Advertisement

Alvas Education Foundation: ಆಳ್ವಾಸ್‌ನಲ್ಲಿ ನೂತನ ಕಾನೂನು ಕಾಲೇಜು ಆರಂಭ

01:05 AM Sep 11, 2024 | Team Udayavani |

ಮೂಡುಬಿದಿರೆ: ರಾಷ್ಟ್ರೀಯ, ಅಂತಾರಾಷ್ಟ್ರೀಯ ಮನ್ನಣೆ ಇರುವ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಮಧ್ಯಮ ಮತ್ತು ಕೆಳವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಹೊಸ ಸಾಧ್ಯತೆಗಳನ್ನು ಪರಿಚಯಿಸಿದ ಹೆಗ್ಗಳಿಕೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನವು ತನ್ನಲ್ಲಿರುವ 19 ವಿವಿಧ ಶಿಕ್ಷಣ ಸಂಸ್ಥೆಗಳ ಜತೆಗೆ ನೂತನ ಕಾನೂನು ಕಾಲೇಜ್‌ ಅನ್ನು ಆರಂಭಿಸುತ್ತಿದೆ. ಈ ಶೈಕ್ಷಣಿಕ ವರ್ಷದಿಂದಲೇ 5 ವರ್ಷಗಳ, ಬಿಕಾಂ ಸಹಿತ ಎಲ್‌ಎಲ್‌ಬಿ ಮತ್ತು 3 ವರ್ಷಗಳ ಎಲ್‌ಎಲ್‌ಬಿ ಕೋರ್ಸಿಗೆ ದಾಖಲಾತಿ ಆರಂಭವಾಗಿದೆ ಎಂದು ಆಳ್ವಾಸ್‌ ಪ್ರವರ್ತಕ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

Advertisement

ಹೊಸ ಕಾನೂನು ಕಾಲೇಜ್‌ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯಕ್ಕೆ(ಕೆಎಸ್‌ಎಲ್‌ಯು) ಸಂಯೋಜನೆಗೊಂಡಿದ್ದು, ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾದಿಂದ ಅನುಮೋದನೆ ಪಡೆದಿದೆ ಎಂದರು. ಕರಾವಳಿ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಅತೀ ಹೆಚ್ಚು ಉದ್ಯೋಗ ಸಾಧ್ಯತೆ ಇರುವ 5 ವರ್ಷಗಳ ಬಿಕಾಂ ಎಲ್‌ಎಲ್‌ಬಿ ಪದವಿಯನ್ನು 60 ವಿದ್ಯಾರ್ಥಿ ಪರಿಮಿತಿಯೊಂದಿಗೆ ಹಾಗೂ 3 ವರ್ಷಗಳ ಎಲ್‌ಎಲ್‌ಬಿ ಪದವಿಯನ್ನು 60 ವಿದ್ಯಾರ್ಥಿ ಮಿತಿಯೊಂದಿಗೆ ಈ ವರ್ಷದಿಂದಲೇ ಆರಂಭಿಸಲು ಅನುಮತಿ ದೊರೆತಿದೆ.

ಕಾನೂನು ಶಿಕ್ಷಣದಲ್ಲಿ ಉತ್ತಮ ಅನುಭವ ಹೊಂದಿರುವ ಶಿಕ್ಷಕರನ್ನು ಈಗಾಗಲೇ ನೇಮಿಸಿದ್ದು, ಗುಣಾತ್ಮಕವಾದ ಕಾನೂನು ಶಿಕ್ಷಣಕ್ಕೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಕಟಿಬದ್ಧವಾಗಿದೆ. ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ಅಥವಾ ವಿಜ್ಞಾನ ಶಾಖೆಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಬಿಕಾಂ ಎಲ್‌ಎಲ್‌ಬಿ ಪ್ರವೇಶಾತಿಗೆ ಅರ್ಹರು. ಯಾವುದೇ ಪದವಿ ಪೂರ್ಣಗೊಳಿಸಿ ರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು 3 ವರ್ಷಗಳ ಎಲ್‌ಎಲ್‌ಬಿ ಪದವಿಗೆ ದಾಖಲಾತಿಗೆ ಅರ್ಹತೆ ಪಡೆಯುತ್ತಾರೆ.

ವಿಪುಲ ಅವಕಾಶಗಳು
ಸುಸಜ್ಜಿತ ಕಾನೂನು ಗ್ರಂಥಾಲಯ, ಮೂಟ್‌ ಕೋರ್ಟ್‌ ಸಹಿತ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕಾನೂನು ಪದವೀಧರರು ನ್ಯಾಯವಾದಿಗಳಾಗಿ ಸ್ವಂತ ವೃತ್ತಿ ಆರಂಭಿಸುವುದಲ್ಲದೇ, ವಿವಿಧ ಕಂಪೆನಿಗಳಲ್ಲಿ ಸಲಹೆಗಾರರಾಗಿ, ವ್ಯವಹಾರ ಆಡಳಿತಾಧಿಕಾರಿಗಳಾಗಿ, ನ್ಯಾಯಾಂಗದ ವಿವಿಧ ಹುದ್ದೆಗಳಲ್ಲಿ ಶಾಸನ ರೂಪಿಸುವ ಪ್ರತಿನಿಧಿಗಳಾಗಿ ವೃತ್ತಿ ಕೈಗೊಳ್ಳುವ ಅಪಾರ ಅವಕಾಶಗಳಿವೆ.

ಸಮಾಜಕಾರ್ಯ, ಪತ್ರಿಕೋದ್ಯಮ, ಎಂಬಿಎ, ಹಾಸ್ಪಿಟಲ್‌ ಅಡ್ಮಿನಿಸ್ಟ್ರೇಶನ್‌, ಸಿಎ, ಸಿಎಸ್‌ ಪದವೀಧರರು ಕಾನೂನು ಶಿಕ್ಷಣ ಪಡೆದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಹೆಚ್ಚಿನ ನೈಪುಣ್ಯ ಪಡೆಯುವುದರೊಂದಿಗೆ ಹೆಚ್ಚಿನ ಉದ್ಯೋಗದ ಅವಕಾಶಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದವರು ವಿವರಿಸಿದರು. ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಸಿಎ, ಸಿಎಸ್‌, ಎಸಿಸಿಎ, ಸಿಎಂಎಸ್‌ ಹಾಗೂ ಯುಪಿಎಸ್ಸಿ ಕೋರ್ಸ್‌ಗಳಿಗೆ ತರಬೇತಿಯ ಜತೆಗೆ ದೇಶದ ವಿವಿಧ ಕಾನೂನು ವಿವಿಗಳಿಗೆ ಪ್ರವೇಶ ಪಡೆಯಲು ಬಯಸುವ ಆಕಾಂಕ್ಷಿಗಳಿಗಿರುವ ಅರ್ಹತಾ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ ಎಂದೂ ಅವರು ತಿಳಿಸಿದರು. ಪದವಿ ಕಾಲೇಜಿನ ಪ್ರಾಚಾರ್ಯ ಡಾ| ಕುರಿಯನ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next