Advertisement

ಸದಾ ಕೈಯಲಿ ಮೊಬೈಲ್‌

10:30 AM Aug 04, 2017 | |

ಹತ್ತಿರದ ಸಂಬಂಧಿಕರ ಮದುವೆಗೆ ಸಂಸಾರ ಸಮೇತ ಹೋಗಿದ್ದೆ. ಬಾಯಾರಿಕೆ ಕುಡಿದು ಪರಿಚಯದವರ ಹತ್ತಿರ ಮಾತಾಡುತ್ತ ಕುಳಿತಿದ್ದಾಗ ಹತ್ತರ ವಯಸ್ಸಿನ ನನ್ನ ಮಗ ಬಂದು, “”ಅಮ್ಮಾ… ನಿನ್ನ ಪರ್ಸ್‌ ಕೊಡು” ಎಂದು ಕೇಳಿದ. ಯಾಕಪ್ಪಾ ಇವನಿಗೆ ಪರ್ಸ್‌ ಅಂತ ಅನ್ನಿಸ್ತು. ಅದು ಹಳ್ಳಿ ಆದುದರಿಂದ ಹತ್ತಿರ ಅಂಗಡಿ ಏನೂ ಇಲ್ಲದ್ದರಿಂದ ಚಾಕೋಲೇಟ್‌ ತೆಗೆಯುವ ಆಸೆ ಏನೂ ಅಲ್ಲದ್ದರಿಂದ ಪರ್ಸ್‌ ಕೊಡದೆ “”ಯಾಕಪ್ಪಾ ಮಗನೇ ಪರ್ಸ್‌ ನಿನಗೆ” ಅಂತ ಕೇಳಿದೆ. ಉತ್ತರ ಕೊಡದೆ ಪರ್ಸ್‌ ಕೈಯಿಂದ ಎಳೆದು ಅದರೊಳಗಿಂದ ಮೊಬೈಲ್‌ ತೆಗೆದುಕೊಂಡು ಓಡಿದ. ಸ್ವಲ್ಪ ಹೊತ್ತು ಕಾಣಿಸ್ಲೇ ಇಲ್ಲ. ಎಲ್ಲಿದ್ದಾನೆ ನೋಡೋಣ ಅಂತ ಹುಡುಕುತ್ತ ಹೊರಟೆ. ಸ್ವಲ್ಪ ದೂರದಲ್ಲಿ ಏಳೆಂಟು ಮಕ್ಕಳು ಒಟ್ಟಿಗೆ ಕೂತು ಮೊಬೈಲಲ್ಲಿ ಅದೇನೋ ನೋಡ್ತಾ ಇದ್ರು. ಹತ್ತಿರ ಹೋಗಿ ನೋಡಿದೆ. ಮಗ ಯಾವುದೋ ಆಟ ಆಡ್ತಾ ಇದ್ದ. ಉಳಿದ ಮಕ್ಕಳು ಅವನ ಸುತ್ತ ಕೂತು ಆಟ ನೋಡ್ತಾ ಇದ್ರು. ಮಕ್ಕಳಲ್ಲಿ ಆಟವನ್ನು ನೋಡುವ ಆಸೆಯಿಂದ ಸಣ್ಣಪುಟ್ಟ ಮಕ್ಕಳೂ ಅವನ ಸುತ್ತ ಸೇರಿದ್ದರು. ಆಟದ ಎಡೆಯಲ್ಲಿ ಅವರ ಸುತ್ತಲಿನ ಪರಿವೆ ಇಲ್ಲದೆ ಅದರಲ್ಲೇ ಪೂರ್ತಿ ಗಮನ ಇತ್ತು ಅವರಿಗೆ.

Advertisement

ಇದು ಈಗ ಸಾಮಾನ್ಯವಾಗಿ ಎಲ್ಲಾ ಕಡೆ ಕಾಣಿಸುವ ಒಂದು ದೃಶ್ಯ. ಮೊದಲಿಗೆಲ್ಲಾ ಮಕ್ಕಳೆಲ್ಲಾ ಒಬ್ಬರಿಗೊಬ್ಬರು ಪರಿಚಯ ಆಗಿ ಆಟ ಆಡಲು ಶುರುಮಾಡಿದಾಗ ಮನೆಗೆ ಹೋಗುವ ಹೊತ್ತಾಗುತ್ತಿತ್ತು. ಆದರೆ ಈಗ ಮೊಬೈಲ್‌ನ ದೆಸೆಯಿಂದಾಗಿ ಮಕ್ಕಳಿಗೆ ಪರಿಚಯ ಬೇಡ, ಪರಿಚಯ ಇಲ್ಲದ ಸಂಕೋಚ ಕೂಡ ಕಾಣಿಸುವುದಿಲ್ಲ, ಒಬ್ಬ ಮೊಬೈಲ್‌ ಹಿಡ್ಕೊಂಡು ಆಡುವುದು ಕಂಡರೆ ಒಬ್ಬೊಬ್ಬರಾಗಿ ಅವನ ಸುತ್ತಮುತ್ತ ಕುಳಿತು ಆಟ ನೋಡುವುದರೊಂದಿಗೆ ಸಂಭಾಷಣೆಗೂ ತೊಡಗುತ್ತಾರೆ.

ಈ ಮೊಬೈಲ್‌ ಮಕ್ಕಳನ್ನು ಎಷ್ಟು ಹತ್ತಿರ ತರುತ್ತದೋ, ಅವರ ನಿಜವಾದ ಚಟುವಟಿಕೆಯನ್ನು ಅಷ್ಟೇ ದೂರ ಒಯ್ಯುತ್ತದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಯಾರೊಬ್ಬರೂ ಇದರಿಂದ ಹೊರಬರಲಾರದಷ್ಟು ಇದಕ್ಕೆ ಅಂಟಿಕೊಂಡಿದ್ದೇವೆ. ಈ ಮೊಬೈಲ್‌ನ ಆಟ, ವೀಡಿಯೋ ನೋಡುವುದರಿಂದ ಮಕ್ಕಳ ನಿಜವಾದ ಚಟುವಟಿಕೆ ಕಮರಿ ಹೋಗುತ್ತಿದೆಯೇನೋ ಅನ್ನಿಸ್ತಿದೆ. ಇದರಿಂದಾಗಿ ಅವರ ಶಾರೀರಿಕ ಚಟುವಟಿಕೆ ತುಂಬಾನೆ ಕಡಿಮೆ ಆಗುವುದರೊಂದಿಗೆ ಸುತ್ತಮುತ್ತಲಿನ ಆಗುಹೋಗುಗಳನ್ನು ಕೂಡಾ ಗಮನಿಸದಿರುವುದು ಕಂಡುಬರುತ್ತದೆ. ಮೊದಲೆಲ್ಲಾ ಮಕ್ಕಳು ಶಾಲೆ ಕೆಲಸ ಮುಗಿದ ನಂತರ ಯಾವುದಾದರೂ ಒಳಾಂಗಣ ಅಥವಾ ಹೊರಾಂಗಣ ಆಟ, ಕಥೆ ಪುಸ್ತಕ ಅಥವಾ ಬೇರೆ ಯಾವುದಾದರೂ ಪುಸ್ತಕ, ಪತ್ರಿಕೆ ಓದುವುದು, ಕೃಷಿಕರಾದರೆ ತೋಟಕ್ಕೆ ಹೋಗಿ ತೆಂಗು, ಅಡಿಕೆ ಹೆಕ್ಕುವುದು, ಬೇಸಿಗೆ ಆದರೆ ನೀರು ಹಾಕುವುದು, ಅಮ್ಮನೊಂದಿಗೆ ಹೂಗಿಡ, ತರಕಾರಿ ಗಿಡಗಳ ಆರೈಕೆ, ಜಾನುವಾರುಗಳ ಆರೈಕೆ ಇತ್ಯಾದಿ ಕೆಲಸಗಳನ್ನು ಹಿರಿಯರೊಂದಿಗೆ ಮಾಡುತ್ತಿದ್ದರು. ಈಗ ಹಳ್ಳಿಯೇ ಇರಲಿ ಪೇಟೆಯೇ ಇರಲಿ ಮಕ್ಕಳು ಸ್ವಲ್ಪ ಬಿಡುವು ಇದ್ದರೂ ಮೊಬೈಲ್‌ ಅಥವಾ ಕಂಪ್ಯೂಟರ್‌ ಮುಂದೆ ಇರುತ್ತಾರೆ. ಇದರಿಂದ ಒಳಿತಿಗಿಂತ ಹೆಚ್ಚು ಕೆಡುಕೇ ಇರುವುದು. ಇದರಿಂದ ಮಕ್ಕಳಿಗೆ ಶಾರೀರಿಕ ಚಟುವಟಿಕೆ ಕಡಿಮೆ ಆಗಿ ಆರೋಗ್ಯ ಸಮಸ್ಯೆ ಕಾಡುವುದು ಜಾಸ್ತಿ ಆಗುವ ಸಂಭವ ಇದೆ. ಬೊಜ್ಜಿನಂಥ ಸಮಸ್ಯೆ ಸಣ್ಣ ಮಕ್ಕಳಲ್ಲಿ ಬೇಗನೆ ಕಾಣಿಸಬಹುದು. ಮಕ್ಕಳು ಪ್ರಕೃತಿಯಿಂದ ನೋಡಿ ಕಲಿಯುವ ಕ್ರಮವೂ ಕಡಿಮೆ ಆಗಿ ಇರಬೇಕಾದ ಸಾಮಾನ್ಯ ಜ್ಞಾನವೇ ಸಿಗದಿರಬಹುದು. ಮಕ್ಕಳ ಮನಸ್ಸಿನ ಮೇಲೂ ಕೆಟ್ಟ ಪರಿಣಾಮ, ಒತ್ತಡ ಬೀಳಬಹುದು.

ಇದಕ್ಕೆಲ್ಲಾ ಕಾರಣ? ಹೆತ್ತವರು ಮತ್ತು ಸುತ್ತಲಿನ ಸಮಾಜ. ಸ್ವಲ್ಪ ಬಿಡುವು ದೊರೆತರೂ ಮೊಬೈಲ್‌ ಹಿಡಿದು ಚಾಟಿಂಗ್‌ ಶುರು ಮಾಡುವವರೇ ಜಾಸ್ತಿ ಈಗ. ಫೇಸ್‌ಬುಕ್‌, ವಾಟ್ಸಾಪ್‌ ಅಂತ ಅದರಲ್ಲೇ ಎಲ್ಲ. ಎದುರು ಕಂಡಾಗ ಪರಿಚಯ ಇಲ್ಲದವರ ಹಾಗೇ ಮಾತಾಡದವರೇ ಆದ್ರೂ ಫೇಸ್‌ಬುಕ್‌ ಅಲ್ಲಿ ಫ್ರೆಂಡ್‌ ಆಗಿರುವುದು ಒಂದು ವಿಪರ್ಯಾಸ. ಮನೆಯವರೆಲ್ಲ ಒಟ್ಟಿಗೆ ಕುಳಿತು ಮಾತುಕತೆ, ಹರಟೆ, ತಮಾಷೆ, ವಿಚಾರ ವಿನಿಮಯ ಈಗ ತುಂಬಾ ವಿರಳ. ಬಿಡುವು ಇದ್ದಾಗ ಹಿರಿಯರಲ್ಲಿ ಮೊಬೈಲ್‌ ಆದ್ರೆ ಮಕ್ಕಳು ಟಿ.ವಿ. ಅಥವಾ ಕಂಪ್ಯೂಟರ್‌ ಮುಂದೆ. ಅಪ್ಪ ಅಮ್ಮ ಮೊಬೈಲ್‌ ಕೆಳಗೆ ಇಟ್ಟಾಗ ಅದು ಮಕ್ಕಳ ಕೈಗೆ. ಹೆಚ್ಚಾಗಿ ಅಮ್ಮಂದಿರ ಮೊಬೈಲ್‌ ಮಕ್ಕಳ ಹತ್ರ ಕಾಣಿಸುವುದು. ಅದಕ್ಕೆ ಕಾರಣ ಹಲವು. ಆಗ ತಾನೇ ಹೊಟ್ಟೆ ಎಳೆದುಕೊಂಡು ಹೋಗುವ ಮುದ್ದು ಕಂದಮ್ಮ ಕೂಡಾ ಮೊಬೈಲ್‌ ಕಂಡ್ರೆ ಪರಿಚಯ ಇಲ್ಲದವರ ಹತ್ರ ಕೂಡಾ ಹೋಗಿ ಮೊಬೈಲ್‌ ನೋಡ್ಕೊಂಡು ಕೂತುಬಿಡುತ್ತದೆ. ಒಮ್ಮೆ ತೊದಲು ನುಡಿ ಆಡುವ ಒಂದು ಮಗು ನನ್ನತ್ರ ಬಂದು, “”ನಾನೂ… ಅಪ್ಪನ ಮೊಬೇಯು… ಹಿಕ್ಕೊಂಡು… ಕೂತಿಯೇನೆ…” ಅಂತ ಕಣ್ಣು ಮುಖ ಅರಳಿಸಿ ಹೇಳುವುದು ನೋಡಿ, ಅಯ್ಯೋ ಅನ್ನಿಸಿಬಿಡ್ತು. ದೊಡ್ಡವರನ್ನು ಅನುಸರಿಸುವ ಮಗು ಅದೊಂದು ದೊಡ್ಡ ಕೆಲಸ ಅಂದುಕೊಂಡಿತ್ತೋ ಏನೋ. ಅದೇನು ಆಕರ್ಷಣೆಯೋ… ಅಬ್ಟಾ! ಈ ಗೀಳಿನಿಂದ ಮಕ್ಕಳನ್ನು ಹೊರ ತರುವುದು ಹೇಗೆ?

ಮೊದಲು ಹೆತ್ತವರೇ ಅದರಿಂದ ಹೊರಬಂದು ಮೊಬೈಲ್‌ ಬಳಕೆ ಆದಷ್ಟೂ ಕಮ್ಮಿ ಮಾಡುವುದು ಅದರಲ್ಲೂ ಮಕ್ಕಳ ಮುಂದೆ ಆದಷ್ಟೂ ಅಗತ್ಯ ಇರುವಾಗ ಮಾತ್ರ ಮೊಬೈಲ್‌ ಬಳಕೆ ಮಾಡುವುದು, ಮಕ್ಕಳಿಗೆ ಅದರ ಒಳಿತು ಕೆಡುಕನ್ನು ಆದಷ್ಟು ಮನದಟ್ಟಾಗುವಂತೆ ಹೇಳುವುದು. ಮಕ್ಕಳನ್ನು ಇತರ ಚಟುವಟಿಕೆಗಳಿಗೆ ಆದಷ್ಟೂ ಪ್ರೋತ್ಸಾಹಿಸುವುದು ಉದಾಹರಣೆಗೆ ಆಟ, ಕೈತೋಟದ ಕೆಲಸ, ಆದಷ್ಟೂ ಸಣ್ಣಪುಟ್ಟ ಮನೆ ಕೆಲಸಗಳನ್ನು ಮಾಡಿಸುವುದು, ಮನೆ ಹತ್ತಿರದ ಲೈಬ್ರೆರಿಗೆ ಮಕ್ಕಳೂ ಹೆತ್ತವರೂ ಒಟ್ಟಿಗೆ ಹೋಗಿ ಒಳ್ಳೆಯ ಪುಸ್ತಕ ಆಯ್ದು ಓದುವುದು, ಸಂಗೀತ, ನೃತ್ಯ, ಯಾವುದಾದರೂ ಒಳ್ಳೆಯ ಇಂಥ ಕಥೆ ಕೇಳುವುದನ್ನು ಹೆಚ್ಚು ಇಷ್ಟಪಡ್ತಾರೆ. ಆದರೆ ಈಗ ಕಥೆ ಹೇಳುವ ಅಜ್ಜಿ, ಅಜ್ಜ, ಅಪ್ಪ, ಅಮ್ಮ ಯಾರೂ ಇರುವುದಿಲ್ಲ. ಯಾರಿಗೂ ಮಕ್ಕಳೊಂದಿಗೆ ಬೆರೆಯಲು ಬಿಡುವು ಇರುವುದಿಲ್ಲ. ರಾಮಾಯಣ, ಮಹಾಭಾರತ ಅಥವಾ ಇತರ ಯಾವುದೇ ಕಥೆ ಹೇಳಿದರೂ ಮಕ್ಕಳು ಮೊಬೈಲ್‌ ಬದಿಗಿಟ್ಟು ಆಸಕ್ತಿಯಿಂದ ಕೇಳುತ್ತಾರೆ. ಅದಕ್ಕೆ ಈಗಿನ ಹೆತ್ತವರಿಗೆ ಬಿಡುವು ಇರದಿರುವುದು, ಮಕ್ಕಳ ಒಬ್ಬಂಟಿತನ ಅವರು ಮೊಬೈಲ್‌, ಕಂಪ್ಯೂಟರ್‌, ಟಿ.ವಿ. ಅಂತ ಗೀಳಿಗೆ ಶರಣಾಗಲು ಮುಖ್ಯವಾದ ಕಾರಣ ಆಗಿರಬಹುದು.

Advertisement

ಈಗಿನ ಮಕ್ಕಳಿಗೆ ಪುಸ್ತಕ ಓದುವ ಅಭಿರುಚಿ ಹಿಡಿಸುವುದು ತುಂಬಾ ಕಷ್ಟ. ಆದರೆ ಅಸಾಧ್ಯವೇನೂ ಅಲ್ಲ. ಒಮ್ಮೆ ಆ ಅಭಿರುಚಿ ಹಿಡಿದರೆ ಮೊಬೈಲ್‌ ಬಳಕೆ ಕಡಿಮೆ ಆಗುವುದಂತೂ ಖಂಡಿತ. ಅವರ ಜ್ಞಾನ ವೃದ್ಧಿಗೂ ಕೂಡಾ ಇದು ಉಪಯುಕ್ತವಾಗಬಹುದು. ನಾನು ಈಗ ಅದೇ ದಾರಿಯಲ್ಲಿ ಇದ್ದೇನೆ… ನೀವೂ…? ಮೊಬೈಲ್‌ ಬಳಕೆ ಅಗತ್ಯ ಆದರೂ ಅದು ಅತಿರೇಕಕ್ಕೆ ಹೋದರೆ ಅಪಾಯದ ಸಂಭವ ಹೆಚ್ಚು. ಮಕ್ಕಳಿಗೂ ಇದನ್ನು ಮನದಟ್ಟಾಗಿಸೋಣ.

ಚೇತನಾ ವಿ. ಮಿತ್ರ

Advertisement

Udayavani is now on Telegram. Click here to join our channel and stay updated with the latest news.

Next