ಉಡುಪಿ: ಈಗ ಪಲಿಮಾರು ಶ್ರೀಪಾದರು ಪರ್ಯಾಯಕ್ಕೆ ಕುಳಿತರೆ ಪೇಜಾವರ ಶ್ರೀಗಳವರು ಪರ್ಯಾಯ ಸಂಚಾರಕ್ಕೆ ಹೊರಟರು. ಒಬ್ಬರು ಜನಾರ್ದನನ ಸೇವೆ ಮಾಡಿದರೆ, ಇನ್ನೊಬ್ಬರು ಜನತಾ ಜನಾರ್ದನರ ಸೇವೆ ಮಾಡುತ್ತಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಗುರುವಾರ ಪಲಿಮಾರು ಪರ್ಯಾಯ ದರ್ಬಾರ್ ಸಭೆಯಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನನಗೆ 20ನೇ ವರ್ಷದಲ್ಲಿ ಪಟ್ಟಾಭಿಷೇಕವಾದಾಗ ಪೇಜಾವರ ಶ್ರೀಗಳೇ ನನ್ನಲ್ಲಿ ಉತ್ಸಾಹ ತುಂಬಿ ಮಾರ್ಗದರ್ಶನ ಮಾಡಿದರು. ಹೀಗೆ ಮಾಡುವ ಮೂಲಕ ನನ್ನಿಂದ ಅನೇಕ ಸೇವೆ ಸಲ್ಲುವಂತಾಯಿತು ಎಂದರು.
ವಲ್ಲಭಭಾç ಪಟೇಲ್ ಅವರು ದೇಶವನ್ನು ಒಂದುಗೂಡಿಸಿದರೆ ಪೇಜಾವರ ಶ್ರೀಗಳು ಹಿಂದೂ ಧರ್ಮವನ್ನು ಒಂದುಗೂಡಿಸಲು ಪ್ರಯತ್ನ ಪಟ್ಟರು. ಹಿಂದೂಗಳಲ್ಲಿದ್ದ ಭಿನ್ನ ಅಭಿಪ್ರಾಯಗಳನ್ನು ತೊಡೆದು ಹಾಕಿ ಒಂದಾಗಿರಲು ವಿಶೇಷ ಪರಿಶ್ರಮ ಪಟ್ಟರು. ಅವರು ಆರೋಗ್ಯವಂತರಾಗಿ ಇನ್ನಷ್ಟು ಸೇವೆ ಸಲ್ಲುವಂತಾಗಲಿ ಎಂದು ಹಾರೈಸಿದರು.
ರಾಜಾಂಗಣದ ಮೇಲೆ ಇಷ್ಟೇ ದೊಡ್ಡ ಇನ್ನೊಂದು ಸಭಾಂಗಣವನ್ನು ಪೇಜಾವರ ಶ್ರೀಗಳು ನಿರ್ಮಿಸಿದ್ದಾರೆ. ಇದನ್ನು ನೋಡಿದರೆ ಅವರು
“ಇನ್ ದಿ ಓಲ್ಡೆಸ್ಟ್ ಆ್ಯಂಡ್ ಲೇಟೆಸ್ಟ್, ಹಿ ಈಸ್ ದಿ ಗ್ರೇಟೆಸ್ಟ್’ ಎಂದು ಹೆಗ್ಗಡೆ ಬಣ್ಣಿಸಿದರು.
ಅರ್ಚನೆ ತುಳಸಿ ಔಷಧಕ್ಕೆ ಬಳಕೆ
ನಿತ್ಯವೂ ಪಲಿಮಾರು ಸ್ವಾಮೀಜಿಯವರು ಲಕ್ಷ ತುಳಸಿ ಯನ್ನು ಅರ್ಚಿಸುತ್ತಾರೆ. ನಮ್ಮ ಆಯುರ್ವೇದ ಆಸ್ಪತ್ರೆಯ ಔಷಧ ತಯಾರಿಕಾ ವಿಭಾಗವರಲ್ಲಿ ವಿಚಾ ರಿಸಿ ಇದನ್ನು ಬಳಸುವಂತೆ ತಿಳಿಸುವೆ ಎಂದು ಡಾ| ಹೆಗ್ಗಡೆ ಹೇಳಿದರು.