ಒಬ್ಟಾಕೆ, ವಯಸ್ಸು 70 ಕಳೆದಿರಬಹುದು. “ಮಗಾ, ನನಗೊಂದು ರವಿಕೆ ತಂದು ಕೊಡಬಹುದೇ? ಎಲ್ಲ ಹರಿದುಹೋಗಿದೆ ‘ ಎಂದು ಕೇಳಿದಳು. ಕೋವಿಡ್ ಲಾಕ್‌ಡೌನ್‌ನಿಂದಾಗಿ, ಮಳಿಗೆಗಳೆಲ್ಲ ಮುಚ್ಚಿವೆ. ಮನೆಯಲ್ಲಿ ತಂದಿಟ್ಟಿದ್ದ ಬಟ್ಟೆಯನ್ನೇ ಕೊಡಬೇಕಾದ ಅನಿವಾರ್ಯ ಸ್ಥಿತಿ. ಹಳೆಯದನ್ನು ಕೊಡುವಂತೆಯೂ ಇಲ್ಲ. ಮನೆಯಲ್ಲಿ ಇದ್ದುದನ್ನೇ ಕೊಟ್ಟಾಗ, ಆಕೆಯ ಮುಖದಲ್ಲಿ ಧನ್ಯವಾದದ ಹನಿ ಹನಿ ಆನಂದಬಾಷ್ಪ. ಮತ್ತೂಬ್ಬ ಮಹಿಳೆ, ಕೋಟೇಶ್ವರ ಬಳಿ ಒಂಟಿಯಾಗಿ ವಾಸವಿದ್ದರು. “ನನಗೆ ಒಣಹಣ್ಣು ಬೇಕಿದೆ. ಇದ್ದರೆ ಅದನ್ನು ಕೊಡಬಹುದೆ? ಏಕೆಂದರೆ, ನನ್ನ ಮನೆಯ ಬಳಿ ಶೌಚಾಲಯ ಇಲ್ಲ. ಶೌಚಾಲಯಕ್ಕೆ ದೂರ ಹೋಗಬೇಕಾಗುತ್ತದೆ. ಲಾಕ್‌ಡೌನ್‌ನಿಂದಾಗಿ, ಹೋಗಲಾಗುತ್ತಿಲ್ಲ’ ಅಂದರು. ಅಬ್ಟಾ, ಶೌಚದ ಕಾರಣಕ್ಕಾಗಿ ತಿನ್ನುವುದನ್ನೂ ಬಿಟ್ಟ ಮಹಿಳೆಯ ಕರುಣಾಜನಕ ಕಥೆ ಕೇಳಿದಾಗ, ಕಣ್ಣು ಮಂಜಾಗುತ್ತದೆ. ಹೀಗೆ ಹೊತ್ತೇರಿ ದಣಿವಾಗ ಕಿ.ಮೀ.ಗಟ್ಟಲೆ ದೂರಕ್ಕೆ ಸ್ಕೂಟರಿನಲ್ಲಿ ಹೋಗಿ, ಹತ್ತಾರು ಜನರನ್ನು ಭೇಟಿ ಮಾಡಿ, ಅವರ ಕುಶಲ ವಿಚಾರಿಸಿ ಚಹಾ- ಊಟ ಕೊಡುವ ವ್ಯಕ್ತಿಯೇ ಸಾಯಿನಾಥ್ ಶೇಟ್.
ಸಾಯಿನಾಥ್, ಉಡುಪಿ ಜಿಲ್ಲೆ ಕುಂದಾಪುರದ ಚಿಕ್ಕನ್ ಸಾಲ್ ರಸ್ತೆ ನಿವಾಸಿ. ಅಂಥಾ ಶ್ರೀಮಂತ ಅಲ್ಲ. ವಿಜಯ ಬ್ಯಾಂಕಿನಲ್ಲಿ ಸರಾಫರು. ಜೊತೆಗೆ, ಮನೆಯಲ್ಲೇ ಚಿನ್ನ, ಬೆಳ್ಳಿಯ ಸಣ್ಣಪುಟ್ಟ ಕೆಲಸಗಳನ್ನು ಮಾಡುವವರು. ಕೋವಿಡ್ ಲಾಕ್‌ಡೌನ್‌ನಿಂದಾಗಿ, ದೇಶದ ಎಲ್ಲ ಸಣ್ಣ ಆದಾಯದವರಿಗೆ ಹೊಡೆತ ಬಿದ್ದಂತೆಯೇ, ಇವರಿಗೂ ಕಷ್ಟ ಜೊತೆಯಾಗಿದೆ. ಹಾಗಂತ ಇವರೇನೂ ಕೈ ಕಟ್ಟಿ ಕೂತಿಲ್ಲ. ಎಲ್ಲರಂತೆ ದಿನದ ದುಡಿಮೆಯನ್ನೇ ನೆಚ್ಚಿಕೊಂಡಿದ್ದರೂ, ತಮ್ಮ ಕೈಲಾದ ಸೇವೆ ಮಾಡುತ್ತಲೇ ಇದ್ದಾರೆ. ಮಾ.25 ಎಲ್ಲರ ಪಾಲಿಗೆ ಚಾಂದ್ರಮಾನ ಯುಗಾದಿ. ಹೊಸ ಸಂವತ್ಸವರದ ಆರಂಭ. ಆದರೆ, ಸಾಯಿನಾಥ ಶೇಟ್ ಅವರ ಪಾಲಿಗೆ, ಹೊಸ ಸವಾಲಿನ ಆರಂಭ. ತಮ್ಮ ಮನೆಯಲ್ಲಿ ಲಾಕ್‌ಡೌನ್‌ನಿಂದ ಏನು ಸಮಸ್ಯೆಗಳಾಗುತ್ತಿವೆ ಎಂದು ಗಮನಿಸಿದ ಅವರು, ತತ್‌ಕ್ಷಣ ಗಮನ ಹರಿಸಿದ್ದೇ ಅದಕ್ಕಿಂತ ಹೆಚ್ಚು ಕಷ್ಟಪಡುವವರ ಕುರಿತಾಗಿ. ಯಾವಾಗ ತಿಂಗಳಾಂತ್ಯದವರೆಗೆ ಲಾಕ್‌ಡೌನ್ ಎಂದು ರಾಜ್ಯದಲ್ಲಿ ಘೋಷಣೆಯಾಯಿತೋ, ಆವಾಗಲೇ ಸಾಯಿನಾಥ್ ನಿರ್ಧರಿಸಿಬಿಟ್ಟಿದ್ದರು;
ಅಸಹಾಯಕರಿಗೆ, ಮನೆ ಮಂದಿಯನ್ನು ಬಿಟ್ಟು ಕೋವಿಡ್ ವಿರುದ್ಧದ ಹೋರಾಟಕ್ಕೆ ನಿಂತವರಿಗೆ ನೆರವಾಗುತ್ತೇನೆ ಎಂದು. ಆ ನಂತರ ಅವರು ತಡ ಮಾಡಲಿಲ್ಲ. ಎರಡು ಪ್ಲಾಸ್ಕ್, ಒಂದಷ್ಟು ಬಿಸ್ಕತ್ ಪ್ಯಾಕೆಟ್‌ಗಳನ್ನು ಹಿಡಕೊಂಡು, ಸ್ಕೂಟರ್ ಹತ್ತಿ ಹೊರಟೇ ಬಿಟ್ಟರು. ನೀರು, ತಿಂಡಿ, ಚಹಾ ದೊರಕದೇ ಬಿಸಿಲಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರು, ಲಾಕ್‌ಡೌನ್‌ನಿಂದಾಗಿ ಅಲ್ಲಲ್ಲಿ ಬಾಕಿಯಾದವರು, ಕೆಲಸ ಮಾಡಲಾಗದೇ ನಿತ್ಯದ ದುಡಿಮೆ ದೊರಕದವರು, ಅನಾಥರು, ಭಿಕ್ಷುಕರು, ತಮ್ಮ ದೈನೇಸಿ ಪರಿಸ್ಥಿತಿಯನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದವರು… ಹೀಗೆ ಒಬ್ಬಿಬ್ಬರಲ್ಲ. ಲೆಕ್ಕ ಹಾಕುತ್ತಾ ಹೋದರೆ ನೂರರ ಗಡಿ ತಲುಪುತ್ತಿತ್ತು. ಅವರಿಗೆಲ್ಲಾ ಬೆಳಗಿನ ಚಹಾ ಕೊಟ್ಟರು, ಮಧ್ಯಾಹ್ನದ ಊಟ ಕೊಟ್ಟರು. ಆಗ ಕೆಲವರು, ಸಂಜೆಯ ಊಟವನ್ನೂ ಕೊಡಲು ಸಾಧ್ಯವೇ? ಎಂದು ಮನವಿ ಮಾಡಿಕೊಂಡರು. ಅದರಂತೆ, ಕೆಲವರಿಗೆ ರಾತ್ರಿ ಊಟವನ್ನೂಕೊಟ್ಟರು.
ಲಾಕ್‌ಡೌನ್ ಘೋಷಣೆಯಾಗಿ ಭರ್ತಿ ಒಂದು ತಿಂಗಳು ಕಳೆದು, ದಿನಗಳು ಮುಂದುವರಿಯುತ್ತಿವೆ. ಶೇಟ್ ಅವರ ನಿತ್ಯ ಕಾಯಕಕ್ಕೆ ವಿರಾಮವೇ ಸಿಕ್ಕಿಲ್ಲ. ಇಷ್ಟು ಜನರಿಗೆ ಊಟ, ಚಹಾ, ಬಿಸ್ಕತ್ ಎಂದು ನೀಡಲು ಒಂದಷ್ಟು ದಾನಿಗಳು ನೆರವಾದರು. ಸಂಘ ಸಂಸ್ಥೆಯವರು ಸಣ್ಣಸಣ್ಣ ಸಹಾಯವನ್ನೂ ಮಾಡಿದರು. ಕೆಲಸ ಮಾಡುತ್ತಿದ್ದ (ಬ್ಯಾಂಕ್ ಆಫ್ ಬರೋಡಾ) ವಿಜಯ ಬ್ಯಾಂಕಿನವರು ಕೂಡಾ ಸಮಯದಲ್ಲಿ ಹೊಂದಾಣಿಕೆಗೆ ಅನುವು ಮಾಡಿಕೊಟ್ಟರು.
ಈ ಸಹಾಯ ಮಾಡುವ ಗುಣ, ಶೇಟ್‌ಗೆ ಈಗಷ್ಟೇ ತಗುಲಿಕೊಂಡದ್ದಲ್ಲ. ಕಷ್ಟದಲ್ಲಿರುವವರ ಕುರಿತು ಮರುಗುವ, ಸಹಾಯ ಮಾಡುವ ಇವರು, ಕುಂದಾಪುರ ಪರಿಸರದಲ್ಲಿ ಆಗುವ ಸಮಾರಂಭಗಳಲ್ಲಿ ಉಳಿಯುವ ಆಹಾರ ಪದಾರ್ಥವನ್ನು ಸಂಗ್ರಹಿಸಿ, ಮೈದಾನದಲ್ಲಿ ಮಲಗಿದ್ದ ವಲಸೆ ಕಾರ್ಮಿಕರನ್ನು ಎಬ್ಬಿಸಿ, ಕೊಟ್ಟು ಬರುವ ಸ್ವಭಾವವನ್ನು ಸಣ್ಣ ವಯಸ್ಸಿಂದಲೇ ರೂಢಿಸಿಕೊಂಡವರು.
ಲಾಕ್‌ಡೌನ್ ಸಂದರ್ಭದಲ್ಲಿ ಅನೇಕ ದಾನಿಗಳು, ಸಂಘ ಸಂಸ್ಥೆಗಳು ಸಂಕಷ್ಟಕ್ಕೆ ಒಳಗಾದವರಿಗೆ ಸಹಾಯ ಮಾಡಿದ್ದಾರೆ. ಕೆಲವರು ನಿಲ್ಲಿಸಿಯೂ ಆಗಿದೆ. ಆದರೆ, ಏಕವ್ಯಕ್ತಿಯಾಗಿ ಇಷ್ಟೆಲ್ಲ ಕಷ್ಟದಲ್ಲಿ ಇನ್ನೂ ಮುಂದುವರಿಸುತ್ತಿರುವ ಬೆರಳೆಣಿಕೆ ಮಂದಿಯಲ್ಲಿ, ಇವರು ಮುಂದಿನ ಸಾಲಿನಲ್ಲಿ ನಿಲ್ಲುತ್ತಾರೆ.
ಲಕ್ಷ್ಮೀ ಮಚ್ಚಿನ