Advertisement

Politics: ಹಗಲೂ ರಾತ್ರಿ ದುಡಿದರೆ ಪರ್ಯಾಯ ಸರ್ಕಾರ ಅಧಿಕಾರಕ್ಕೆ: ಖರ್ಗೆ

10:05 PM Jan 04, 2024 | Team Udayavani |

ನವದೆಹಲಿ: “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ 10 ವರ್ಷಗಳ ಆಡಳಿತ ವೈಫ‌ಲ್ಯವನ್ನು ಮುಚ್ಚಿಟ್ಟುಕೊಳ್ಳಲು, ಉದ್ದೇಶಪೂರ್ವಕವಾಗಿ ಭಾವನಾತ್ಮಕ ವಿಷಯಗಳನ್ನು ಕೆದಕುತ್ತಿದೆ. ಬಿಜೆಪಿಯ ಸುಳ್ಳು, ವಂಚನೆ, ತಪ್ಪುಗಳಿಗೆ ಪ್ರಬಲ ಉತ್ತರ ನೀಡಲು ಎಲ್ಲ ಕಾಂಗ್ರೆಸ್‌ ಕಾರ್ಯಕರ್ತರು ಒಗ್ಗೂಡಬೇಕು’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.

Advertisement

ರಾಷ್ಟ್ರೀಯ ಕಾಂಗ್ರೆಸ್‌ನ ನೂತನ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ದೆಹಲಿಯ ಕಾಂಗ್ರೆಸ್‌ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಈ ಸಭೆಯಲ್ಲಿ; ಪಕ್ಷದ ಕಾರ್ಯದರ್ಶಿಗಳು, ರಾಜ್ಯಗಳ ಉಸ್ತುವಾರಿಗಳು, ರಾಜ್ಯ ಘಟಕಗಳ ಮುಖ್ಯಸ್ಥರು, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರು ಹಾಜರಿದ್ದರು.

2004ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದ ಕಾಂಗ್ರೆಸ್‌ ಮಾಜಿ ಸೋನಿಯಾ ಗಾಂಧಿಯನ್ನು, ಭಾರತ್‌ ಜೋಡೋ ನ್ಯಾಯಯಾತ್ರೆಗೆ ಸಿದ್ಧವಾಗಿರುವ ರಾಹುಲ್‌ ಗಾಂಧಿಗೆ ಖರ್ಗೆಯ ಮೆಚ್ಚುಗೆ ದೊರೆಯಿತು. “2004ರಲ್ಲಿ ಪಕ್ಷದ ಪ್ರತೀ ಕಾರ್ಯಕರ್ತರು ಹಳ್ಳಿಹಳ್ಳಿಗಳಲ್ಲಿ ಎದ್ದು ನಿಂತರು. ಈಗ ಅದೇ ಅರ್ಪಣಾಭಾವದಿಂದ ಕಠಿಣ ಶ್ರಮ ಹಾಕಿದರೆ, ಪಕ್ಷ ಮುನ್ನಡೆಯುತ್ತದೆ. ಮೋದಿ ಸರ್ಕಾರ ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್‌ ಕೊಡುಗೆಯನ್ನು ನಿರ್ಲಕ್ಷಿಸಲು ಯತ್ನಿಸುತ್ತಿದೆ. ಸಂಸದೀಯ ಪ್ರಜಾಪ್ರಭುತ್ವ, ಆಧುನಿಕ ಭಾರತದ ನಿರ್ಮಾಣದಲ್ಲಿ ಕಾಂಗ್ರೆಸ್‌ ಪಾತ್ರವನ್ನು ಕಾಂಗ್ರೆಸ್ಸಿಗರು ನೆನಪಿಸಿಕೊಳ್ಳಬೇಕು. ಇತಿಹಾಸವನ್ನು ಮರೆತವನು ಇತಿಹಾಸ ಸೃಷ್ಟಿಸಲಾರ’ ಎಂದು ಖರ್ಗೆ ಹೇಳಿದ್ದಾರೆ.

 ಕೆಳಹಂತದಲ್ಲಿ ಕಾರ್ಯನಿರ್ವಹಿಸಬೇಕು: ಚುನಾವಣಾ ಬೂತ್‌ಗಳು, ಮತದಾರರ ಪಟ್ಟಿ ಇಟ್ಟುಕೊಂಡು ಬೇರುಮಟ್ಟದಿಂದ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು. ಮುಖ್ಯವಾಗಿ ವಲಸಿಗರು, ದಲಿತರು, ಬುಡಕಟ್ಟು ಜನರು, ಇತರೆ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರ ಮೇಲೆ ಮುಖ್ಯವಾಗಿ ಗಮನ ಹರಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.

ಖರ್ಗೆ ಸೂಚನೆಗಳೇನು?

Advertisement

– ಎಲ್ಲ ಭಿನ್ನಮತಗಳನ್ನು ಪಕ್ಕಕ್ಕಿಡಿ, ಕಾಲೆಳೆಯುವುದನ್ನು ನಿಲ್ಲಿಸಿ

– ಆಂತರಿಕ ವಿವಾದಗಳನ್ನು ಮಾಧ್ಯಮಗಳಲ್ಲಿ ಚರ್ಚಿಸಬೇಡಿ

– ಕಾಂಗ್ರೆಸ್‌ ಜಯಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡಿ.

– ನಮಗಿರುವುದು ಇನ್ನು ಮೂರೇ ತಿಂಗಳು ಸಮಯ.

– ಹಗಲುರಾತ್ರಿ ದುಡಿದರೆ, ಲೋಕಸಭಾ ಚುನಾವಣೆಯಲ್ಲಿ ಪರ್ಯಾಯ ಸರ್ಕಾರವೊಂದನ್ನು ಅಧಿಕಾರಕ್ಕೆ ತರಬಹುದು

ರಾಹುಲ್‌ ಯಾತ್ರೆ ಹೆಸರು ಬದಲು: ಈಗ ಭಾರತ್‌ ಜೋಡೋ ನ್ಯಾಯ ಯಾತ್ರೆ

– 15 ರಾಜ್ಯಗಳಲ್ಲಿ 6,700 ಕಿ.ಮೀ. ಸಂಚಾರ

– 66 ದಿನಗಳ ಪಯಣ; ದಿನಕ್ಕೆರಡು ಭಾಷಣ

ಮಣಿಪುರದಿಂದ ಮಹಾರಾಷ್ಟ್ರದವರೆಗೆ ಜ.14ರಿಂದ ಮಾ.20ರವರೆಗೆ ರಾಹುಲ್‌ ಗಾಂಧಿ, ಭಾರತ್‌ ನ್ಯಾಯ ಯಾತ್ರೆ ನಡೆಸಲು ಉದ್ದೇಶಿಸಿದ್ದಾರೆ. ಆ ಹೆಸರನ್ನು ಗುರುವಾರದ ಕಾಂಗ್ರೆಸ್‌ ಸಭೆಯಲ್ಲಿ ಬದಲಾಯಿಸಲಾಗಿದೆ. ನ್ಯಾಯ ಯಾತ್ರೆ ಇನ್ನು “ಭಾರತ್‌ ಜೋಡೋ ನ್ಯಾಯ ಯಾತ್ರೆ’ ಎಂದು ಕರೆಸಿಕೊಳ್ಳಲಿದೆ. ಹಿಂದೆ ರಾಹುಲ್‌ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ ಭಾರತ್‌ ಜೋಡೋ ಯಾತ್ರೆ, ಜನರ ಮನಸ್ಸಿನಲ್ಲಿ ಕುಳಿತು ಒಂದು ಬ್ರ್ಯಾಂಡ್‌ ಸೃಷ್ಟಿಸಿದೆ. ಅದನ್ನು ಉಳಿಸಿಕೊಳ್ಳಲು ಈ ತೀರ್ಮಾನ ಮಾಡಲಾಗಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ. ಜ.14ರ ಮಧ್ಯಾಹ್ನ 12 ಗಂಟೆಗೆ ಮಣಿಪುರ ರಾಜಧಾನಿ ಇಂಫಾಲದಲ್ಲಿ ರಾಹುಲ್‌ ನ್ಯಾಯಯಾತ್ರೆಗೆ ಚಾಲನೆ ಸಿಗಲಿದೆ. ರಾಹುಲ್‌ ದಿನವೊಂದಕ್ಕೆ 2 ಭಾಷಣ ಮಾಡಲಿದ್ದಾರೆ. 66 ದಿನಗಳ ಯಾತ್ರೆಯಲ್ಲಿ ಅರುಣಾಚಲ ಪ್ರದೇಶ ಸೇರಿ 15 ರಾಜ್ಯಗಳಲ್ಲಿ ರಾಹುಲ್‌ ಒಟ್ಟು 6,700 ಕಿ.ಮೀ. ಕ್ರಮಿಸಲಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next