ಉಡುಪಿ: ಬಾರಕೂರಿನಲ್ಲಿ ಜ. 25ರಿಂದ 27ರ ವರೆಗೆ ಆಳುಪೋತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಳುಪೋತ್ಸವದ ಲಾಂಛನ ಮತ್ತು ಪ್ರವಾಸೋದ್ಯಮ ಇಲಾಖೆಯ ಟೇಬಲ್‌ಟಾಪ್ ಕ್ಯಾಲೆಂಡರನ್ನು ಬುಧವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರಾಚೀನ ಇತಿಹಾಸವಿರುವ ಬಾರಕೂರಿನ ತುಳುನಾಡಿನ ಪರಂಪರೆಯನ್ನು ಹೊರ ಜಗತ್ತಿಗೆ ಪರಿಚಯಿಸಲು ಆಳುಪೋತ್ಸವ ಆಯೋಜಿಸಲಾಗಿದೆ. ಜ. 25ರ ಸಂಜೆ 4.30ಕ್ಕೆ ಹೆರಿಟೇಜ್ ವಾಕ್ ಮತ್ತು ಹೆರಿಟೇಜ್ ವಾಕ್ ಆ್ಯಂಡ್ರಾಯ್ಡ ಆ್ಯಪ್ ಬಿಡುಗಡೆ, ವಿವಿಧ ಜಾನಪದ ಕಲಾತಂಡ, ಚೆಂಡೆ, ಕರಗ ಕೋಲಾಟ, ಕಂಗೀಲು ಕುಣಿತ, ಪೂಜಾ ಕುಣಿತ ಇತ್ಯಾದಿಗಳಿಂದ ಕೂಡಿದ ಮೆರವಣಿಗೆ ನಡೆಯಲಿದೆ.
5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆಯಾಗಲಿದೆ. ಜ.26ರ ಸಂಜೆ ಕತ್ತಲೆ ಬಸದಿಯಲ್ಲಿ ದೀಪಾಲಂಕಾರ, ಜ. 27ರ ಬೆಳಗ್ಗೆ 10ರಿಂದ ಆಳುಪರ ಕುರಿತು ವಿಚಾರ ಸಂಕಿರಣ, ಪ್ರತಿನಿತ್ಯ ಸಂಜೆ ಮುಖ್ಯ ಮತ್ತು ಉಪವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.ಅಧಿಕಾರಿಗಳಾದ ಪ್ರವಾಸೋದ್ಯಮ ಇಲಾಖೆಯ ಅನಿತಾ, ಅಮಿತ್, ಕನ್ನಡ ಸಂಸ್ಕೃತಿ ಇಲಾಖೆಯ ಚಂದ್ರಶೇಖರ್, ಕರಾವಳಿ ಪ್ರವಾಸೋದ್ಯಮ ಸಂಘಟನೆಯ ನಾಗರಾಜ ಹೆಬ್ಟಾರ್ ಮೊದಲಾದವರು ಉಪಸ್ಥಿತರಿದ್ದರು.
ಕ್ರಿಸ್ತಶಕದ ಆರಂಭದಲ್ಲಿ ಬಾರಕೂರು ಚಿಕ್ಕ ಬಂದರಾಗಿದ್ದು ಹೊಯ್ಸಳ, ಕೆಳದಿ ಅರಸರ ಕಾಲದಲ್ಲಿ ಪ್ರಮುಖ ಆಡಳಿತ ಕೇಂದ್ರವಾಗಿದ್ದು ವಿಜಯನಗರ ಅರಸರ ಕಾಲದಲ್ಲಿ ವಾಣಿಜ್ಯ ಕೇಂದ್ರವಾಗಿ ಉತ್ತುಂಗಕ್ಕೆ ಏರಿತ್ತು. ಬಾರಕೂರಿನಿಂದ ವಿದೇಶಕ್ಕೆ ಕರಿಮೆಣಸು ರಫ್ತು ಆಗುತ್ತಿತ್ತು. ಹಡಗಿನ ಮೂಲಕ ಅಗತ್ಯ ವಸ್ತುಗಳ ಆಮದಾಗುತ್ತಿತ್ತು ಎಂಬ ದಾಖಲೆ ಇದೆ. ಅನೇಕ ಮಠಗಳು, ದೇವಸ್ಥಾನಗಳು ಇಲ್ಲಿವೆ.