Advertisement

ಸಹಕಾರಿ ಸಂಸ್ಥೆಯಿಂದ ಅಗ್ರಿಮಾಲ್‌ ದೇಶದಲ್ಲೇ ಮೊದಲು: ಶಾ

12:18 AM Feb 12, 2023 | Team Udayavani |

ಪುತ್ತೂರು: ಸಹಕಾರಿ ಸಂಸ್ಥೆಯೊಂದು ಅಗ್ರಿ ಮಾಲ್‌ ನಿರ್ಮಾಣಕ್ಕೆ ಮುಂದಾಗುತ್ತಿರುವುದು ದೇಶದ ಸಹಕಾರಿ ರಂಗದಲ್ಲೇ ಮೊದಲು. ಸಾರ್ಥಕ 50 ವರ್ಷಗಳನ್ನು ಪೂರ್ಣಗೊಳಿಸಿರುವ ಕ್ಯಾಂಪ್ಕೊ ಈ ಮೂಲಕ ಕೃಷಿಕರಿಂದ ಪ್ರಾಮಾಣಿಕತೆಯ ಪ್ರಮಾಣ ಪತ್ರವನ್ನು ಪಡೆದಂತಾಗಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್‌ ಶಾ ಹೇಳಿದರು.

Advertisement

ಪುತ್ತೂರು ತೆಂಕಿಲದಲ್ಲಿ ಶನಿವಾರ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಹಾಗೂ ಸಹಕಾರಿಗಳ ಸಮಾವೇಶ ಉದ್ಘಾಟಿಸಿ, ಪುತ್ತೂರಿನಲ್ಲಿ ಅಗ್ರಿಮಾಲ್‌ಗೆ ಶಿಲಾನ್ಯಾಸ, ದಾವಣಗೆರೆಯಲ್ಲಿನ ಗೋದಾಮು ಉದ್ಘಾಟನೆ ಹಾಗೂ ಕ್ಯಾಂಪ್ಕೊದ ತೆಂಗಿನೆಣ್ಣೆ ಕಲ್ಪ ಬಿಡುಗಡೆ ನೆರವೇರಿಸಿ ಅವರು ಮಾತನಾಡಿದರು.

ಕೃಷಿಕರಿಗೆ ಸಂಬಂಧಿಸಿದ ಎಲ್ಲ ರೀತಿಯ ಸಾಮಗ್ರಿಗಳೂ ಒಂದೇ ಸೂರಿನಡಿ ಸಿಗುವಂತಹ ಈ ಪರಿಕಲ್ಪನೆ ದೇಶದಲ್ಲೇ ವಿನೂತನ. 3 ಸಾವಿರ ಸದಸ್ಯರಿಂದ ಆರಂಭಗೊಂಡ ಕ್ಯಾಂಪ್ಕೊ ಇಂದು 1.38 ಲಕ್ಷ ಸದಸ್ಯರ ಸದೃಢ ಸಹಕಾರಿ ಸಂಸ್ಥೆ ಯಾಗಿದೆ. ಈ ಸಾಧನೆಗಾಗಿ ಕ್ಯಾಂಪ್ಕೊದ ಇಡೀ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

3 ವರ್ಷದಲ್ಲಿ 2 ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗಳನ್ನು ಸ್ಥಾಪಿಸುವ ಗುರಿ ಇದೆ ಎಂದರು.

ನಿಮ್ಮ ಅಡಿಕೆಗೆ ನಾವೇ ಗ್ರಾಹಕರು!
ವ್ಯತಿರಿಕ್ತವಾದ ಭೌಗೋಳಿಕ ಪ್ರದೇಶವಿದ್ದರೂ ಇಲ್ಲಿನ ಕೃಷಿಕರು ಅಡಿಕೆ, ತೆಂಗು, ಕಾಳುಮೆಣಸು, ರಬ್ಬರ್‌ ಇತ್ಯಾದಿ ಬೆಳೆಯುವ ಮೂಲಕ ಸಂಪದ್ಭರಿತಗೊಳಿಸಿದ್ದಾರೆ ಎಂದ ಅಮಿತ್‌ ಶಾ ಗುಜರಾತ್‌ ಹಾಗೂ ಕರಾವಳಿಯ ನಂಟನ್ನು ತೆರೆದಿಟ್ಟರು. ನೀವು ಬೆವರು ಸುರಿಸಿ ಬೆಳೆಯುವ ಸುಪಾರಿಯನ್ನು ನಾವು ಗುಜರಾತಿಗಳು ತಿಂದು ಬೆವರಿಳಿಸುತ್ತೇವೆ ಎಂದು ಚಟಾಕಿ ಹಾರಿಸಿದರು.

Advertisement

ಸಹಕಾರ ರಂಗದಲ್ಲಿ ಯಶಸ್ವಿ
ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ಸಹಕಾರಿ ರಂಗದಲ್ಲಿ ಇಂತಹ ಸಂಸ್ಥೆಯನ್ನು ಸ್ಥಾಪಿಸಿ, 50 ವರ್ಷ ಯಶಸ್ವಿಯಾಗಿ ಮುನ್ನಡೆಸುವುದು ದೊಡ್ಡ ಸವಾಲು, ವಾರಣಾಶಿ ಸುಬ್ರಾಯ ಭಟ್ಟರು ನೆಟ್ಟ ಗಿಡವಿಂದು ಹೆಮ್ಮರವಾಗಿ ಬೆಳೆದಿದೆ. ಅಡಿಕೆ, ಕೊಕ್ಕೊ, ರಬ್ಬರ್‌ ಖರೀದಿ, ಈಗ ತೆಂಗಿನಕಾಯಿ ಖರೀದಿಗೆ ಮುಂದಾಗಿದೆಯಲ್ಲದೆ ವಿದ್ಯುತ್‌ ಉತ್ಪಾದನೆಯನ್ನೂ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಚಿವರಾದ ಆರಗ ಜ್ಞಾನೇಂದ್ರ, ವಿ. ಸುನಿಲ್‌ ಕುಮಾರ್‌, ಎಸ್‌. ಅಂಗಾರ, ಎಸ್‌.ಟಿ. ಸೋಮಶೇಖರ್‌, ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಸಂಜೀವ ಮಠಂದೂರು, ಹರೀಶ್‌ ಪೂಂಜ, ರಾಜೇಶ್‌ ನಾೖಕ್‌ ಉಳೇಪಾಡಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ್‌ ಭಟ್‌, ಕ್ಯಾಂಪ್ಕೊ ನಿರ್ದೇಶಕರು ಹಾಜರಿದ್ದರು.

ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಪ್ರಸ್ತಾವನೆಗೈದರು. ವ್ಯವಸ್ಥಾಪಕ ನಿರ್ದೇಶಕ ಎಚ್‌.ಎಂ. ಕೃಷ್ಣಕುಮಾರ್‌ ಸ್ವಾಗತಿಸಿದರು. ಉಪಾಧ್ಯಕ್ಷ ಶಂಕರನಾರಾಯಣ ಭಟ್‌ ಖಂಡಿಗೆ ವಂದಿಸಿದರು.

ಕುಮ್ಕಿ ಹಕ್ಕು, ಅಡಿಕೆಗೆ ಪ್ರೋತ್ಸಾಹ: ಬೊಮ್ಮಾಯಿ
ಈ ಬಾರಿಯ ಬಜೆಟ್‌ನಲ್ಲಿ ಅಡಿಕೆಗೆ ವಿಶೇಷವಾದ ಪ್ರೋತ್ಸಾಹ ನೀಡಲಾಗುವುದು. ಅಲ್ಲದೆ ಕುಮ್ಕಿ, ಕಾನ, ಬಾಣೆ, ಸೊಪ್ಪಿನಬೆಟ್ಟ ಹಕ್ಕು ನೀಡುವ ಬಗ್ಗೆಯೂ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಕುಮ್ಕಿ ಹಕ್ಕು ನೀಡುವ ಬಗ್ಗೆ ಕಂದಾಯ ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಎಲೆಚುಕ್ಕಿ ರೋಗ ಸಂಶೋಧನೆಗೆ 10 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಿದ್ದೇನೆ. ಈ ಬಾರಿಯ ಬಜೆಟ್‌ನಲ್ಲಿ ಅಡಿಕೆ ಬೆಳೆಗಾರರಿಗೆ ದೊಡ್ಡ ಕೊಡುಗೆ ನೀಡಲಾಗುವುದು ಎಂದು ಬೊಮ್ಮಾಯಿ ಹೇಳಿದರು. ಕ್ಯಾಂಪ್ಕೊ ಕೃಷಿಕರ ವ್ಯವಸಾಯ, ಆರ್ಥಿಕ ಬದುಕನ್ನು ಹಸನುಗೊಳಿಸಿ ಯಶಸ್ವಿಯಾಗಿದೆ, ಇದೊಂದು ಯಶೋಗಾಥೆ. ಕ್ಯಾಪಿಟಲಿಸಂ, ಕಮ್ಯುನಿಸಂಗೆ ಪರ್ಯಾಯ ವಾಗಿ ಕೋ ಆಪರೇಟಿವಿಸಂ ಮೂಲಕ ಯಶಸ್ವಿ ಉತ್ತರ ನೀಡಿದೆ ಎಂದು ವಿಶ್ಲೇಷಿಸಿದರು.
ಇಂದು ಅಡಿಕೆ ತೀವ್ರ ವೇಗದಲ್ಲಿ ವಿಸ್ತರಣೆ ಗೊಳ್ಳುತ್ತಿದ್ದು 6.11 ಲಕ್ಷ ಹೆಕ್ಟೇರ್‌ನಲ್ಲಿ ಹರಡಿ ಕೊಂಡಿದೆ, ಆದರೆ ಎಲೆಚುಕ್ಕಿ ರೋಗದಂತಹ ಸವಾಲು ನಮ್ಮ ಮುಂದಿದೆ ಎಂದರು.

ಕಾಂತಾರಕ್ಕೆ ಮೆಚ್ಚುಗೆ
ಕರಾವಳಿಯ ನೆಲೆಗಟ್ಟನ್ನು ಹಿಡಿ ದಿರಿಸಿ ಯಶಸ್ವಿಯಾದ ಕಾಂತಾರ ಸಿನೆಮಾಕ್ಕೆ ಮಾರುಹೋದವರಲ್ಲಿ ಅಮಿತ್‌ ಶಾ ಸೇರಿದ್ದಾರೆ. ಸ್ವತಃ ಅವರೇ ಈ ವಿಚಾರವನ್ನು ಸಮಾವೇಶದಲ್ಲಿ ಬಹಿರಂಗಪಡಿಸಿದರು.

ಪಶ್ಚಿಮ ಘಟ್ಟ ಹಾಗೂ ಸಮುದ್ರದ ಮಧ್ಯೆ ಸ್ಥಿತವಾದ ಈ ಕರಾವಳಿ ಪ್ರದೇಶದ ಸೊಬಗು ನನಗೆ ಇಷ್ಟವಾಯಿತು. ಇದು ಎಷ್ಟು ಸಮೃದ್ಧವಾಗಿದೆ ಎನ್ನುವುದನ್ನು ಕಾಂತಾರ ಮೂಲಕವೂ ತಿಳಿದುಕೊಂಡಿದ್ದೇನೆ.

ಅಮಿತ್‌ ಶಾ ಉವಾಚ…
– ಕರಾವಳಿ ನನಗೆ ಪ್ರಿಯವಾದ ಜಾಗ. ಇಲ್ಲಿನ ರಾಣಿ ಅಬ್ಬಕ್ಕನಿಗೆ ನನ್ನ ಪ್ರಣಾಮ, ಪರಶುರಾಮ ಸೃಷ್ಟಿಗೆ ನನ್ನ ಗೌರವ. ಮಂಗಳಾದೇವಿಗೆ, ಪುತ್ತೂರಿನ ಮಹಾಲಿಂಗೇಶ್ವರನಿಗೆ ನನ್ನ ನಮನ.
– ಚುನಾವಣೆ ವೇಳೆಗೆ ಮತ್ತೂಮ್ಮೆ ಈ ಭಾಗಕ್ಕೆ ಭೇಟಿ ನೀಡುವೆ.

Advertisement

Udayavani is now on Telegram. Click here to join our channel and stay updated with the latest news.

Next