ಹೈದರಾಬಾದ್: ನೆಪೋಟಿಸಂನಿಂದಾಗಿ ಬಾಲಿವುಡ್ ನ ಕೆಲ ಸಿನಿಮಾಗಳು ಬಾಯ್ಕಾಟ್ ನಂತಹ ಅಭಿಯಾನಕ್ಕೆ ಸಿಲುಕಿಕೊಂಡು ಸೋತಿವೆ. ಬಾಲಿವುಡ್ ನಲ್ಲಿ ನೆಪೋಟಿಸಂ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಆದರೀಗ ಟಾಲಿವುಡ್ ನ ನೆಪೋಟಿಸಂ ಬಗ್ಗೆ ನಟಿಯೊಬ್ಬರು ಮಾತಾನಾಡಿ ಸುದ್ದಿಯಾಗಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ʼಹೆಬ್ಬುಲಿʼ ಸಿನಿಮಾದ ನಾಯಕಿಯಾಗಿ ಕಾಣಿಸಿಕೊಂಡ ಅಮಲಾ ಪೌಲ್ ಬಹುಭಾಷೆಯ ಬೇಡಿಕೆಯ ನಟಿಯರಲ್ಲಿ ಒಬ್ಬರು. ʼಹೆಬ್ಬುಲಿʼ ಗಿಂತ ಮೊದಲು ತಮಿಳಿನಲ್ಲಿ ʼಮೈನಾʼ ಸಿನಿಮಾದಲ್ಲಿನ ಅಭಿನಯ ಅವರಿಗೆ ಹೆಚ್ಚು ಫೇಮ್ ತಂದು ಕೊಟ್ಟಿತ್ತು. 2011 ರಲ್ಲಿ ಬಂದ ನಾಗಚೈತನ್ಯರ ‘ಬೇಜಾವಾಡ’ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ರಾಮ್ ಚರಣ್ ಅವರ ‘ನಾಯಕ್ʼ ಸಿನಿಮಾದಲ್ಲಿ ಸ್ಕ್ರೀನ್ ಹಂಚಿಕೊಂಡಿದ್ದರು.
ಮಲಯಾಳಂ, ತಮಿಳು, ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಯಲ್ಲೂ ಅವಕಾಶ ಪಡೆದುಕೊಂಡಿರುವ ಅಮಲಾ ಪೌಲ್ ಟಾಲಿವುಡ್ ಬಗ್ಗೆ ಆಡಿದ ಮಾತುಗಳು ಸದ್ಯ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ವೈರಲ್: ಬೆಂಗಳೂರು ಪ್ರವಾಹಕ್ಕೆ ತುತ್ತಾದ ಆಫೀಸ್; ಕಾಫಿ ಶಾಪ್ ನಲ್ಲೇ ಕಂಪ್ಯೂಟರ್ ಹಾಕಿ ಕೆಲಸ
ಸಂದರ್ಶನವೊಂದರಲ್ಲಿ ಮಾತಾನಾಡಿರು ಅವರು, “ಟಾಲಿವುಡ್ ನಲ್ಲಿ ನನ್ನ ಜರ್ನಿ ಆರಂಭಿಸಿದಾಗ ಅಲ್ಲಿ ನೆಪೋಟಿಸಂ ಹಾಗೂ ಕೌಟುಂಬಿಕ ಪರಿಕಲ್ಪನೆ ಇರುವುದು ಅರಿವಿಗೆ ಬಂತು. ಟಾಲಿವುಡ್ ಇಂಡಸ್ಟ್ರಿ ಕೆಲ ಸ್ಟಾರ್ ಫ್ಯಾಮಿಲಿಗಳಿಂದ ಪ್ರಾಬಲ್ಯವನ್ನು ಹೊಂದಿದೆ. ಅಲ್ಲಿನ ಕರ್ಮಷಿಯಲ್ ಸಿನಿಮಾಗಳು ಭಿನ್ನವಾಗಿರುತ್ತದೆ. ಬಹುತೇಕ ಸಿನಿಮಾಗಳಲ್ಲಿ ಎರಡು ನಾಯಕಿಯರು, ಲವ್ ಸೀನ್ಸ್, ಹಾಡುಗಳು ಇರುತ್ತವೆ, ಅಲ್ಲಿ ಎಲ್ಲವೂ ಇರುವುದು ಗ್ಲಾಮರ್ ಗಾಗಿ ಮಾತ್ರ, ಅದೇ ಕಾರಣಕ್ಕೆ ನಾನು ಟಾಲಿವುಡ್ ನ ಬಹುತೇಕ ಸಿನಿಮಾಗಳನ್ನು ಬಿಟ್ಟಿದ್ದೇನೆ. ಕೆಲವೇ ಸಿನಿಮಾಗಳಲ್ಲಿ ನಟಿಸಿದ್ದೇನೆ. ಟಾಲಿವುಡ್ ಇಂಡಸ್ಟ್ರಿಯೊಂದಿಗೆ ಹೆಚ್ಚು ಸಂಪರ್ಕ ಹೊಂದಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಕೊನೆಯದಾಗಿ ಅವರು, ನನ್ನ ಅದೃಷ್ಟಕ್ಕೆ ನಾನು ತಮಿಳು ಸಿನಿಮಾದಿಂದ ನನ್ನ ಪಯಣ ಆರಂಭಿಸಿದೆ. ಆ ಸಮಯದಲ್ಲಿ ಅಲ್ಲಿ ಹೊಸಬರಿಗೆ ನಟನೆಗೆ ಅವಕಾಶ ನೀಡುತ್ತಿದ್ದರು ಎಂದು ಹೇಳಿದ್ದಾರೆ.ಅಮಲಾ ಪೌಲ್ ಆಡಿದ ಮಾತು ನೇರವಾಗಿ ಟಾಲಿವುಡ್ ನಲ್ಲಿನ ನೆಪೋಟಿಸಂ(ಸ್ವಜನ ಪಕ್ಷಪಾತ)ಕುರಿತಾಗಿದ್ದು, ಅವರ ಮಾತುಗಳು ಟಾಲಿವುಡ್ ರಂಗದಲ್ಲಿ ಚರ್ಚೆ ಆಗುತ್ತಿದೆ.