ಯಾದಗಿರಿ: ಇಡೀ ಜಿಲ್ಲೆಯ ಸರಕಾರಿ ಪದವಿ ಕಾಲೇಜಿನ ಸಮಗ್ರ ಅಭಿವೃದ್ಧಿಗಾಗಿ ಸಿದ್ಧನಿದ್ದು, ಇಲ್ಲಿಯವರೆಗೆ ಸುಮಾರು 8 ಕೋಟಿ ಅನುದಾನ ನೀಡಿರುವುದಾಗಿ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಹೇಳಿದರು.
ಸರಕಾರಿ ಪದವಿ ಕಾಲೇಜಿನಲ್ಲಿ ಗುರುವಾರ ನಡೆದ 2018-19ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಯಾದಗಿರಿ ನಗರದಲ್ಲಿ ಸರಕಾರಿ ಪದವಿ ಮಹಾವಿದ್ಯಾಲಯದ ಹೆಚ್ಚುವರಿ ತರಗತಿ ಕೊಠಡಿ ಮತ್ತು ಸಭಾಂಗಣ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಪಡೆಯಲು ಗ್ರಾಮೀಣ ಮತ್ತು ಬಡ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಅವರಿಗೆ ಗುಣಮಟ್ಟದ ಶಿಕ್ಷಣ ನೀಡಲು ಕಾಲೇಜಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಲಾಗಿದೆ. ಹೆಚ್ಚುವರಿ ತರಗತಿ ಕೊಠಡಿಗಳು, ಪ್ರಯೋಗಾಲಯ, ಶೌಚಾಲಯ, ಕಾಂಪೌಂಡ್ ನಿರ್ಮಾಣ ಹಾಗೂ ಕುಡಿಯುವ ನೀರಿನ ಘಟಕ ಸ್ಥಾಪನೆ ಹೀಗೆ ಅನೇಕ ಅಭಿವೃದ್ಧಿಯ ಕಾಮಗಾರಿಗಳನ್ನು ನೆರವೇರಿಸಲಾಗಿದೆ ಎಂದರು.
ನೂತನ ಸಭಾಂಗಣಕ್ಕೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಸೇರಿ ಒಮ್ಮತದ ನಿರ್ಣಯ ಮಾಡಿ ಲಿಂಗೈಕ್ಯ ವಿಶ್ವನಾಥರಡ್ಡಿ ಮುದ್ನಾಳ ಸಭಾಂಗಣವೆಂದು ನಾಮಕರಣ ಮಾಡಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಖಂಡಪ್ಪ ದಾಸನ್ ಮಾತನಾಡಿ, ಲಿಂ| ವಿಶ್ವನಾಥರಡ್ಡಿ ಮುದ್ನಾಳ ಅಪ್ಪಟ ದೇಶಪ್ರೇಮಿ, ಬಡವರ ಬಂಧು, ಸಕಲ ಜೀವಾತ್ಮರಿಗೆ ಲೇಸನೇ ಬಯಸಿದವರು. ಅವರ ಹೆಸರು ಚಿರಸ್ಥಾಯಿಗೊಳಿಸಲು ಸಭಾಂಗಣಕ್ಕೆ ಅವರ ಹೆಸರು ಇಡಲಾಗಿದೆ ಎಂದು ಹೇಳಿದರು.
ಪ್ರಾಂಶುಪಾಲ ಡಾ| ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಕಾಲೇಜಿನ ಅಭಿವೃದ್ಧಿಗಾಗಿ ಅಹವಾಲು ಸಲ್ಲಿಸಿದಾಗಲೆಲ್ಲ ಶಾಸಕರು ಸ್ಪಂದಿಸಿ ಅನುದಾನ ನೀಡಿದ್ದಾರೆ. ಕಾಲೇಜು ಮೂಲಭೂತ ಸೌಕರ್ಯಗಳಿಂದ ಉತ್ತಮಗೊಂಡಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಬಸವರಾಜ ಚಂಡ್ರಕಿ, ಹನುಮಂತ ಇಟಗಿ, ಸೋಮನಾಥ ಜೈನ್, ಸ್ನೇಹಾ ರಸಾಳಕರ್, ನರೇಂದ್ರ ಗಾಂಧಿ, ಶರಣಗೌಡ ಬಾಡಿಯಾಳ, ಮೋಹನಬಾಬು, ರುದ್ರಗೌಡ, ಕೆಎಚ್‌ಬಿ ಇಂಜನಿಯರ್ ಶರಣಗೌಡ ಇದ್ದರು.