Advertisement

ಅಹಿಂಸಾ ಹೋರಾಟದ ಜತೆಗೆ ತ್ಯಾಗ- ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ: ಪ್ರಹ್ಲಾದ ಜೋಶಿ

02:31 PM Aug 14, 2022 | Team Udayavani |

ಹುಬ್ಬಳ್ಳಿ: ದೇಶಕ್ಕೆ ಸ್ವಾತಂತ್ರ್ಯ ಸುಮ್ಮನೆ ಸಿಕ್ಕಿದ್ದಲ್ಲ. ಅಹಿಂಸಾ ಹೋರಾಟದ ಜತೆಗೆ ಅಂದಾಜು 3.5 ಕೋಟಿ ಜನರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಬಂದಿದೆ. ಈ ಇತಿಹಾಸವನ್ನು ಯುವ ಜನತೆ,ಮಕ್ಕಳು ಅರಿಯಲೆಂದೇ ಪ್ರಧಾನಿಯವರು ಹರ್ ಘರ್ ತಿರಂಗಾ ಅಭಿಯಾನ ಘೋಷಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಇಲ್ಲಿನ ಬಿವಿಬಿ ಕಾಲೇಜಿನಲ್ಲಿ ಕೇಂದ್ರ ಸಂವಹನ ಇಲಾಖೆ, ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಹರ್ ಘರ್ ತಿರಂಗಾ ಮತ್ತು ದೇಶವಿಭಜನೆ ಕರಾಳ ನೆನಪು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಸಿಪಾಯಿದಂಗೆ ಎಂದೇ ಓದುವಂತೆ ಮಾಡಿದ್ದು, ಮೆಕಾಲೆ ಶಿಕ್ಷಣದ ಮನಸ್ಥಿತಿಯಾಗಿದೆ. ಹರ್ ಘರ್ ತಿರಂಗಾ ಮೂಲಕ ಪ್ರಧಾನಿ ಮೋದಿಯವರು ರಾಷ್ಟ್ರಧ್ವಜ ದ ಮಹತ್ವ ಕುಗ್ಗಿಸಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ ದೇಶದ ಯುವ ಜನತೆ ಮಕ್ಕಳು ಸ್ವಾತಂತ್ರ್ಯ ಹೋರಾಟ ಇತಿಹಾಸ ಅರಿಯಬೇಕೆಂಬುದು ಪ್ರಧಾನಿಯವರ ಆಶಯವಾಗಿದೆ ಎಂದರು.

ಬ್ರಿಟಿಷರು ಭಾರತ ಭಿಕ್ಷುಕರ ದೇಶ ಎಂದು ಮೂದಲಿಸಿದ್ದರು. ಆದರೆ ಇಂದು    ಭಾರತದ ಮಹತ್ವ ವಿಶ್ವಕ್ಕೆ ಅರಿವಾಗತೊಡಗಿದೆ. ವಿಶ್ವದಲ್ಲಿ ಶಾಂತಿ ನೆಲೆಸಲು ಭಾರತದ ಪ್ರಧಾನಿ ಮೋದಿಯವರ ಮಧ್ಯಸ್ಥಿಕೆ ಅವಶ್ಯ ಎಂಬುದು ಜಗತ್ತಿನ ಅನೇಕ ರಾಷ್ಟ್ರಗಳ ನಾಯಕರ ಅನಿಸಿಕೆಯಾಗಿದೆ. ಬ್ರಿಟಿಷ್ ರು ಬಂದು ದೇಶ ಒಂದುಗೂಡಿಸಿದರು ಎಂಬುದು ಮತ್ತೊಂದು ಅಪ್ರಚಾರ. ವೇದ, ಉಪನಿಷತ್ತು ಕಾಲದಿಂದಲು ಭಾರತ ದೇಶ ಒಂದು ಎಂಬುದಿದೆ. ನಮ್ಮ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದರೆ, ಇಂಗ್ಲಿಷ್ ಗೆ 500-600 ವರ್ಷಗಳ ಇತಿಹಾಸವಷ್ಟೆ ಇದೆ. ಸಾಂಸ್ಕೃತಿಕವಾಗಿ ಭಾರತ ಅನಾದಿ ಕಾಲದಿಂದಲೂ ಒಂದಾಗಿಯೇ ಇದೆ ಎಂದರು.

ದೇಶ ವಿಭಜನೆಯ ವೇಳೆ ಸುಮಾರು 10 ಲಕ್ಷ ಜನರ ಸಾವು ಸಂಭವಿಸಿತ್ತು. 15 ಕೋಟಿಯಷ್ಟು ಜನರು ಆ ಕಡೆ, ಈ ಕಡೆ ಬದಲಾಗಿದ್ದರು. ಮೋದಿ ನೇತೃತ್ವದ ಸರಕಾರ ಬರುವವರೆಗೂ ಬಾಂಗ್ಲಾದೇಶದ ಗಡಿಗೆ ಸೂಕ್ತ ರಕ್ಷಣೆ ಇರಲಿಲ್ಲ ಇದೀಗ ಗಡಿಗೆ ತಂತಿಬೇಲಿ ಹಾಕಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next