Advertisement

ಆಳ್ವಾಸ್‌ ಪ್ರಕರಣ : ಮುಂಬಯಿ ಜಾತೀಯ ಸಂಘಟನೆಗಳಿಂದ ಬೆಂಬಲ ಸಭೆ 

04:24 PM Aug 17, 2017 | |

ಮುಂಬಯಿ: ಮೂಡಬಿದ್ರೆ ಆಳ್ವಾಸ್‌ ಕಾಲೇಜು ವಿದ್ಯಾರ್ಥಿನಿ ಕಾವ್ಯಾಸಾವಿನ ಪ್ರಕರಣ ಹಾಗೂ ಮೋಹನ್‌ ಆಳ್ವ ಮತ್ತವರ ಸಂಸ್ಥೆಯ ತೇಜೋವಧೆಗಾಗಿ ಪ್ರಯತ್ನಿಸುತ್ತಿರುವ ಕೆಲವು ಸಮಾಜಘಾತುಕ ಶಕ್ತಿ ಮತ್ತು ವ್ಯಕ್ತಿಗಳ  ಆತಂಕಕಾರಿ ಬೆಳವಣಿಗೆಯ ಬಗ್ಗೆ ಚರ್ಚಿಸುವ ವಿಶೇಷ ಸಭೆಯು ಬಂಟರ ಸಂಘ ಮುಂಬಯಿ ಇದರ ಆಶ್ರಯದಲ್ಲಿ ಆ. 15ರಂದು ಸಂಜೆ  ಕುರ್ಲಾ ಪೂರ್ವದ ಬಂಟರ ಭವನದ ಕಾಶಿ ಸಿದ್ದು ಶೆಟ್ಟಿ ಕಿರು ಸಭಾಗೃಹದಲ್ಲಿ ಜರಗಿತು. ಮುಂಬಯಿಯ ವಿವಿಧ ತುಳು-ಕನ್ನಡ ಜಾತೀಯ ಸಂಘ-ಸಂಸ್ಥೆಗಳ ಮುಖಂಡರ ಉಪಸ್ಥಿತಿಯಲ್ಲಿ ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭೆಯು ನಡೆಯಿತು. 

Advertisement

ತೀರ್ಪು ಬರುವವರೆಗೆ ಅಪಪ್ರಚಾರ ಸಲ್ಲದು: ಐಕಳ 
ಸಭೆಯಲ್ಲಿ ಜಾಗತಿಕ ಬಂಟರ ಸಂಘಗಳ  ಒಕ್ಕೂಟದ ಉಪಾಧ್ಯಕ್ಷ,  ಸಂಘಟಕ ಐಕಳ ಹರೀಶ್‌ ಶೆಟ್ಟಿ ಅವರು ಮಾತನಾಡಿ, ಕಾವ್ಯಾ ನಮ್ಮ ಮನೆಯ ಮಗುವಿದ್ದಂತೆ. ಅವಳ ಅನಿರೀಕ್ಷಿತ ಸಾವಿನಿಂದ ನಮಗೆಲ್ಲರಿಗೂ ಅತೀವ ದುಃಖವಾಗಿದೆ. ಆಕೆಯ ಮಾತಾಪಿತರಿಗೆ, ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ನಮ್ಮಲ್ಲಿ ಅನೇಕ ಜಾತಿ-ಧರ್ಮಗಳಿವೆ. ಇದುವರೆಗೂ ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಾ, ಸ್ನೇಹ-ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಪ್ರತಿಯೊಂದು ಜಾತಿ-ಧರ್ಮವನ್ನು ನಾವು ಗೌರವಿಸುವುದು ಅವಶ್ಯವಾಗಿದೆ. ಕಾವ್ಯಾ ಸಾವಿನ ಹಿಂದೆ ಕೆಲವೊಂದು ಶಕ್ತಿಗಳು ಜಾತೀಯತೆಯನ್ನು ಎಳೆದು ತರಲು ಪ್ರಯತ್ನಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಹೀಗಾಗದಂತೆ ನಾವು ನೋಡಿಕೊಳ್ಳುವ ಅಗತ್ಯವಿದೆ. ಮೋಹನ್‌ ಆಳ್ವರನ್ನು ಅನೇಕ ವರ್ಷಗಳಿಂದ ತೀರಾ ಹತ್ತಿರದಿಂದ ಬಲ್ಲೆ, ಅವರು ತನಗಾಗಿ ಏನನ್ನೂ ಬಯಸದೆ ಇತರರಿಗಾಗಿ, ಸಮಾಜಕ್ಕಾಗಿ ಸೇವೆ ಸಲ್ಲಿಸಿ ಹೆಸರಾಗಿದ್ದಾರೆ. ಬಹುಪ್ರತಿಷ್ಠೆಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಸುಮಾರು 26 ಸಾವಿರ ವಿದ್ಯಾರ್ಥಿಗಳಿರುವ ಅವರ ಸಂಸ್ಥೆಯು ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿದೆ. ದೇಶದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಸಂಸ್ಥೆಯನ್ನು ಕಟ್ಟಲು ಸುಮಾರು 25 ವರ್ಷಗಳಿಂದ ಅವರು ಪರಿಶ್ರಮಪಟ್ಟಿದ್ದಾರೆ. ಕಾವ್ಯಾಳ ಸಾವನ್ನು ಮುಂದಿಟ್ಟುಕೊಂಡು ಸಂಸ್ಥೆಯ ಹೆಸರನ್ನು ಕೆಡಿಸುವ ಷಡ್ಯಂತ್ರವಿಂದು  ನಡೆಯುತ್ತಿದೆ. ಆಳ್ವರ ಹೆಸರಿಗೆ ಕಳಂಕ ತರುವ ಆತಂಕಕಾರಿ ಬೆಳವಣಿಗೆಯಾಗುತ್ತಿದೆ. ಈ ಬಗ್ಗೆ ನಾವು ಎಚ್ಚರ ವಹಿಸಬೇಕು. ಎಲ್ಲವೂ ಕಾನೂನಿನ ಚೌಕಟ್ಟಿನೊಳಗೆ ನಡೆಯಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತೀರ್ಪು ಬರುವವರೆಗೆ ಅಪ
ಪ್ರಚಾರ ಸಲ್ಲದು ಎಂದು ಅವರು ತಿಳಿಸಿದರು.

ಆಳ್ವರಿಗೆ ನೈತಿಕ ಬೆಂಬಲ  ನೀಡೋಣ: ಕಡಂದಲೆ 
ಭಂಡಾರಿ ಮಹಾಮಂಡಳದ ರೂವಾರಿ ಕಡಂದಲೆ ಸುರೇಶ್‌ ಭಂಡಾರಿ ಅವರು ಮಾತನಾಡಿ, ಕಾವ್ಯಾ ನಮ್ಮ ಮಗು ಯಾವುದೋ ಕಾರಣದಿಂದ ಅಸಹಜ ಸಾವು ಸಂಭವಿಸಿರಬಹುದು. ಈ ಬಗ್ಗೆ ಕಾನೂನು ನೆಲೆಯಲ್ಲಿ ತನಿಖೆಯಾಗುತ್ತಿದೆ ಹೊರತು ಬೇರೆ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳುವಂತಿಲ್ಲ. ಸ್ವñಃ ಮೋಹನ್‌ ಆಳ್ವರೂ ಈ ಬಗ್ಗೆ ಒಪ್ಪಿಗೆ ನೀಡಿರುವಾಗ ತನಿಖೆ ಮುಗಿಯುವವರೆಗೆ ಕಾದು ನೋಡಬೇಕು. ಈ ಪ್ರಕರಣದ ಜೊತೆಗೆ ಜಾತಿವಾದವನ್ನು ಖಂಡಿತಾ ತರಬಾರದು. ಆಳ್ವಾಸ್‌ ಕಾಲೇಜು ಶಿಕ್ಷಣ ಮಟ್ಟಕ್ಕೆ ಹೆಸರಾಗಿದ್ದು, ಉತ್ತಮ ಕ್ರೀಡಾಪಟುಗಳನ್ನು ತರಬೇತಿಗೊಳಿಸುವ ದೇಶದ ಅತಿದೊಡ್ಡ ಸಂಸ್ಥೆಯಾಗಿದೆ. ಹಾಗಾಗಿ ಸಂಸ್ಥೆಯ ಬಗ್ಗೆ ಅವಹೇಳನಕಾರಿ ವರದಿಗಳಿಗೆ ಕಿವಿಗೊಡಬಾರದು. ಆಳ್ವರಿಗೆ ನಾವೆಲ್ಲಾ ಜಾತಿ, ಭೇದ, ಮರೆತು ನೈತಿಕ ಬೆಂಬಲ ನೀಡೋಣ ಎಂದು ಹೇಳಿದರು. 

ಅಪಕೀರ್ತಿ ಮಾತುಗಳು ಸಲ್ಲವು:  ಧರ್ಮಪಾಲ ಯು. ದೇವಾಡಿಗ 
ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಅವರು ಮಾತನಾಡಿ, ಕಾವ್ಯಾಳ ದುರಂತದ ಸುದ್ದಿಯಿಂದ ನಮಗೆಲ್ಲರಿಗೂ ಆಘಾತವಾಗಿದೆ. ಈ ಬಗ್ಗೆ ನಿಪ್ಪಕ್ಷಪಾತವಾದ ತನಿಖೆ ನಡೆಯಲಿ. ನ್ಯಾಯದ ತೀರ್ಪು ಪ್ರಕಟವಾಗುವವರೆಗೆ ಮೋಹನ್‌ ಆಳ್ವ ಹಾಗೂ ಅವರ ಸಂಸ್ಥೆಗೆ ಅಪಕೀರ್ತಿಯ ಮಾತುಗಳು ಸಲ್ಲವು. ಮುಂಬಯಿಯ ಅಪ್ರತಿಮ ಸಂಘಟಕ ಐಕಳ ಹರೀಶ್‌ ಶೆಟ್ಟಿ ಅವರು ಸಮಯೋಚಿತವಾಗಿ ಮುಂಬಯಿಯ ಸರ್ವ ಸಮಾಜ ಬಾಂಧವರ ಮುಖಂಡರನ್ನು ಒಗ್ಗೂಡಿಸಿ ಒಗ್ಗಟ್ಟನ್ನು ಪ್ರದರ್ಶಿಸಿ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಕೀರ್ತಿಗೆ ಕಳಂಕ ಬಾರದಂತೆ ಸಭೆ ನಡೆಸಿರುವುದು ಅಭಿನಂದನೀಯವಾಗಿದೆ ಎಂದರು. 

ಆಳ್ವರು ಮಕ್ಕಳ ಬಗ್ಗೆ ಅಪಾರ ಪ್ರೀತಿ ಹೊಂದಿರುವವರು: ಉಳ್ತೂರು 
ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಅವರು ಮಾತನಾಡಿ, ಇಷ್ಟೊಂದು ದೊಡ್ಡ ಶಿಕ್ಷಣ ಸಂಸ್ಥೆಯನ್ನು ಕಟ್ಟಿರುವ ಮೋಹನ್‌ ಆಳ್ವ ಅವರು ಮಕ್ಕಳ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದಾರೆ ಎನ್ನುವುದು ಅಲ್ಲಿಯ ವಿದ್ಯಾರ್ಥಿಗಳಿಂದ ತಿಳಿದು ಬರುತ್ತದೆ. ವಿದ್ಯಾರ್ಥಿಗಳ ಬೌದ್ಧಿಕ, ಮಾನಸಿಕ, ಶಾರೀರಿಕ ಬೆಳವಣಿಗೆಗೆ ಈ ಸಂಸ್ಥೆ ಬಹಳಷ್ಟು ಕೊಡುಗೆ ನೀಡಿದೆ. ಸಂಸ್ಥೆಗೆ ಕೆಟ್ಟ ಹೆಸರು ಬರದಂತೆ ಎಲ್ಲರ ಒಗ್ಗಟ್ಟಿನಿಂದ ನೋಡಿಕೊಳ್ಳಬೇಕು ಎಂದು ನುಡಿದರು. 

Advertisement

ಮುಸ್ಲಿಂ ಸಮುದಾಯಕ್ಕೆ ಆಳ್ವರ ಸೇವೆ  ಅಪಾರ: ಮೋಹಿದ್ದಿನ್‌ ಮುಂಡ್ಕೂರು 
ಶಾಫಿ ಅಸೋಸಿಯೇಶನ್‌ ಮುಂಬಯಿ ಇದರ ಮುಖಂಡ ನ್ಯಾಯವಾದಿ ಮೋಹಿದ್ದೀನ್‌ ಮುಂಡ್ಕೂರು ಅವರು ಮಾತನಾಡಿ, ಕಾವ್ಯಾಳ ಸಾವು ನಮ್ಮೆಲ್ಲರಿಗೆ ದುಃಖ ತಂದಿದೆಯಾದರೆ, ಇನ್ನೊಂದೆಡೆ ಆಳ್ವರ ತೇಜೋವಧೆ ಬೇಸರದ ಸಂಗತಿಯಾಗಿದೆ. ಅಸಹಜ ಸಾವು ಘಟಿಸಿದೆ ಈ ಬಗ್ಗೆ ತನಿಖೆ ನಡೆಯುತ್ತಿದೆ. ಅದಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ದೂರುವುದು ಕ್ಷುಲ್ಲಕತನವಾಗಿದೆ. ಸಾಧಾರಣವಾಗಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಾವು ಸಂಭವಿಸುತ್ತದೆ. ಯಾಕಾಗಿ ಹೀಗೆ ಆಗುತ್ತಿದೆ ಎಂಬುದನ್ನು ನಾವು ಗಮನಿಸಬೇಕು. ಪ್ರತಿಯೊಂದು ಜಾತಿಯಲ್ಲೂ ದ್ವೇಷ, ಅಸೂಯೆಗಳು ಸಾಮಾನ್ಯ. ಆದರೆ ಇಂತಹ ಘಟನೆಗಳು ಸಂಭವಿಸಿದಾಗ ಅದೆಲ್ಲವನ್ನು ತೊಡೆದು ಹಾಕಬೇಕು. ನಾವೆಲ್ಲರೂ ಜಾತಿಮತ, ಭೇದ ಮರೆತು ಒಂದೇ ತಾಯಿಯ ಮಕ್ಕಳಂತಿರೋಣ. ಮುಸ್ಲಿಂ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದರು. 

ಆಳ್ವರು ಸಾಂಸ್ಕೃತಿಕ ರಾಯಭಾರಿ: ಡಾ| ಸುನೀತಾ ಎಂ. ಶೆಟ್ಟಿ 
ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಮಾತನಾಡಿ, ಆಳ್ವಾಸ್‌ ಸಂಸ್ಥೆಯ ಶಿಸ್ತು, ವಿದ್ಯಾರ್ಥಿಗಳು ಕಾಲೇಜಿನ ಬಗ್ಗೆ ಇಟ್ಟಿರುವ ಪ್ರೀತಿಯನ್ನು ನಾನು ಪ್ರತ್ಯಕ್ಷವಾಗಿ ಕಂಡವಳಿದ್ದೇನೆ. ಸಾವಿಗೆ ಮೂಲ ಕಾರಣ ಏನು ಎಂಬುದನ್ನು ತಿಳಿಯೋಣ. ಸಂಸ್ಥೆಗೆ ಕೆಟ್ಟ ಹೆಸರು ಬಾರದಂತೆ ಎಚ್ಚರದಿಂದಿರೋಣ. ಕಾವ್ಯಾ ಅತಿ ಕಿರಿಯ ವಯಸ್ಸಿನವಳು. ಆಕೆಗೆ ಯಾರೂ ಪ್ರತಿಸ್ಪರ್ಧಿಯಿಲ್ಲ ಎಂಬುದನ್ನು ತಿಳಿಯಬೇಕು. ಆಳ್ವಾಸ್‌ ನುಡಿಸಿರಿ, ವಿರಾಸತ್‌ನಂತಹ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಮೂಡಬಿದ್ರೆಯನ್ನು ಸಾಂಸ್ಕೃತಿಕ ನಗರಿಯಾಗಿ ಪರಿವರ್ತಿಸಿದ ಮಹಾನ್‌ ವ್ಯಕ್ತಿ ಮೋಹನ್‌ ಆಳ್ವರಾಗಿದ್ದಾರೆ ಎಂದು ನುಡಿದರು. 

ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರು ಮಾತನಾಡಿ, ವಿದ್ಯಾಸಂಸ್ಥೆ ಎಂಬುದು ಮಂದಿರಕ್ಕೆ ಸಮಾನವಾದುದು. ಇಲ್ಲಿ ನಮ್ಮ ಸಮಾಜದ ಎಲ್ಲಾ ವರ್ಗದ ಜನರೂ ಸಮಾನ ರಾಗಿ ಶಿಕ್ಷಣವನ್ನು ಪೂರೈಸುವುದಕ್ಕೆ ಮುಕ್ತ ಅವಕಾಶವನ್ನು ಒದಗಿಸಿಕೊಡಲಾಗಿದೆ. ಪ್ರತೀ ವರ್ಷ ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಅಂಕ ಪಡೆದು ಗುಣಮಟ್ಟದ ಶಿಕ್ಷಣದಿಂದಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ  ಈ ಸಂಸ್ಥೆ ಸಹಕಾರಿಯಾಗಿದೆ. ತಂದೆ ಆನಂದ ಆಳ್ವರಂತೆ ಸಮಾಜಪರ ಚಿಂತನೆಗಳೊಂದಿಗೆ ಏಕಾಂಗಿಯಾಗಿ ಹೋರಾಡಿ ಶಿಕ್ಷಣ ಸಂಸ್ಥೆಯನ್ನು ಆಳ್ವರು ಕಟ್ಟಿ ಬೆಳೆಸಿದ್ದಾರೆ. ನಾವು ಮುಂಬಯಿಗರೆಲ್ಲರೂ ತುಳುನಾಡಿನ ಬಾಂಧವ್ಯವವನ್ನು ಕೆಡಿಸದಂತೆ ಜೊತೆಯಾಗಿ ಸಾಮರಸ್ಯ ಪ್ರಕಟಿಸೋಣ ಎಂದರು. 

ಸಭೆಯ ಆರಂಭದಲ್ಲಿ ಕಾವ್ಯಾಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಪಿ. ಧನಂಜಯ ಶೆಟ್ಟಿ, ಅಶೋಕ್‌ ಪಕ್ಕಳ, ನವೀನ್‌ ಶೆಟ್ಟಿ ಇನ್ನಬಾಳಿಕೆ, ಪ್ರಕಾಶ್‌ ಶೆಟ್ಟಿ ಸುರತ್ಕಲ್‌, ಕರ್ನೂರು ಮೋಹನ್‌ ರೈ, ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ,  ಸುರೇಶ್‌ ಶೆಟ್ಟಿ ಯೆಯ್ನಾಡಿ, ಅಜೆಕಾರು ಬಾಲಕೃಷ್ಣ ಶೆಟ್ಟಿ, ಆನಂದ
ಶೆಟ್ಟಿ, ಪ್ರವೀಣ್‌ ಶೆಟ್ಟಿ ವರಂಗ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. 

ಕಾವ್ಯಾಳ ಸಾವಿಗೆ ರಾಜಕೀಯ ಬಣ್ಣ ದೊರೆತಿರುವುದು ವಿಷಾದನೀಯ. ಜಾತೀಯ ಸಂಸ್ಥೆಗಳನ್ನು ಒಡೆಯುವ ಕಾರ್ಯಕ್ಕೆ ವಿರೋಧವಾಗಿರೋಣ. ಸಂಸ್ಕೃತಿ ಸಂಸ್ಕಾರ, ಸಾಂಸ್ಕೃತಿಕ ಹರಿಕಾರನಂತಿರುವ ಸಂಸ್ಥೆಗೆ ಮಸಿ ಬಳಿಯುವಿರಿ. ಅದರಿಂದ ಏನೂ ಸಿಗಲಾರದು
    – ಜಿ. ಟಿ. ಆಚಾರ್ಯ (ಮಾಜಿ ಅಧ್ಯಕ್ಷರು: ವಿಶ್ವಕರ್ಮ ಅಸೋಸಿಯೇಶನ್‌ ಮುಂಬಯಿ) 

ಇದು ಆಳ್ವರ ದುರದೃಷ್ಟವಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಬರೇ ಆಳ್ವರನ್ನು, ಸಂಸ್ಥೆಯನ್ನು ದೂಷಿಸುವುದು ತರವಲ್ಲ 
          – ಬಾಲಕೃಷ್ಣ ಭಂಡಾರಿ (ಮಾಜಿ ಅಧ್ಯಕ್ಷರು: ಭಂಡಾರಿ ಸೇವಾ ಸಮಿತಿ   ಮುಂಬಯಿ).

ಕ್ರೀಡಾಕ್ಷೇತ್ರಕ್ಕೆ ಹೆಸರಾದ ಆಳ್ವಾಸ್‌ ಕಾಲೇಜಿನ ಕೊಡುಗೆ ಅಪಾರವಾಗಿದೆ. ಘಟನೆಯ ಬಗ್ಗೆ ತನಿಖೆಯಾಗಲಿ, ಸತ್ಯಾಸತ್ಯತೆ ಹೊರಬೀಳಲಿ. ಅದಕ್ಕಿಂತ ಮುಂಚೆ ಅಪವಾದ ಹಾಕುವುದು ಅಕ್ಷಮ್ಯ ಅಪರಾಧವಾಗಿದೆ
 – ಜಯ ಕೆ. ಶೆಟ್ಟಿ (ಛತ್ರಪತಿ ಶಿವಾಜಿ ಪ್ರಶಸ್ತಿ ಪುರಸ್ಕೃತರು). 

ಎಲ್ಲಾ ಸಂಘ-ಸಂಸ್ಥೆಗಳು ಒಗ್ಗೂಡಿ ಸಂಬಂಧವನ್ನು ಉಳಿಸುವ ಕೆಲಸ ಮಾಡೋಣ. ತುಳುನಾಡಿನ ಭವ್ಯ ಪರಂಪರೆಯ ಸಾಮರಸ್ಯವನ್ನು ಕಾಪಾಡೋಣ 
 ಗಿರೀಶ್‌ ಬಿ. ಸಾಲ್ಯಾನ್‌ (ಅಧ್ಯಕ್ಷರು:  ಕುಲಾಲ ಸಂಘ ಮುಂಬಯಿ). 

ಆಳ್ವರನ್ನು ವೈಯಕ್ತಿಕವಾಗಿ ಕೇಂದ್ರಿಕರಿಸಿ ಸಂಸ್ಥೆಯ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡಬಾರದು 
 – ನ್ಯಾಯವಾದಿ ಶೇಖರ್‌ ಭಂಡಾರಿ (ಅಧ್ಯಕ್ಷರು: ಭಂಡಾರಿ ಸೇವಾ ಸಮಿತಿ   ಮುಂಬಯಿ). 

ಸಾವಿರಾರು ಜನರ ಬದುಕು ಕಟ್ಟಿದ ಆಳ್ವರಂಥವರ ತೇಜೋವಧೆ ಸರಿಯಲ್ಲ 
 – ಕುತ್ಪಾಡಿ ರಾಮಚಂದ್ರ ಗಾಣಿಗ (ಅಧ್ಯಕ್ಷರು : ಗಾಣಿಗ ಸಮಾಜ ಮುಂಬಯಿ).
 
ಕಾನೂನಿನ ಚೌಕಟ್ಟಿನೊಳಗೆ ತನಿಖೆಯಾಗಲಿ. ಕಾಲೇಜಿಗೆ ಒಂದಿಷ್ಟೂ ಧಕ್ಕೆ ಬಾರದಂತೆ ತೀರ್ಮಾನಕ್ಕೆ ನಾವೆಲ್ಲರೂ ಬರಬೇಕು 
  – ಸುರೇಂದ್ರ ಸಾಲ್ಯಾನ್‌ ಮುಂಡ್ಕೂರು  (ಸಾಫಲ್ಯ ಸೇವಾ ಸಂಘ ಮುಂಬಯಿ). 

ಸಮಗ್ರ ತನಿಖೆಯಾಗಲಿ. ಕಾಲೇಜನ್ನು ಬಲಿಪಶುವನ್ನಾಗಿಸುವುದು ಬೇಡ.  ಇದರಲ್ಲಿ ಜಾತೀಯತೆಯನ್ನು ತರುವುದು ಅಕ್ಷಮ್ಯ ಅಪರಾಧವಾಗಿದೆ 
  – ಶಿವಾನಂದ ಪೈ (ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತ).  

 ಚಿತ್ರ-ವರದಿ: ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು 

Advertisement

Udayavani is now on Telegram. Click here to join our channel and stay updated with the latest news.

Next