ಮೂಡಬಿದಿರೆ: ತುಳುವರು ತಮ್ಮ ಮನೆಯಲ್ಲಿ, ಒಡನಾಡಿಗಳಲ್ಲಿ ತುಳುವಿನಲ್ಲೇ ಮಾತನಾಡುವ ಮನೋಭಾವ ಬೆಳೆಸಬೇಕು. ತುಳುವಿನಲ್ಲಿ ಮಾತನಾಡಿದಾಗ ಮಾತ್ರ ನಮ್ಮಲ್ಲಿ ಆಪ್ತತೆ ಮೂಡುತ್ತದೆ. ಮನೆಯ ಹಿರಿಯರ ಅಂತರಂಗಕ್ಕೆ ಹತ್ತಿರವಾಗುತ್ತೇವೆ. ಭಾಷೆ ಬಳಸಿದರೆ ಮಾತ್ರ ಉಳಿಯುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಹೇಳಿದರು.
ಮೂಡಬಿದಿರೆ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಶನಿವಾರ ನಡೆದ ‘ಆಳ್ವಾಸ್ ತುಳು ರಂಗ್ 2018’ ಅಂತರ್
ಕಾಲೇಜು ತುಳು ಸಾಂಸ್ಕೃತಿಕ ಸ್ಪರ್ಧೆ ಮತ್ತು ಪಂತ ಪ್ರದರ್ಶನ ಮೇಳವನ್ನು ಸೇರಿಗೆ ಭತ್ತ ತುಂಬಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ಕುರಿಯನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ಸಂಸ್ಕೃತಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಗುಣವಿದೆ. ತುಳುವರ ಪ್ರಕೃತಿ ಆರಾಧನೆಯ ಸಂಸ್ಕೃತಿ ಇಂದು ಇನ್ನಷ್ಟು ಪ್ರಸ್ತುತವಾಗುತ್ತಿದೆ ಎಂದರು. ತುಳು ಅಧ್ಯಯನ ಕೇಂದ್ರದ ಸಂಯೋಜಕ ಡಾ| ಯೋಗೀಶ ಕೈರೋಡಿ ಉಪಸ್ಥಿತರಿದ್ದರು. ಮೈತ್ರಿ ಸ್ವಾಗತಿಸಿದರು. ಸಯ್ಯದ್ ವಂದಿಸಿದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಸ್ಪರ್ಧೆ
ತುಳು ಸಂಸ್ಕೃತಿಯನ್ನು ಅನಾವರಣ ಮಾಡುವ ಪದರಂಗಿತ, ಪಾತೆರಕತೆ, ಸಬಿ ಸವಾಲ್, ನಾಟ್ಯ ನಟನೆ ಮೊದಲಾದ ಸ್ಪರ್ಧೆ ಗಳನ್ನು ಹಾಗೂ ಪ್ರಶಂಸ ಕಾಪು ತಂಡದಿಂದ ‘ಬಲೇ ತೆಲಿಪುಲೆ’ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.