ವಿದ್ಯಾಗಿರಿ: ಎಲ್ಲಿ ನೋಡಿದರಲ್ಲಿ ಕೆಂಪು- ಹಳದಿ ಎಂದು ಅರಳಿ ನಿಂತ ಸುಂದರ ಹೂಗಳ ಚಿತ್ತಾರ. ಆನೆ- ಕುದುರೆ, ಚಿಟ್ಟೆಯ ಪ್ರತಿ ರೂಪದಲ್ಲಿ ಅರಳಿದ ಪುಷ್ಪ ಲೋಕ. ನಡೆದಾಡುವ ರಾಜ ಮಾರ್ಗದ ಸುತ್ತಲೂ ಸುಂದರ ಕುಂಡದಲ್ಲಿ ಚೊಕ್ಕವಾಗಿ ಇರಿಸಲ್ಪಟ್ಟ ಘಮ್ಮನೆ ಸುಮ ಬೀರುವ ಗಿಡಗಳು.. ಇದು ಸಮನಸರು ಓಡಾಡುವ ಗಂಧರ್ವ ಲೋಕವೇ ಎನ್ನುವಂತಹ ಭಾವ.
ಈ ವೈಭವ ಕಾಣಲು ನೀವು ಖಂಡಿತವಾಗಿಯೂ ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್ ಗೆ ಕಾಲಿಡಬೇಕು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ನೆಪದಲ್ಲಿ ಆಳ್ವಾಸ್ ನ ವಿದ್ಯಾಗಿರಿ ಕ್ಯಾಂಪಸ್ ನಲ್ಲಿ ಹೆಜ್ಜೆ ಹಾಕಿದರೆ, ಇದು ಕಾಲೇಜು ಹೌದೋ ಎಂದೆನಿಸದೇ ಇರದು. ಎ.ಜಿ ಕೊಡ್ಗಿ ಆವರಣದಲ್ಲಿ ಸುಮಾರು 12 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಕೃಷಿ ಮೇಳವಿದ್ದರೆ, ಅದಕ್ಕೆ ಸುಂದರ ಆವರಣವಾಗಿ ಈಪುಷ್ಪಾಲಂಕಾರವಿದೆ. ಒಟ್ಟಿನಲ್ಲಿ ಈ ಪ್ರಾಕೃತಿಕ ಸೌಂದರ್ಯ ಮೂಡುಬಿದಿರೆಯ ಬಿರು ಬಿಸಿಲಿನಲ್ಲೂ ಕಣ್ಣಿಗೆ ಮನಸ್ಸಿಗೆ ಮುದ ನೀಡುವುದು ಖಂಡಿತ.
ಕಲಾಕೃತಿಯೇ ಆಕರ್ಷಣೆ: ಆಳ್ವಾಸ್ ಕ್ಯಾಂಪಸ್ ಗೆ ಪ್ರವೇಶಿಸಿದ ಕೂಡಲೇ ಹೂವಿನ ಬೃಹತ್ ಕಲಾಕೃತಿ ಕಣ್ಣಿಗೆ ಬೀಳುತ್ತದೆ. ಇದರ ಬೆನ್ನತ್ತಿ ಹೋದರೆ ಸುಮಾರು 6.5 ಎಕರೆ ಜಾಗದ ವಿಶಾಲ ಉದ್ಯಾನ ಕಣ್ಣಿಗೆ ಬೀಳುತ್ತದೆ. ಅಲ್ಲದೆ ರಾಜ ಮಾರ್ಗ, ಕಲಾ ಮೇಳ, ಪ್ಯಾಲೇಸ್ ಗ್ರೌಂಡ್ ನಲ್ಲೂ ಇದರ ಪ್ರದರ್ಶನ ಏರ್ಪಡಿಸಲಾಗಿದೆ.
ಇಲ್ಲಿ ಸೀಸನಲ್, ಅಲಂಕಾರಿಕ, ಟಿಶ್ಯು ಕಲ್ಚರ್, ಹೊರಾಂಗಣ ಮತ್ತು ಒಳಾಂಗಣ ಹೀಗೆ ಹಲವು ವಿಭಾಗದ ಹೂಗಳನ್ನು ಪ್ರದರ್ಶನಕ್ಕಿಡಲಾಗಿದೆ. ಎಲ್ಲರ ಗಮನ ಸೆಳೆಯುವುದು ಬೃಹತ್ ಕಲಾಕೃತಿ. ಆನೆ, ನವಿಲು, ಚಿಟ್ಟೆ, ಕುದುರೆ, ಬಾತುಕೋಳಿ, ಮುದ್ದು ಕರಡಿ, ಯಕ್ಷಗಾನದ ಕಿರೀಟ (ಆಳ್ವಾಸ್ ಲೋಗೋ) ಹೀಗೆ ಹಲವು ಗಾತ್ರದ 79 ಕಲಾಕೃತಿಗಳು ನಿಮ್ಮನ್ನು ಬೆರಗು ಗೊಳಿಸುತ್ತದೆ. ನಾಗಪುರ, ಪುಣೆಯ ಹಲವು ಮಂದಿ ಕಲಾವಿದರು ಈ ಕಲಾಕೃತಿಯ ರಚನೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಆಳ್ವಾಸ್ ಕೃಷಿ ಇಂಜಿನಿಯರಿಂಗ್ ನ ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ.
ಮಕ್ಕಳ ಫೇವರೇಟ್: ಜಾಂಬೂರಿಗಾಗಿ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಮೂಡುಬಿದಿರೆಗೆ ಬಂದಿರುವ ವಿದ್ಯಾರ್ಥಿಗಳಿಗೆ ಈ ಹೂ ವನ ಸದ್ಯ ಫೇವರೇಟ್ ಆಗಿದೆ. ಮಕ್ಕಳು, ಯುವಕ ಯುವತಿಯರು ಈ ಪುಷ್ಪ ಕಲಾಕೃತಿಯೆದುರು ನಿಂತು ಸೆಲ್ಫಿ, ಫೋಟೊ ಸೆರೆ ಹಿಡಿಯುತ್ತಿರುವುದು ಕಂಡು ಬಂತು.
3 ದಿನಕ್ಕೊಮ್ಮೆ ಬದಲಾವಣೆ: ಬಿರು ಬಿಸಿಲಿಗೆ ಬಾಡುವ ಕಾರಣ ಈ ಕಲಾಕೃತಿಗಳ ಹೂಗಳನ್ನು ಪ್ರತಿ ಮೂರು ದಿನಕ್ಕೊಮ್ಮೆ ಬದಲಾವಣೆ ಮಾಡಲಾಗುತ್ತದೆ. ಜಾಂಬೂರಿ ಮುಗಿಯುವ ಒಳಗೆ ಒಟ್ಟು ಮೂರು ಬಾರಿ ಕಲಾಕೃತಿಗಳ ಹೂ ತೆಗೆದು ಬೇರೆ ಹೂಗಳನ್ನು ಹಾಕಲಾಗುತ್ತದೆ.
ಇಲ್ಲಿ ಸಾವಿರಾರು ಪ್ಲ್ಯಾಂಟ್ ಗಳಿದ್ದು, 400 ಬಗೆಯ ಜಾತಿಗಳಿದ್ದು, ಸುಮಾರು ಶೇ.70 ರಷ್ಟು ಹೂಗಳನ್ನು ಇಲ್ಲಿಯೇ ಬೆಳೆದಿರುವುದು ವಿಶೇಷ. ಕಳೆದ ಅಕ್ಟೋಬರ್ ನಿಂದ ಮೂರು ತಿಂಗಳ ಕಾಲ ಸತತ ಪರಿಶ್ರಮ ವಹಿಸಿದ ಕಾರಣ ಇಲ್ಲಿ ಇಷ್ಟೊಂದು ಸುಂದರವಾಗಿ ಪುಷ್ಪಲೋಕ ತಲೆ ಎತ್ತಿದೆ ಎನ್ನುತ್ತಾರೆ ಇದರ ಮುಖ್ಯ ಸಂಯೋಜಕ ಶಿವಪ್ರಸಾದ್ ಅವರು.
ಬಣ್ಣ ಬಣ್ಣ ಸುಂದರ ಹೂವುಗಳಿವೆ. ಎಲ್ಲಿಯೂ ಕಾಣದ ಅಪರೂಪದ ಹೂವುಗಳಿವೆ. ಜಾಂಬೂರಿ ನೆಪದಲ್ಲಿ ಪ್ರಾಕೃತಿಕ ಸೌಂದರ್ಯಕ್ಕೆ ಇಷ್ಟು ಪ್ರಾಮುಖ್ಯತೆ ನೀಡಿರುವುದು ಕಂಡು ಖುಷಿಯಾಯಿತು ಎನ್ನುತ್ತಾರೆ ದಾವಣಗೆರೆಯ ಹನುಮಂತ.
-ಕೀರ್ತನ್ ಶೆಟ್ಟಿ ಬೋಳ