀವನದ ಈ ಜಂಜಾಟದಲ್ಲಿ ಹೇಗೆ ಇನ್ನೊಬ್ಬರನ್ನು ಸೋಲಿಸಬೇಕು, ದುಡ್ಡು ಮಾಡಬೇಕು ಎನ್ನುವ ವಿಚಾರಗಳಲ್ಲಿ ತುಂಬಾ ವಿಚಾರಗಳನ್ನು ನಾವು ಮರೆತು ಹೋಗಿರುತ್ತೇವೆ.ಹಾಗಾಗಿ ಎಲ್ಲ ಮೌಲ್ಯದ ಕ್ಷಣಗಳನ್ನು ಮನಸ್ಸಿನಲ್ಲಿ ಮತ್ತೆ ಮತ್ತೆ ಮೆಲುಕು ಹಾಕುವ.
ಹರ್ಷಿತಾ ಎಂ.ಕೆ.
ಎಸ್‌ಡಿಎಂ, ಉಜಿರೆ