Advertisement

Open AI: ಸಿಇಒ ಆಗಿ ಆಲ್ಟ್ಮನ್‌ ವಾಪಸ್‌!

12:15 AM Nov 23, 2023 | Team Udayavani |

ಸ್ಯಾನ್‌ ಫ್ರಾನ್ಸಿಸ್ಕೋ: ಇತ್ತೀಚೆಗೆ ಕೃತಕ ಬುದ್ಧಿಮತ್ತೆ (ಎ.ಐ.) ಕಂಪೆನಿ ಓಪನ್‌ ಎಐನಲ್ಲಿ ಮತ್ತೂಮ್ಮೆ ನಾಟಕೀಯ ಬೆಳವಣಿಗೆಗಳು ನಡೆದಿವೆ. ಕೆಲವೇ ದಿನಗಳ ಹಿಂದೆ ಆ ಸಂಸ್ಥೆಯ ಹುಟ್ಟಿಗೆ ಕಾರಣರಾಗಿದ್ದ ಸ್ಯಾಮ್‌ ಆಲ್ಟ್ಮನ್‌ರನ್ನು ಹೊರಹಾಕಲಾಗಿತ್ತು. ಇದೀಗ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಮಧ್ಯಸ್ಥಿಕೆಯೊಂದಿಗೆ, ಸಿಇಒ (ಮುಖ್ಯ ಕಾರ್ಯನಿರ್ವಹಣಾ­ಧಿಕಾರಿ) ಆಗಿ ಆಲ್ಟ್ ಮನ್‌ ಕಂಪೆನಿಗೆ ಮರಳಿದ್ದಾರೆ! ಮುಂದಿನ ಐದು ದಿನಗಳಲ್ಲಿ ಈ ಪ್ರಕ್ರಿಯೆಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ.

Advertisement

ಇದರ ಜತೆಗೆ ಓಪನ್‌ ಎಐಗೆ ಹೊಸ ಆಡಳಿತ ಮಂಡಳಿಯನ್ನೂ ರಚಿಸಲಾಗಿದೆ. ಸೇಲ್ಸ್‌ಫೋರ್ಸ್‌ ಎಂಬ ಸಾಫ್ಟ್ವೇರ್‌ ಕಂಪೆನಿಯ ಮಾಜಿ ಸಹ ಸಿಇಒ ಬ್ರೆಟ್‌ ಟೇಲರ್‌ ಅದರ ನೇತೃತ್ವ ವಹಿಸಲಿದ್ದಾರೆ. ಹೊಸತರಲ್ಲಿ ಆಲ್ಟ್ ಮನ್‌ ಅವರನ್ನು ವಜಾಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆ್ಯಡಮ್‌ ಡಿ ಆ್ಯಂಗ್ಲೋ, ಅಮೆರಿಕದ ಹಣಕಾಸು ಖಾತೆ ಮಾಜಿ ಸಚಿವ ಲಾರಿ ಸಮನ್ಸ್‌ ಸೇರಿದಂತೆ ಹಲವರು ಇರಲಿದ್ದಾರೆ.

ಆಲ್ಟ್ಮನ್‌ ಹೇಳಿದ್ದೇನು?: ಈ ಬೆಳವಣಿಗೆಯ ಅನಂತರ ಸ್ಯಾಮ್‌ ಆಲ್ಟ್ಮನ್‌ ಟ್ವೀಟ್‌ ಮಾಡಿದ್ದು “ನಾನು ಓಪನ್‌ ಎಐ ಕಂಪೆನಿಯನ್ನು ಪ್ರೀತಿಸುತ್ತೇನೆ. ಕಳೆದ ಕೆಲವು ದಿನಗಳಿಂದ ಸಂಸ್ಥೆಗಾಗಿ ಮತ್ತು ಹಾಲಿ ತಂಡಕ್ಕಾಗಿ ಕೆಲಸ ಮಾಡುತ್ತಿದ್ದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿಕೊಂಡು ಮುಂದಕ್ಕೆ ಸಾಗೋಣ’ ಎಂದು ಬರೆದುಕೊಂಡಿದ್ದಾರೆ. ಇದರ ಜತೆಗೆ ಗ್ರೆಗ್‌ ಬ್ರೋಕ್‌ಮನ್‌ ಅವರು ಕೂಡ ಕಂಪೆನಿಗೆ ಮರಳಿದ್ದಾರೆ. ಈ ನಿಟ್ಟಿನಲ್ಲಿ ಅವರು ತಮ್ಮ ಸಹೋದ್ಯೋಗಿಗಳ ಜತೆಗೆ ಸೆಲ್ಫಿ ತೆಗೆದುಕೊಂಡು “ನಾವು ಮತ್ತೆ ಬಂದಿದ್ದೇವೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ

ಹಿಂದೆ ಆಗಿದ್ದೇನು?: ನ.19ರಂದು ನಡೆದಿದ್ದ ನಾಟಕೀಯ ಬೆಳವಣಿಗೆಯಲ್ಲಿ ಸ್ಯಾಮ್‌ ಆಲ್ಟ್ಮನ್‌ ಮತ್ತು ಅಧ್ಯಕ್ಷ ಗ್ರೆಗ್‌ ಬ್ರೋಕ್‌ಮನ್‌ ಅವರನ್ನು ವಜಾ ಮಾಡಲಾಗಿತ್ತು. ಇದಾದ ಬಳಿಕ ಓಪನ್‌ ಎಐನ 750ಕ್ಕೂ ಅಧಿಕ ಮಂದಿ ಹುದ್ದೆಗೆ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದರು. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಸೇರಿದಂತೆ ತಾಂತ್ರಿಕ ಕ್ಷೇತ್ರದ ಮಾತುಕತೆಯ ಬಳಿಕ ವಿವಾದ ಸುಖಾಂತ್ಯಗೊಳ್ಳುವತ್ತ ಸಾಗಿದೆ. ಓಪನ್‌ ಎಐನಲ್ಲಿ ಮೈಕ್ರೋಸಾಫ್ಟ್ ಕೂಡ ಬಂಡವಾಳ ಹೂಡಿಕೆ ಮಾಡಿತ್ತು. ಹೀಗಾಗಿ ನಾದೆಳ್ಲ ಸ್ಯಾಮ್‌ ಆಲ್ಟ್ಮನ್‌ರನ್ನು ಹುದ್ದೆಯಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಮಂಗಳವಾರ ನಡೆದಿದ್ದ ಮತ್ತೂಂದು ಬೆಳವಣಿಗೆಯಲ್ಲಿ ಮೈಕ್ರೋಸಾಫ್ಟ್ನ ಹೊಸ ಕೃತಕ ಬುದ್ಧಿಮತ್ತೆ ಸಂಶೋಧನ ತಂಡಕ್ಕೆ ಸ್ಯಾಮ್‌ ಆಲ್ಟ್ ಮನ್‌ರನ್ನೇ ಸಿಇಒ ಆಗಿ ನೇಮಿಸಿರುವ ಬಗ್ಗೆ ನಾದೆಳ್ಲ ಪ್ರಕಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next