ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನ.20ರಂದು ಸುಮಾರು 170 ರೈತ ಸಂಘಟನೆಗಳು ಒಗ್ಗೂಡಿ, ದೆಹಲಿ ಸಂಸತ್ ಮಾರ್ಗದಲ್ಲಿ ರೈತರ ಪರ್ಯಾಯ ಸಂಸತ್ ಅನ್ನು ಆಯೋಜಿಸಿವೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಟೀಕಿಸಿದರು.
ಈ ಹಿಂದೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲು ರೈತರ ಉತ್ಪಾದನ ವೆಚ್ಚದಲ್ಲಿ ಅರ್ಧದಷ್ಟು ಭರಿಸುವ ವಾಗ್ಧಾನ ಮಾಡಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ಮೋದಿ ಸರ್ಕಾರ ತನ್ನ ಪ್ರಣಾಳಿಕೆಯನ್ನೇ ಮರೆತಿದೆ. ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ತಿರಸ್ಕರಿಸಲಾಗಿದೆ. ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖೀಲ ಭಾರತ ಕಿಸಾನ್ ಸಂಘರ್ಷ ಸಮಿತಿ ನೇತೃತ್ವದಲ್ಲಿ ರೈತರ ಪರ್ಯಾಯ ಸಂಸತ್‌ಅನ್ನು ಸಂಘಟಿಸಲಾಗಿದೆ ಎಂದು ತಿಳಿಸಿದರು.
ದೇಶದ ವಿವಿಧೆಡೆಗಳಿಂದ ಸುಮಾರು ಒಂದು ಲಕ್ಷ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ರಾಜ್ಯದಿಂದ ಹತ್ತು ಸಾವಿರ ರೈತರು ಮತ್ತು ಕೃಷಿ ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ ಎಂದರು. ಕೇಂದ್ರ ಸರ್ಕಾರ ರೈತರನ್ನು ಮರೆತಿದೆ.ಕಾರ್ಪೊರೇಟರ್‌ಗಳ ಒಲೈಕೆಯಲ್ಲಿ ತೊಡಗಿದೆ.ಇದನ್ನು ಎಚ್ಚರಿಸುವ ಕಾರ್ಯ ನಡೆಯಬೇಕಾಗಿದೆ.ಅಧಿಕಾರಕ್ಕೆ ಬರುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುವ ಆಶ್ವಾಸನೆಯನ್ನು ನೀಡಿದ್ದರು.ಆದರೆ ಈ ಬಗ್ಗೆ ಎಲ್ಲೂ ಮಾತನಾಡುತ್ತಿಲ್ಲ ಎಂದು ದೂರಿದರು.
ಸರ್ಕಾರ ರೈತರ ಬೆಳೆೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿದ್ದರೂ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಖರೀದಿಸುವ ಪ್ರಕ್ರಿಯೆ ನಡೆದಿದೆ.ಇದರ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಬೇಕು.ಬೆಂಬಲ ಬೆಲೆಯ ಖರೀದಿ ಕೇಂದ್ರಗಳನ್ನು ತೆರೆಯಬೇಕು.ಈ ಸಂಬಂಧ ರೈತರಿಗೆ ಅನುಕೂಲವಾಗುವಂತ ಹೊಸ ಕರಡು ಮಸೂದೆಯೊಂದನ್ನು ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಜಾರಿಗೆ ತರಬೇಕು.ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.