ಕೋಲ್ಕತಾ:ಭಾರತದ ಆಧುನಿಕ ನೃತ್ಯದ ವಿಶ್ವವಿಖ್ಯಾತ ನೃತ್ಯಪಟು ಹಾಗೂ ನೃತ್ಯ ನಿರ್ದೇಶಕ ಉದಯ್ ಶಂಕರ್ ಅವರ ಪತ್ನಿ, ಖ್ಯಾತ ನೃತ್ಯಪಟು ಅಮಲಾ ಶಂಕರ್ (101ವರ್ಷ) ಶುಕ್ರವಾರ ಬೆಳಗ್ಗೆ ಕೋಲ್ಕತಾದಲ್ಲಿ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಯಾರಿದು ಅಮಲಾ ಶಂಕರ್?
1930ರಲ್ಲಿಯೇ ಅಮಲಾ ಅವರು ನೃತ್ಯಾಭ್ಯಾಸ ಮಾಡುವ ಮೂಲಕ ಅಂದಿನ ಕಾಲದಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಲು ಭಾರತೀಯ ಮಹಿಳೆಯರು ಹಿಂಜರಿಯುತ್ತಿದ್ದರು. ಅಮಲಾ ಶಂಕರ್ ಅವರು ಆ ಹಾದಿಯನ್ನು ಮುರಿದು ಸಾರ್ವಜನಿಕ ರಂಗದಲ್ಲಿ ನೃತ್ಯ ಪ್ರದರ್ಶನ ನೀಡಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು. “ಅಮಲಾ ಶಂಕರ್” ಅವರ ನಿಧನ ನೃತ್ಯಲೋಕಕ್ಕೊಂದು ತುಂಬಲಾರದ ನಷ್ಟ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
1919ರಲ್ಲಿ ಈಗಿನ ಬಾಂಗ್ಲಾದೇಶದ ಜೆಸ್ಸೋರ್ ನಲ್ಲಿ ಅಮಲಾ ನಂದ್ಯಾ ಜನಿಸಿದ್ದರು. ಚಿಕ್ಕ ಪ್ರಾಯದಲ್ಲಿಯೇ ಚಿತ್ರಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ಅಷ್ಟೇ ಅಲ್ಲ ಪ್ರಮುಖ ಉದ್ಯಮಿಯಾಗಿದ್ದ ತಂದೆಯೂ ಕೂಡಾ ಆಕೆಯ ಪ್ರತಿಭೆಗೆ ಪ್ರೋತ್ಸಾಹ ನೀಡಿದ್ದರು.
1931ರಲ್ಲಿ ಅಮಲಾ ಅವರು ಪ್ಯಾರೀಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರದರ್ಶನವೊಂದರಲ್ಲಿ ಉದಯ್ ಶಂಕರ್ ಅವರನ್ನು ಭೇಟಿಯಾಗಿದ್ದರು. ಆಗ ಅಮಲಾ ವಯಸ್ಸು 11. ಬಳಿಕ ಉದಯ್ ಶಂಕರ್ ಅವರ ನೃತ್ಯ ತಂಡ ಸೇರಿಕೊಂಡು ಜಾಗತಿಕವಾಗಿ ನೃತ್ಯ ಪ್ರದರ್ಶನ ನೀಡುವ ಮೂಲಕ ಐತಿಹಾಸಿಕ ಪಯಣ ಆರಂಭಿಸಿದ್ದರು. ನಂತರ ಉದಯ್ ಶಂಖರ್ ಅವರು ಅಮಲಾ ಅವರನ್ನು ವಿವಾಹವಾಗುತ್ತಾರೆ. 1942ರಲ್ಲಿ ಆನಂದ್ ಶಂಕರ್ ಹಾಗೂ 1955ರಲ್ಲಿ
ಪುತ್ರಿ ಮಮತಾ ಶಂಕರ್ ಜನಿಸಿದ್ದರು.
ತಂದೆ, ತಾಯಿಯಂತೆ ಮಗಳು ಮಮತಾ ಶಂಕರ್ ಕೂಡಾ ಖ್ಯಾತ ನೃತ್ಯಗಾರ್ತಿ, ಮಮತಾ ಅವರು ಸತ್ಯಜಿತ್ ರೇ ಹಾಗೂ ಮೃಣಾಲ್ ಸೇನ್ ಅವರ ಚಲನಚಿತ್ರದಲ್ಲಿ ಅಭಿನಯಿಸಿದ್ದರು.