ಈ ಹಕ್ಕಿ ಹೆಜ್ಜೆ ಇಟ್ಟಾಗೊಮ್ಮೆ ಬಾಲ ಕುಣಿಸುತ್ತದೆ. ಅದೇ ಕಾರಣದಿಂದ ಇದನ್ನು ಕುಂಡೆಕುಸ್ಕ ಎಂದು ಕರೆಯುವುದುಟು. ರೆಕ್ಕೆ ಹುಳುಗಳಂಥ ಹಾರುವ ಹುಳುಗಳನ್ನು ತಾನೂ ಹಾರುತ್ತಿರುವಾಗಲೇ ಹಿಡಿದು ತಿನ್ನುವುದು ಕುಂಡೆಕುಸ್ಕದ ಹೆಚ್ಚುಗಾರಿಕೆ.
ಈ ಹಕ್ಕಿಯನ್ನು ಬಿಳಿ ಬಾಲ ಬಡಕ, ಬಿಳಿ ಬಾಲ ಕುಣಿಸುವ ಹಕ್ಕಿ ಎಂದು ಕರೆಯುತ್ತಾರೆ. ಹೆಜ್ಜೆಗೊಮ್ಮ ತನ್ನ ಬಾಲ ಕುಣಿಸುವುದರಿಂದ ಇದಕ್ಕೆ ಕುಂಡೆಕುಸ್ಕ ಹೆಸರು ಬಂದಿದೆ. ದೊಡ್ಡ ಬಾಲ ಕುಣಿಸುವ ಹಕ್ಕಿಗಿಂತ ಚಿಕ್ಕದು. ಇದು 18 ಸೆಂ.ಮೀ ನಷ್ಟು ಮಾತ್ರ ಉದ್ದವಿರುವ ಚಿಕ್ಕ ಹಕ್ಕಿ. ಕಪ್ಪು, ಬಿಳಿ, ಬೂದು, ಹಳದಿ ಬಣ್ಣ ಇರುವ, ಪಿಪಿಟ್ ಗುಬ್ಬಿಯನ್ನು ತುಂಬಾ ಹೋಲುವ ಈ ಹಕ್ಕಿಯನ್ನು ಮೆಟ್ಯಾಸಿಲ್ಲಿಡಿ ಕುಟುಂಬಕ್ಕೆ ಸೇರಿಸಲಾಗಿದೆ.
ಇದು ಬಣ್ಣದಲ್ಲಿ ಪಿಪಿಟ್ ಹಕ್ಕಿಯನ್ನು ಹೋಲುತ್ತದೆ. ಇದು ಮೇಲೆ ಕೆಳಗೆ ಸದಾ ತನ್ನ ಬಾಲ ಕುಣಿಸುತ್ತಾ ಹುಳ ಹಪ್ಪಡಿ ಹಿಡಿದು ತಿನ್ನುತ್ತಾ ತುಂಬಾ ಚುರುಕಾಗಿ ಓಡಾಡುವ ಹಕ್ಕಿ. ಬಯಲು ಪ್ರದೇಶ, ಹುಲ್ಲುಗಾವಲು, ಕಟಾವಾದ ಭತ್ತದ ಗದ್ದೆ, ನದೀ ತೀರ, ಹರಿವ ನೀರಿನ ಪಕ್ಕದಲ್ಲಿರುವ ಜೌಗು ಪ್ರದೇಶ, ಕಾಡಿನ ರಸ್ತೆ ಪಕ್ಕ ಸಹ ವೈಯ್ನಾರದಿಂದ ತನ್ನ ಬಾಲ ಕುಣಿಸುತ್ತಾ, ಓಡಾಡುವ ಹುಳ,ಹುಪ್ಪಡಿಗಳನ್ನು ಹಿಡಿದು ತಿನ್ನುತ್ತದೆ.
ಇದು ಆಕಾರದಲ್ಲಿ ಪಿಕಳಾರ ಇಲ್ಲವೇ ಬುಲ್ ಬುಲ್ ಹಕ್ಕಿಯನ್ನು ಹೋಲುತ್ತದೆ. ಹಣೆಗೆ ಕೆನ್ನೆ, ಹೊಟ್ಟೆ, ಬಾಲದ ಅಂಚು, ರೆಕ್ಕೆಯ ಬದಿಯಲ್ಲಿ ಬಿಳಿ ಬಣ್ಣ ಎದ್ದು ಕಾಣುತ್ತದೆ. ಇದರಿಂದ ಕಪ್ಪು, ಬಿಳಿ ಬಣ್ಣ ಇರುವ ಮಡಿವಾಳ ಹಕ್ಕಿ. ಪಿಪಿಟ್‌ಗಳಿಂದ ಇದನ್ನು ಪ್ರತ್ಯೇಕವಾಗಿ ಗುರುತಿಸಬಹುದು. ಪಿಪಿಟ್, ಮಡಿವಾಳ ಹಕ್ಕಿ -ಬಿಳಿ ಕುಂಡೆಕುಸ್ಕದಂತೆ ಸತತವಾಗಿ ಬಾಲ ಕುಣಿಸುವುದಿಲ್ಲ. ರೆಕ್ಕೆ, ಬಾಲ, ತಲೆ -ಕಂದು ಗಪ್ಪು ಬಣ್ಣ ಇದೆ. ನೆಲದಲ್ಲಿ ಓಡಾಡಿ ಹುಳ ಹುಪ್ಪಡಿ ಹಿಡಿಯಲು ಅನುಕೂಲವಾಗುವಂತೆ ಬಲವಾದ ಕಾಲಿದೆ.
ಕಾಲಿನ ಮುಂದೆ ಮೂರು, ಹಿಂದೆ ಒಂದು ಬೆರಳಿದೆ. ಇದು ನೆಲದಲ್ಲಿ ಓಡಾಡಲು, ದೇಹದ ಸಮತೋಲನ ಕಾಯ್ದುಕೊಂಡು- ಗಾಬರಿಯಾದಾಗ ವೇಗವಾಗಿ ದೂರ ಹಾರಿ ಹೋಗಿ ಕುಳಿತುಕೊಳ್ಳಲು ಸಹಾಯಕವಾಗಿದೆ. ಕೆಲವೊಮ್ಮ ರೆಕ್ಕೆ ಹುಳಗಳಂಥ ಹಾರುವ ಹುಳಗಳನ್ನು, ತಾನೂ ಹಾರುತ್ತಲೇ ಹಿಡಿದು ತಿನ್ನುತ್ತದೆ. ಇದರ ಕಾಲು ಕಪ್ಪು ಬಣ್ಣದಿಂದ ಕೂಡಿದೆ. ಎದೆಯ ಮೇಲಿರುವ ಕಪ್ಪು ಬಣ್ಣ , ಮಫ್ಲರ್‌ನಂತೆ ಕಾಣುತ್ತದೆ.
ಈ ಪಕ್ಷಿಗಳಲ್ಲಿ ಅನೇಕ ಕುತೂಹಲ ಮತ್ತು ಸೂಕ್ಷ್ಮ ಸಂಗತಿಗಳಿವೆ. ಈ ಸಂಬಂಧವಾಗಿ ಹೆಚ್ಚಿನ ಅಧ್ಯಯನ ನಡೆದರೆ ಮಾತ್ರ ಸತ್ಯಸಂಗತಿ ತಿಳಿದೀತು. ಜೋಡಿಯಾಗಿ ಇಲ್ಲವೇ ಚಿಕ್ಕ ಗುಂಪಿನಲ್ಲಿ -ಹೊಳೆ, ಕೆರೆದಂಡೆಯಲ್ಲಿ, ಹುಲ್ಲಿನ ಬಯಲುಗಳಲ್ಲಿ ಹೆಚ್ಚಾಗಿ ಕಾಣುತ್ತದೆ. ಸೈಬೀರಿಯಾದಲ್ಲಿ ಇದು ಮರಿಮಾಡುತ್ತದೆ. ಚಳಿಗಾಲ ಕಳೆಯಲು ಭಾರತದ ಉಪ ಖಂಡಕ್ಕೆ ವಲಸೆ ಬರುವ ಹಕ್ಕಿ ಇದು.
ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳುವಲ್ಲಿ ಇದರ ಪಾತ್ರ ಹಿರಿದು. ಕೆಲವೊಂದು ಸೂಕ್ಷ್ಮ ಜೀವಿಗಳನ್ನು ಹಿಡಿದು ತಿನ್ನುವುದರಿಂದ ಬೆಳೆಗಳಿಗೆ ಆಗುವ ಹಾನಿ ಇದರಿಂದ ನಿಯಂತ್ರಣಕ್ಕೆ ಬರುವುದು. ಮನುಷ್ಯರ ಕಾಯಿಲೆಗೆ ಕಾರಣವಾಗುವ ಅದೆಷ್ಟೋ ರೋಗಾಣುಗಳನ್ನು ನಿಯಂತ್ರಿಸಲು ಇದು ನೆರವಾಗುತ್ತದೆ. ವರ್ಣ ವ್ಯತ್ಯಾಸ ಆಧರಿಸಿ 4 ಉಪಜಾತಿಗಳನ್ನು ಈ ಹಕ್ಕಿಯಲ್ಲಿ ಮಾಡಲಾಗಿದೆ. ಪಂಜಾಬ್, ಕಾಶ್ಮೀರ, ಅಸ್ಸಾಮ್, ಬಂಗಾಲ, ಕರ್ನಾಟಕ, ಕೇರಳ, ತಮಿಳು ನಾಡಿನಲ್ಲೂ ಇವು ಕಂಡಿವೆ.
* ಪಿ. ವಿ. ಭಟ್ ಮೂರೂರು