Advertisement
ನಗರದ ಹೊರ ವಲಯದ ಅಣಕನೂರು ಸಮೀಪದ ಜಿಲ್ಲಾ ಮೀಸಲು ಪಡೆಯ ಕವಾಯಿತು ಮೈದಾನದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಇಲಾಖೆ 2019ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಪೊಲೀಸರ ಕೆಲಸ ಕಠಿಣವಾದದ್ದು. ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಉತ್ತಮ ಆರೋಗ್ಯ ಕಾಪಾಡಿಕೊಂಡರೆ ಮಾತ್ರ ಕಾರ್ಯನಿರ್ವಹಿಸಲು ಸಾಧ್ಯ ಎಂದರು.
Related Articles
Advertisement
ಕ್ರೀಡಾಕೂಟವೇ ಹಬ್ಬ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಮಾತನಾಡಿ, ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಯಾವುದೇ ಹಬ್ಬ, ಹರಿದಿನಗಳು ಬಂದರೂ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯಿಂದ ಹಬ್ಬಗಳಲ್ಲಿ ಕುಟುಂಬಸ್ಥರ ಜೊತೆಗೆ ಪಾಲ್ಗೊಳ್ಳಲು ಸಾಧ್ಯವಿಲ್ಲ. ಆದರೆ ಪ್ರತಿ ವರ್ಷ ನಡೆಯುವ ಕ್ರೀಡಾಕೂಟವೇ ಪೊಲೀಸರಿಗೆ ಹಬ್ಬವಾಗಿರುವುದರಿಂದ ಸಿಬ್ಬಂದಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಬೇಕೆಂದರು.
ಚಿಕ್ಕಬಳ್ಳಾಪುರ ಉಪ ವಿಭಾಗದ ಡಿವೈಎಸ್‌ಪಿ ರವಿಶಂಕರ್, ಚಿಂತಾಮಣಿ ಉಪ ವಿಭಾಗದ ಡಿವೈಎಸ್‌ಪಿ ಶ್ರೀನಿವಾಸ್, ಸಿಪಿಐಗಳಾದ ಹೆಚ್.ವಿ.ಸುದರ್ಶನ್, ಕೆ.ಎಂ.ಶ್ರೀನಿವಾಸಪ್ಪ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿಗಳಾದ ಕೃಷ್ಣಾರೆಡ್ಡಿ, ನಾಗೇಂದ್ರ ಪ್ರಸಾದ್ ಸೇರಿದಂತೆ ಜಿಲ್ಲೆಯ ಎಲ್ಲಾ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಿ: ಜಿಲ್ಲೆಯಲ್ಲಿ ಯಾರಾದರೂ ಹೊಸದಾಗಿ ಮನೆ ಬಾಡಿಗೆ ಪಡೆಯಲು ಬಂದಾಗ ಮನೆ ಮಾಲೀಕರು ಸೂಕ್ತ ಎಚ್ಚರಿಕೆ ವಹಿಸಿ ಅವರ ಚಲನವಲನಗಳನ್ನು ಗಮನಿಸಬೇಕೆಂದು ಕೇಂದ್ರ ವಲಯದ ಐಜಿಪಿ ಕೆ.ವಿ.ಶರತ್ ಚಂದ್ರ ತಿಳಿಸಿದರು. ಕ್ರೀಡಾಕೂಟ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ ಮಾಲೀಕರು ಮನೆಗಳನ್ನು ಬಾಡಿಗೆ ಕೊಟ್ಟು ಬರುವ ಬಾಡಿಗೆ ಪಡೆದುಕೊಂಡು ಸುಮ್ಮನೆ ಇದ್ದರೆ ಸಾಲದು, ಮನೆ ಪಡೆದವರು ದಿನ ಎಷ್ಟು ಗಂಟೆಗೆ ಹೋಗುತ್ತಾರೆ,
ಸಂಜೆ ಎಷ್ಟು ಗಂಟೆಗೆ ಬರುತ್ತಾರೆ, ಏನು ಕೆಲಸ ಮಾಡುತ್ತಾರೆ ಎಂಬುದನ್ನು ತಿಳಿಯಬೇಕು. ಅನೇಕ ಕಡೆ ಭಯೋತ್ಪಾದಕರು ಮನೆಯಿಂದ ಹೊರಗೆ ಬರುವುದಿಲ್ಲ. ಇಡೀ ದಿವಸ ಮನೆಯೊಳಗೆ ಇರುತ್ತಾರೆ. ಮನೆಯವರು ಅವರ ಚಲನವಲನಗಳ ಬಗ್ಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಬೇಕು. ಈ ಬಗ್ಗೆ ಮನೆ ಮಾಲೀಕರು ಜಾಗ್ರತೆ ತಪ್ಪಿದರೆ ಭಯೋತ್ಪಾದನಾ ಕೃತ್ಯಗಳು ಸಂಭವಿಸುವ ಸಾಧ್ಯತೆ ಇರುತ್ತವೆ ಎಂದು ಐಜಿಪಿ ಎಚ್ಚರಿಸಿದರು.
ಅಪಘಾತ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ ಐಜಿಪಿ ಕೆ.ವಿ.ಶರತ್ ಚಂದ್ರ, ಜಿಲ್ಲೆಯ ಮುರಗಮಲ್ಲದಲ್ಲಿ ಕಳೆದ ವರ್ಷ ನಡೆದ ರಸ್ತೆ ಅಪಘಾತದಲ್ಲಿ 11 ಮಂದಿ ಮೃತಪಟ್ಟ ಬಗ್ಗೆ ಉಲ್ಲೇಖೀಸಿ ಅಧಿಕಾರಿಗಳು, ಸಾರಿಗೆ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಮತ್ತು ಹೆದ್ದಾರಿ ಅಧಿಕಾರಿಗಳ ಸಹಭಾಗಿತ್ವದಲ್ಲಿ ಸುಪ್ರೀಂಕೋರ್ಟ್ ಆದೇಶಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಅಪಘಾತ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದರು.