Advertisement

ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಋತುಚಕ್ರ ಎಂಬ ಕುತರ್ಕ ಯಾಕೆ?

03:51 PM Nov 16, 2018 | Sharanya Alva |

ಮೂಡುಬಿದಿರೆ: ಯಾವುದೋ ಕಾಲದಲ್ಲಿ ಹುಟ್ಟಿಕೊಂಡ ನಂಬಿಕೆ ಆಚಾರಗಳು ಎಲ್ಲಾ ಕಾಲಕ್ಕೂ ನಿಯಂತ್ರಕಗಳಾಗಿ ನಿಲ್ಲುವುದರ ಹಿಂದೆ ಬಹುದೊಡ್ಡ ರಾಜಕಾರಣವಿರುತ್ತದೆ. ಅದು ಲಿಂಗರಾಜಕಾರಣವೂ ಹೌದು ಧಾರ್ಮಿಕ ರಾಜಕಾರಣವೂ ಆಗಿರುತ್ತದೆ. ಇದಕ್ಕೆ ಪ್ರಭುತ್ವದ ಸಮ್ಮತಿಯಿರುತ್ತದೆ ಎಂದು ಆಳ್ವಾಸ್ ನುಡಿಸಿರಿಯ ಸಮ್ಮೇಳನಾಧ್ಯಕ್ಷೆ ಡಾ.ಮಲ್ಲಿಕಾ ಎಸ್. ಘಂಟಿ ಹೇಳಿದರು.

Advertisement

ಅವರು ಶುಕ್ರವಾರ ಮೂಡುಬಿದಿರೆ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ ಆಳ್ವಾಸ್ ನುಡಿಸಿರಿಯ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಮಾತನಾಡಿದರು.

ಎಲ್ಲ ಕಾಲದ ಎಲ್ಲ ಪ್ರಭುತ್ವಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ನಿರಂತರ ಸಮಾಜದಲ್ಲಿ ಏನಾದರೂ ನಡೆಯುವಂತೆ ಮತ್ತು ಜನರು ಅದರ ಕುರಿತು ಗಮನಕೇಂದ್ರೀಕರಿಸುವಂತೆ ಪಿತೂರಿ ಮಾಡಿರುವುದನ್ನು ಚರಿತ್ರೆಯಲ್ಲಿ ಕಾಣಬಹುದು ಎಂದರು.

ಶಬರಿಮಲೆಗೆ ಮಹಿಳೆಯರ ಪ್ರವೇಶ; ಋತುಚಕ್ರ ಗೌರವಿಸಬೇಕು

ಮಕ್ಕಳು ಮತ್ತು ಋತುಚಕ್ರ ನಿಂತ ಮಹಿಳೆಯರಿಗೆ ಮಾತ್ರ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪ್ರವೇಶವೆಂಬುದು ಕುತರ್ಕದ್ದು, ಋತುಚಕ್ರದೊಳಗಿನ ಮಹಿಳೆಯರು ದೇವಾಲಯ ಪ್ರವೇಶ ಮಾಡುವುದರಿಂದ ಪಾವಿತ್ರ್ಯತೆ ನಾಶವಾಗುತ್ತದೆ ಎಂದು ಇದನ್ನು ವಿರೋಧಿಸುವವರು ಹೇಳುತ್ತಿರುವ ಮಾತುಗಳಿಗೆ ಯಾವುದೇ ತಾತ್ವಿಕ, ತಾರ್ಕಿಕತೆಯಿಲ್ಲ. ಈ ನೆಲೆಯಲ್ಲಿ 10ರಿಂದ 50ವರ್ಷದವರೆಗಿನ ಮಹಿಳೆಯರಿಗೆ ಪ್ರವೇಶ ಬೇಡ ಎಂದಾದ ಮೇಲೆ ಪುರುಷರು ಈ ವಯೋಮಿತಿಯಲ್ಲಿ ಮಹಿಳೆಯರನ್ನು ಸೇರಬಾರದು ಎಂದು ಅಭಿಪ್ರಾಯವ್ಯಕ್ತಪಡಿಸಿದರು.

Advertisement

ಈ ಪ್ರತಿರೋಧವನ್ನು ತಾತ್ವಿಕವಾಗಿ, ತಾರ್ಕಿಕವಾಗಿ ನಮ್ಮ ಜನಸಮುದಾಯದ ಅರಿವಿನಂತಿದ್ದ ಆಚಾರದಂತಿದ್ದ ತತ್ವಪದಕಾರರು ನೂರಾರು ವರ್ಷಗಳ ಹಿಂದೆಯೇ ಪ್ರಶ್ನಿಸಿದ್ದಾರೆ. ಕಡಕೋಳ ಮಡಿವಾಳಪ್ಪ ಎಂಬ ತತ್ವಪದಕಾರ ಎತ್ತಿರುವ ಮೈಲಿಗೆ ಮುಡಚೆಟ್ಟಿನ ಪ್ರಶ್ನೆ ಈ ಕಾಲದಲ್ಲಿ ಮುನ್ನೆಲೆಗೆ ಬಂದು ಚರ್ಚೆಗೆ ಒಳಗಾಗಿರುವುದು ದುರಂತವೇ ಸರಿ.

ಜಗತ್ತು ವಿಸ್ಮಯಗೊಳ್ಳುವ ಹಾಗೆ ವಿಜ್ಞಾನದ ಬೆಳವಣಿಗೆಯಲ್ಲಿ, ಆವಿಷ್ಕಾರದಲ್ಲಿ ತೊಡಗಿರುವ ದೇಶದಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ನೋಡಿದರೆ ನಾವು ನಿಂತ ನೆಲದಲ್ಲಿ ಚಲಿಸಿಯೆ ಇಲ್ಲ ಎನಿಸುತ್ತದೆ. ಮನುಷ್ಯನ ಹುಟ್ಟಿಗೆ ಸಂಬಂಧಿಸಿ ಕಡಕೋಳ ಮಡಿವಾಳಪ್ಪನವರು ಹಾಕುವ ಪ್ರಶ್ನೆ ಇಡೀ ಪ್ರಸಂಗವನ್ನು ಪ್ರಶ್ನಿಸಿರುವಂತಿರುವ ರೀತಿ ಹೀಗಿದೆ…

“ಮುಡಚಟ್ಟಿನೊಳು ಬಂದು ಮುಟ್ಟೀ ತಟ್ಟೀ ಅಂತೀರಿ

ಮುಡಚೆಟ್ಟು ಎಲ್ಲ್ಯಾದೆ ಹೇಳಣ್ಣ

ಮುಟ್ಟಾದ ಮೂರು ದಿನಕೆ ಹುಟ್ಟಿ ಬಂದೀರಿ ನೀವು

ಮುಡಚಟ್ಟು ಎಲ್ಲ್ಯಾದೆ ಹೇಳಣ್ಣ”

ಚಂದ್ರಲೋಕ ಮಂಗಳಲೋಕದ ಕುರಿತು ಮಾತನಾಡುವ ಈ ಕಾಲದಲ್ಲಿ ನೂರಾರು ವರ್ಷಗಳ ಹಿಂದೆ ನಮ್ಮ ತತ್ವಪದಕಾರ ಅನುಭವದ, ಆಧ್ಯಾತ್ಮದ ನೆಲೆಯಿಂದ ಕೇಳಿದ ಪ್ರಶ್ನೆಯಲ್ಲಿ ತರ್ಕವಿದೆ, ವಿಜ್ಞಾನವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next