Advertisement

ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ಹೊಸ ಭಾಷ್ಯ ಬರೆದ ಆಳ್ವಾಸ್‌ ನುಡಿಸಿರಿ

06:00 AM Nov 23, 2018 | |

ವಿಶ್ವದಾದ್ಯಂತ ಭಾರತೀಯತೆಯ ಆಧಾರದಡಿಯಲ್ಲಿ ತನ್ನ ಸಾಹಿತ್ಯ ಕೃಷಿಯನ್ನು ಹೊಸೆದು ಕೆಲಸ ಮಾಡುವ ಸಾಹಿತಿಗಳ ಬಹುದೊಡ್ಡ ಗುಂಪು, ಕವಿಗಳ ಮೇಳ, ಜಾನಪದ ಸಾಹಿತ್ಯದ ರಂಗು, ಕಲೆ ಸಾಂಸ್ಕೃತಿಕ ತಂಡಗಳು ಒಂದೆಡೆ ಸೇರಿ ಮೇಳೈಸುವುದಕ್ಕೆ ವೇದಿಕೆ ಕಲ್ಪಿಸುತ್ತದೆ ಆಳ್ವಾಸ್‌ ನುಡಿಸಿರಿ ಸಾಹಿತ್ಯ, ಸಾಂಸ್ಕೃತಿಕ ಜಾತ್ರೆ. 

Advertisement

ಕನ್ನಡ ನಾಡಿನ ಜ್ಞಾನ ರಾಜಧಾನಿ ದಕ್ಷಿಣಕನ್ನಡ, ಬೌದ್ಧಿಕ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆ ನೀಡಿದ ಕೀರ್ತಿ ದಕ್ಷಿಣ ಕನ್ನಡಕ್ಕೆ ಸೇರುತ್ತದೆ. ಎಲ್ಲೋ ಒಂದು ಕಡೆಯಿಂದ ಈ ರೀತಿಯ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಕೊರತೆಯಿತ್ತು. ಅದನ್ನು ತುಂಬಿಸುವಂತಹ ಕಾರ್ಯ ಆಳ್ವಾಸ್‌ ನುಡಿಸಿರಿ ಜಾತ್ರೆಯ ಮೂಲಕ ಆಳ್ವಾಸ್‌ ಕಾಲೇಜು ಕಳೆದ ಹದಿನಾಲ್ಕು ವರ್ಷಗಳಿಂದ ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಆಳ್ವಾಸ್‌ ವಿದ್ಯಾಗಿರಿಯ ನೆಲದಲ್ಲಿ ಇದು ಹದಿನೈದನೆಯ ನುಡಿಸಿರಿ ಕಾರ್ಯಕ್ರಮ. 

ನಾಡಿನ ಸಂಸ್ಕೃತಿ, ಸಂಪ್ರದಾಯ, ಕಲೆ, ಸಾಹಿತ್ಯ, ವೈಚಾರಿಕತೆ, ಒಟ್ಟಿನಲ್ಲಿ ಕರ್ನಾಟಕ ಕಲ್ಪನೆಯನ್ನು ಈ ನುಡಿಸಿರಿ ಉತ್ಸವದ ಮೂಲಕ ಯುವ ಸಮುದಾಯಕ್ಕೆ ಧಾರೆ ಎರೆಯುವ ಪ್ರಯತ್ನವಿದು. ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಸಮ್ಮೇಳನ ಆಳ್ವಾಸ್‌ ನುಡಿಸಿರಿ. 

ಜಾಗತೀಕರಣದ ಧಾವಂತದಲ್ಲಿ ಇಂದು ವಿಜ್ಞಾನ ಒಂದು ಜ್ಞಾನವಾಗಿ ಬೆಳೆದಿದೆಯೆ ಹೊರತು, ಒಂದು ವಿಶೇಷವಾದ ಜ್ಞಾನವಾಗಿ ಬೆಳೆದಿಲ್ಲ ಎನ್ನುವ ಅನಿಸಿಕೆ ನನ್ನದು. ಯಾಂತ್ರಿಕ ಬದುಕು, ಅಟ್ಟವೇರಿದ ಸಂಸ್ಕೃತಿ-ಆಚಾರ-ವಿಚಾರ, ಸಂಪ್ರದಾಯ ಎಂದರೆ ಏನು ಎಂಬ ಪ್ರಶ್ನೆ ಕೇಳುವ ಧೋರಣೆ, ವ್ಯಾಪಾರೀಕರಣದ ತತ್ವ ದೇಶದ, ನಾಡಿನ ಸಂಸ್ಕೃತಿಗಳ ಪ್ರತಿನಿಧೀಕರಣದ ಮೇಲೆ ನಡೆಸುವ ದಾಳಿಯ ವಿರುದ್ಧ ಬಹುರೂಪಿ ಸಂಸ್ಕೃತಿಯ ಪ್ರತಿಪಾದನೆ, ನಾಳೆಯ ದಿನಗಳಲ್ಲಿ ನಾಡನ್ನು ಕಟ್ಟಿ ಬೆಳೆಸುವ ಯುವ ಪೀಳಿಗೆಗೆ ಬೆಳಕಾಗಬೇಕೆಂಬುವುದೇ ಈ ನುಡಿ ಜಾತ್ರೆಯ ಮುಖ್ಯ ಆಶಯ.  

ಆಳ್ವಾಸ್‌ ನುಡಿಸಿರಿಯ ಹೆಜ್ಜೆಗುರುತು
.2004ರಲ್ಲಿ ಕನ್ನಡ ಮನಸ್ಸು; ಸಾಹಿತ್ಯಿಕ ಸಾಂಸ್ಕೃತಿಕ ಸವಾಲುಗಳು ಎಂಬ ಪರಿಕಲ್ಪನೆಯಡಿಯಲ್ಲಿ ಕನ್ನಡ ನಾಡಿನ ಪ್ರಸಿದ್ಧ ಬಂಡಾಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ಆಳ್ವಾಸ್‌ ನುಡಿಸಿರಿ ಮೊದಲ್ಗೊಂಡಿತು. 

Advertisement

.ಎರಡನೆಯ ಆಳ್ವಾಸ್‌ ನಡಿಸಿರಿ (2005)  ಕಾದಂಬರಿಕಾರ ಡಾ. ಎಸ್‌. ಎಲ್‌. ಭೈರಪ್ಪರ ಅಧ್ಯಕ್ಷತೆಯಲ್ಲಿ ಕನ್ನಡ ಮನಸ್ಸು; ಬೌದ್ಧಿಕ ಸ್ವಾತಂತ್ರ್ಯ ಎಂಬ ವಿಷಯದಲ್ಲಿ ನಡೆಯಿತು.

. ಮೂರನೆಯ ನುಡಿಸಿರಿ (2006) ಕನ್ನಡ ಮನಸ್ಸು-ಪ್ರಚಲಿತ ಪ್ರಶ್ನೆಗಳು ಎಂಬ ವಿಷಯದ ಆಧಾರದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ, ನಾಟಕಕಾರ ಡಾ. ಚಂದ್ರಶೇಖರ ಕಂಬಾರರ ಸರ್ವಾಧ್ಯಕ್ಷತೆಯಲ್ಲಿ ನಡೆಯಿತು. 

.ನಾಲ್ಕನೆಯ ಆಳ್ವಾಸ್‌ ನುಡಿಸಿರಿ (2007) ಖ್ಯಾತ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯರವರ ಸರ್ವಾಧ್ಯಕ್ಷತೆಯಲ್ಲಿ ಕನ್ನಡ ಮನಸ್ಸು; ಸಾಹಿತಿಯ ಜವಾಬ್ದಾರಿ ಎಂಬ ವಿಚಾರದಡಿಯಲ್ಲಿ ನಡೆಯಿತು.

.ಕನ್ನಡ ಮನಸ್ಸು; ಶಕ್ತಿ ಮತ್ತು ವ್ಯಾಪ್ತಿ ಎಂಬ ಪರಿಕಲ್ಪನೆಯಲ್ಲಿ ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿ ಅವರ ಸರ್ವಾಧ್ಯಕ್ಷತೆಯಲ್ಲಿ ಐದನೇ ನುಡಿಸಿರಿ (2008) ನಡೆಯಿತು. 

.ಆರನೇ ನುಡಿಸಿರಿಯನ್ನು (2009) ಕನ್ನಡ ಮನಸ್ಸು- ಸಮನ್ವಯದೆಡೆಗೆ ಎಂಬ ಕಲ್ಪನೆಯಲ್ಲಿ ಹಿರಿಯ ಸಂಶೋಧಕ ಡಾ. ಹಂಪ ನಾಗರಾಜಯ್ಯರವರ ಸರ್ವಾಧ್ಯಕ್ಷತೆ ವಹಿಸಿ ನಡೆಸಿದರು. 

. ಹಿರಿಯ ಹೆಸರಾಂತ ಸಾಹಿತಿ ಶ್ರೀಮತಿ ವೈದೇಹಿ ಅವರು 
ಏಳನೇ ಆಳ್ವಾಸ್‌ ನಡಿಸಿರಿಯನ್ನು (2010) ಕನ್ನಡ ಮನಸ್ಸು; ಜೀವನ ಮೌಲ್ಯಗಳು ಎಂಬ ವಿಚಾರದಲ್ಲಿ ಸರ್ವಾಧ್ಯಕ್ಷತೆ ವಹಿಸಿ ನಡೆಸಿದರು.

. 2011ರಲ್ಲಿ ಕನ್ನಡ ಮನಸ್ಸು- ಸಂಘರ್ಷ ಮತ್ತು ಸಾಮರಸ್ಯ ಎಂಬ ಪರಿಕಲ್ಪನೆಯಡಿ ಹಿರಿಯ ಸಂಶೋಧಕ ನಾಡೋಜ ಎಂ. ಎಂ. ಕಲಬುರ್ಗಿ ಅವರ ಸರ್ವಾಧ್ಯಕ್ಷತೆಯಲ್ಲಿ ಎಂಟನೆಯ ಆಳ್ವಾಸ್‌ ನುಡಿಸಿರಿ ನಡೆಯಿತು. 

.ನಿತ್ಯೋತ್ಸವ ಕವಿ ಪದ್ಮಶ್ರೀ ನಾಡೋಜ ಪ್ರೊ. ಕೆ. ಎಸ್‌. ನಿಸಾರ್‌ ಅಹಮ್ಮದ್‌ರವರ ಅಧ್ಯಕ್ಷತೆಯಲ್ಲಿ ಒಂಬತ್ತನೆಯ ಆಳ್ವಾಸ್‌ ನುಡಿಸಿರಿ (2012) ಕನ್ನಡ ಮನಸ್ಸು; ಜನಪರ ಚಳುವಳಿಗಳು ಎಂಬ ವಿಷಯದಲ್ಲಿ ನಡೆಯಿತು.

. 2013ರಲ್ಲಿ ಹತ್ತನೆಯ ನುಡಿಸಿರಿಯನ್ನು ಬಹಳ ವಿಶೇಷವಾಗಿ ವಿಶ್ವ ನುಡಿಸಿರಿ ಶೀರ್ಷಿಕೆಯಡಿಯಲ್ಲಿ ಕನ್ನಡ ಮನಸ್ಸು; ಅಂದು ಇಂದು ಮುಂದು ಎಂಬ ಪರಿಕಲ್ಪನೆಯನ್ನು ಆಧಾರಿಸಿ, ಜಾನಪದ ವಿದ್ವಾಂಸರಾದ ಡಾ. ಬಿ. ಎ. ವಿವೇಕ ರೈ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಿತು. 

.ಖ್ಯಾತ ಕವಿ ನಾಡೋಜ ಡಾ. ಸಿದ್ಧಲಿಂಗಯ್ಯರವರ ಅಧ್ಯಕ್ಷತೆಯಲ್ಲಿ ಹನ್ನೊಂದನೆಯ ನುಡಿಸಿರಿ (2014) ಕರ್ನಾಟಕ; ವರ್ತಮಾನದ ತಲ್ಲಣಗಳು ಎಂಬ ವಿಷಯದಡಿಯಲ್ಲಿ ನಡೆಯಿತು.

.2015ರಲ್ಲಿ ಕರ್ನಾಟಕ; ಹೊಸತನದ ಹುಡುಕಾಟ ಎಂಬ ಪರಿಕಲ್ಪನೆಯಡಿಯಲ್ಲಿ ಡಾ. ಟಿ. ವಿ. ವೆಂಕಟಾಚಲಶಾಸ್ತ್ರೀಯವರ ಅಧ್ಯಕ್ಷತೆಯಲ್ಲಿ ಹನ್ನೆರಡನೇ ಆಳ್ವಾಸ್‌ ನುಡಿಸಿರಿ ನಡೆಯಿತು. 

.ಹದಿಮೂರನೆಯ ಆಳ್ವಾಸ್‌ ನುಡಿಸಿರಿ (2016) ಡಾ. ಬಿ. ಎನ್‌. ಸುಮಿತ್ರಾ ಬಾಯಿರವರ ಸರ್ವಾಧ್ಯಕ್ಷತೆಯಲ್ಲಿ ಕರ್ನಾಟಕ ಎಂಬ ವಿಷಯದಡಿಯಲ್ಲಿ ನಡೆಯಿತು.

.2017ರಲ್ಲಿ ಹದಿನಾಲ್ಕನೆಯ ಆಳ್ವಾಸ್‌ ನುಡಿಸಿರಿ ಖ್ಯಾತ ನಿರ್ದೇಶಕ, ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್‌ರವರ ಸಮ್ಮೇಳನಾಧ್ಯಕ್ಷತೆಯಲ್ಲಿ ಕರ್ನಾಟಕದ ಬಹುತ್ವದ ನೆಲೆಗಳು ಎಂಬ ಪರಿಕಲ್ಪನೆಯಡಿಯಲ್ಲಿ ನಡೆಯಿತು. 

ಈಗಾಗಲೇ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ ಹದಿನೈದನೆಯ ಆಳ್ವಾಸ್‌ ನುಡಿಸಿರಿಗೆ ಇತಿಹಾಸ ಪುಟಗಳಲ್ಲಿ ಅಚ್ಚಳಿಯದ ಅಕ್ಷರಗಳಾಗಿವೆ. ಈ ಬಾರಿಯೂ ಕೂಡ ನುಡಿಸಿರಿ ಸಮಿತಿ ಬಹುಮುಖ್ಯ ಪರಿಕಲ್ಪನೆಯೊಂದನ್ನು ಮುಂದಿಟ್ಟುಕೊಂಡು ಸಮ್ಮೇಳನವನ್ನು ಆಯೋಜಿಸಿತ್ತು. ನಾಡು, ನುಡಿ, ಸಾಹಿತ್ಯ, ಸಂಪ್ರದಾಯ, ಸಂಸ್ಕೃತಿ, ಶೈಕ್ಷಣಿಕ, ರಾಜಕೀಯ, ಸಮಾಜ ಮುಂತಾದ ವಿಚಾರಗಳಲ್ಲಿ ವೈವಿಧ್ಯಮಯ ಸಾಧ್ಯಸಾಧ್ಯತೆಗಳನ್ನು ಗಮನಿಸಿ ಕರ್ನಾಟಕ ದರ್ಶನ; ಬಹುರೂಪಿ ಆಯಾಮಗಳು ಎಂಬ ವಿಷಯದ ಆಧಾರದ ಮೇಲೆ ಆಳ್ವಾಸ್‌ ನುಡಿಸಿರಿ-2018 ಇದೇ ನವೆಂಬರ್‌ 16, 17, 18 ರಂದು ಖ್ಯಾತ ಸಂಶೋಧಕ ಡಾ. ಷ ಶೆಟ್ಟರ್‌ ಸಮ್ಮೇಳನವನ್ನು ಉದ್ಘಾಟಿಸಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ, ಸಾಹಿತಿ, ವಿಮರ್ಶಕಿ ಡಾ. ಮಲ್ಲಿಕಾ ಎಸ್‌. ಘಂಟಿ ಸರ್ವಾಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಪ್ರತಿವರ್ಷದಂತೆ ಈ ಬಾರಿಯೂ ಆಳ್ವಾಸ್‌ ನುಡಿಸಿರಿಯಲ್ಲಿ ವಿಶೇಷವಾಗಿ ವಿದ್ಯಾರ್ಥಿ ಸಿರಿ, ಕೃಷಿ ಸಿರಿ, ಚಿತ್ರ ಸಿರಿ, ಛಾಯಾಚಿತ್ರ ಸಿರಿ, ವಿಜಾnನ ಸಿರಿಯೂ ಕೂಡ ಸಾಹಿತ್ಯಾಸಕ್ತರಿಗೆ‌, ಕಲಾಭಿಮಾನಿಗಳಿಗೆ, ವಿದ್ಯಾರ್ಥಿಗಳಿಗೆ, ಕೃಷಿಕರಿಗೆ ರಸದೌತಣವನ್ನು ಉಣಬಡಿಸಿದೆ. 

ಒಟ್ಟಿನಲ್ಲಿ ನಾಡಿನ ಹೆಸರಾಂತ ಸಾಹಿತಿಗಳು, ವಿಮರ್ಶಕರು, ಚಿಂತಕರು ಹಾಗೂ ಕಲಾವಿದರ ಸಮಾಗಮಕ್ಕೆ ಆಳ್ವಾಸ್‌ ನುಡಿಸಿರಿ ವೇದಿಕೆಯಾಗಿದೆ.

ಶ್ರೀರಾಜ್‌ ಎಸ್‌. ಆಚಾರ್ಯ, ವಕ್ವಾಡಿ
ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ, ಆಳ್ವಾಸ್‌ ಕಾಲೇಜು, ಮೂಡುಬಿದಿರೆ 

Advertisement

Udayavani is now on Telegram. Click here to join our channel and stay updated with the latest news.

Next