ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ ಹೊತ್ತಿನಲ್ಲೇ ಇತ್ತ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಶ್ರೀರಾಮಂದಿರದಲ್ಲೂ ರಾಮದೇವರಿಗೆ ಪ್ರಾಣಪ್ರತಿಷ್ಠೆ ನಡೆದಿದೆ.
ಉದ್ಯಮಿ ಸುನಿತಾ ತಿಮ್ಮೇಗೌಡ ಸಾರಥ್ಯದಲ್ಲಿ ದೇವಸ್ಥಾನ ನಿರ್ಮಾಣಗೊಂಡಿದ್ದು, ಅವರೇ ರಾಮನ ಪ್ರಾಣಪ್ರತಿಷ್ಠೆಯ ನೇತೃತ್ವ ವಹಿಸಿದ್ದಾರೆ.
ಧಾರ್ಮಿಕ ನಿಷ್ಠೆ ಹಾಗೂ ಹಲವು ವೈದಿಕ ಕಾರ್ಯಕ್ರಮಗಳ ಮೂಲಕ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಡೆಯಿತು. ಶ್ರೀರಾಮ ದೇವರ ಉತ್ಸವ ಮೂರ್ತಿಯನ್ನು ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತಿದ್ದ ಸಂದರ್ಭದಲ್ಲಿ ಮೂರ್ತಿಯನ್ನು ಕೊಳ್ಳೆಗಾಲದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇಗುಲದಲ್ಲಿಟ್ಟು ಪೂಜೆ ಮಾಡಲಾಗುತ್ತಿತ್ತು.
ವಿಶೇಷ ಅಲಂಕಾರ: ಶ್ರೀರಾಮ ಮಂದಿರ ಜೀರ್ಣೋದ್ಧಾರದ ಹಿನ್ನೆಯಲ್ಲಿ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹೂವುಗಳ ಅಲಂಕಾರದ ಜತೆಗೆ ವಿದ್ಯುದ್ದೀಪಗಳ ಅಲಂಕಾರವನ್ನು ಮಾಡಲಾಗಿತ್ತು. ಇದೇ ವೇಳೆ ರಾಮದೇವರ ಪೂಜೆಗಳು ಹಾಗೂ ಅನುಷ್ಠಾನಗಳು ನಡೆದವು. ಸುತ್ತಲಿನ ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು.
ಕೊಳ್ಳೆಗಾಲದ ಶ್ರೀರಾಮದೇವರ ದೇಗುಲವನ್ನು ನಿರ್ಮಿಸಿದ್ದು ಸುನಿತಾ ಅವರ ಹಿರಿಕರಾದ ವೆಂಕಟಸ್ವಾಮಿ ಹಾಗೂ ಕೃಷ್ಣಪ್ಪ ಸಹೋದರರು. ಆದರೆ, ದೇವಸ್ಥಾನ ಇನ್ನಷ್ಟು ಅಭಿವೃದ್ಧಿಯಾಗಬೇಕು ಎಂಬುದು ಸುನಿತಾ ಅವರ ತಾಯಿ ಸಾವಿತ್ರಮ್ಮ ತಿಮ್ಮೇಗೌಡ ಅವರ ಕನಸಾಗಿತ್ತು. ಅಂತೆಯೇ ಅವರು ಸ್ಥಳ ಹಾಗೂ ಕೋಟ್ಯಂತರ ರೂಪಾಯಿ ದಾನ ನೀಡಿ ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದ್ದರು. ಸ್ಥಳೀಯರೂ ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ನೆರವು ನೀಡಿದ್ದರು. ಆದರೆ ಸಾವಿತ್ರಮ್ಮ ಅವರು ರಾಮನ ದೇಗುಲ ಜೀರ್ಣೋದ್ಧಾರವಾಗುವ ಮೊದಲು ನಿಧನ ಹೊಂದಿದ್ದರು. ಹೀಗಾಗಿ ಸುನಿತಾ ತಿಮ್ಮೇಗೌಡ ಅವರು ರಾಮ ದೇವರನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ತಾಯಿಯ ಆಸೆಯನ್ನು ನೆರವೇರಿಸಿದ್ದಾರೆ.
ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವುದು ನನ್ನ ತಾಯಿಯ ಕನಸು. ಅವರು ಈಗ ನಮ್ಮೊಂದಿಗೆ ಇಲ್ಲ. ಆದರೆ ಮಗಳಾಗಿ ಅವರ ಆಸೆಯನ್ನು ಈಡೇರಿಸುವುದು ನನ್ನ ಕರ್ತವ್ಯ. ದೈವ ನಿಷ್ಠೆ ಹಾಗೂ ತಾಯಿ ಮೇಲಿನ ಪ್ರೀತಿಯಿಂದ ಅದನ್ನು ಮಾಡಿದ್ದೇನೆ. ನನ್ನ ಹಿರಿಕರು ಕಟ್ಟಿದ ದೇಗುಲದಲ್ಲಿ ಶ್ರೀರಾಮ ಪ್ರತಿಷ್ಠಾಪನೆಗೊಳ್ಳುವುದು ನನ್ನ ಜೀವನದ ಸಾರ್ಥಕ ಸಂದರ್ಭ ಎಂದು ಉದ್ಯಮಿ ಸುನಿತಾ ತಿಮ್ಮೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.