Advertisement

ರೌಡಿಗಳಿಗೆ ಅಲೋಕ್‌ ಕುಮಾರ್‌ ಖಡಕ್‌ ಪಾಠ

12:21 PM Oct 03, 2018 | |

ಬೆಂಗಳೂರು: ಅಪರಾಧ ಚಟುವಟಿಕೆಗಳಲ್ಲಿ ತೊಡಗಿದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ರೌಡಿಶೀಟರ್‌ಗಳಿಗೆ ಕೇಂದ್ರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಗಾಂಧಿ ಜಯಂತಿ ಪ್ರಯುಕ್ತ ಮಂಗಳವಾರ ಸಂಜೆ ಚಾಮರಾಜಪೇಟೆಯಲ್ಲಿರುವ ಕೇಂದ್ರ ಅಪರಾಧ ವಿಭಾಗದ ಕೇಂದ್ರ ಕಚೇರಿ ಆವರಣದಲ್ಲಿ ನಗರದ ಸುಮಾರು 500 ಕ್ಕೂ ಹೆಚ್ಚು  ರೌಡಿಶೀಟರ್‌ಗಳನ್ನು ಒಂದೆಡೆ ಸೇರಿಸಿ ಪರೇಡ್‌ ನಡೆಸಿ ನಾಲ್ಕು ತಾಸಿಗೂ ಹೆಚ್ಚು ಕಾಲ ಕಿವಿ ಮಾತು ಹೇಳಿದರು.

ಈ ವೇಳೆ ಕೆಲವರ ಹೆಸರಿಡಿದೇ ವಿಚಾರಣೆ ನಡೆಸಿದ ಅಲೋಕ್‌ ಕುಮಾರ್‌, ಹಳೇ ಪ್ರಕರಣಗಳನ್ನು ಪ್ರಸ್ತಾಪಿಸುವ ಮೂಲಕ ಆರೋಪಿಗಳ ಪೂರ್ವಪರ ತಮಗೆ ತಿಳಿದಿದೆ ಎಂದು ಸೂಚ್ಯವಾಗಿ ಹೇಳಿದರು. ಜತೆಗೆ ಅವರ ಅಪರಾಧ ಕೃತ್ಯ, ಉದ್ಯೋಗ, ವಾಸಿಸುವ ಸ್ಥಳ ಸೇರಿ ಕೆಲ ಮಾಹಿತಿ ಸಂಗ್ರಹಿಸಿದರು.

ಇನ್ನು ಕೆಲವರ ವೇಷಭೂಷಣ, ಟ್ಯಾಟೂ, ವಿಚಿತ್ರ ಕೇಶ ವಿನ್ಯಾಸ ಕಂಡು ಕೆಂಡಮಂಡಲವಾದ ಅವರು, ಇನ್ನು ನಾಲ್ಕೈದು ದಿನಗಳಲ್ಲಿ ಅಸಹ್ಯ ಸ್ವರೂಪ ಬದಲಿಸಿ ಸಿಸಿಬಿ ಅಧಿಕಾರಿಗಳ ಮುಂದೆ ಖುದ್ದು ಹಾಜರಾಗಲೇಬೇಕು ಎಂದು ಸೂಚಿಸಿದರು.

ಕೊಲೆ, ದರೋಡೆ ಹಾಗೂ ಇತರೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕೆಲ ರೌಡಿಶೀಟರ್‌ಗಳು ಮುಂದೆ ಈ ರೀತಿಯಾಗಿ ಮಾಡುವುದಿಲ್ಲ. ಸದ್ಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೇ ಸಮಾಜಮುಖೀಯಾಗಿ ಬದುಕುತ್ತಿದ್ದೇವೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಲೋಕ್‌ ಕುಮಾರ್‌ ನುಡಿದಂತೆ ನಡೆದರೆ ಒಳ್ಳೆಯದು, ಇಲ್ಲವಾದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಅಹಿಂಸೆ ಬೋಧನೆ: ಗಾಂಧಿ ಜಯಂತಿಯಂದೇ ಪರೇಡ್‌ ಮಾಡುತ್ತಿರುವ ಉದ್ದೇಶ ಅಹಿಂಸೆ ಬೋಧನೆ ಮಾಡುವುದು. ಹೀಗಾಗಿ ಹಿಂಸೆ ಬಿಡಬೇಕು. ಇನ್ಮುಂದೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದೆ ಸಾಮಾನ್ಯ ವ್ಯಕ್ತಿಯಂತೆ ಜೀವನ ನಡೆಸಬೇಕು. ಸಾರ್ವಜನಿಕರಿಗೆ ತೊಂದರೆ ಕೊಡುವುದು, ಮೀಟರ್‌ ಬಡ್ಡಿ ಹಾಗೂ ಇತರೆ ಅಪರಾಧ ಕೃತ್ಯಗಳಿಗೆ ಕುಮ್ಮಕ್ಕು ನೀಡಿದರೆ, ಪೊಲೀಸರು ಹಿಂಸಾತ್ಮಕ ತತ್ವ ಪ್ರಯೋಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್‌ ಕುಮಾರ್‌, ಜಮೀನು ವ್ಯವಹಾರ, ರಿಯಲ್‌ ಎಸ್ಟೇಟ್‌ ದಂಧೆಯಲ್ಲಿ ತೊಡಗಿರುವ ರೌಡಿಗಳಿಗೆ ಎಚ್ಚರಿಕೆ ನೀಡಿದ್ದೇವೆ. ಕಳೆದ ಮೂರು ದಿನಗಳಿಂದ ಸಿಸಿಬಿ ಡಿಸಿಪಿ ಗಿರೀಶ್‌ ನೇತೃತ್ವದಲ್ಲಿ ನಿರಂತರವಾಗಿ ಕಾರ್ಯಾಚರಣೆ ನಡೆಸಿರುವ ಸಿಬ್ಬಂದಿ, ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಜತೆಗೆ ರೌಡಿಗಳ ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಲಾಗಿದೆ ಎಂದರು.

ಬಿಳಿ ಬಟ್ಟೆ ಹಾಕಿದ್ರೆ ಸಭ್ಯರಾಗೋಲ್ಲ!: ರೌಡಿಗಳ ಪರೇಡ್‌ ವೇಳೆ ಲೋಕೇಶ್‌ ಅಲಿಯಾಸ್‌ ಮುಲಾಮಾ, ರಾಮ, ಲಕ್ಷ್ಮಣ ಹಾಗೂ ಕೋತಿರಾಮ ಹಾಗೂ ಕೆಲ ರೌಡಿಗಳನ್ನು ಬಿಳಿ ಬಟ್ಟೆಯಲ್ಲಿ ಕಂಡ ಅಲೋಕ್‌ ಕುಮಾರ್‌, “ಮೈ ಮೇಲೆ ಬಿಳಿ ಶರ್ಟ್‌ ಹಾಕಿದ ಮಾತ್ರಕ್ಕೆ ನೀವು ಸಭ್ಯಸ್ಥರು ಅಂದುಕೊಳ್ಳಬೇಡಿ. ಬಟ್ಟೆಯ ಬಣ್ಣ ಮಾತ್ರ ಬಿಳಿ. ಮನಸ್ಸು ಇನ್ನು ಕೆಟ್ಟದ್ದನ್ನೇ ಯೋಚಿಸುತ್ತಿದ್ದೆ.

ಬಿಳಿ ಶರ್ಟ್‌ ಹಾಕಿಕೊಂಡು ಅಕ್ರಮ ದಂಧೆ ನಡೆಸುತ್ತಿರಾ? ರಿಯಲ್‌ ಎಸ್ಟೇಟ್‌ ದಂಧೆಯಲ್ಲಿ ಹಣ ಮಾಡಿಕೊಂಡು ರಾಜಕೀಯಕ್ಕೆ ಬಂದು ಇಡೀ ವ್ಯವಸ್ಥೆ ಹಾಳು ಮಾಡುತ್ತಿರಾ’ ಎಂದು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ರೌಡಿ ಮುಲಾಮ ಸ್ಥಾಪಿಸಿರುವ ವೈಭವ ಕರ್ನಾಟಕ ಸಂಘಟನೆ ಕುರಿತು ಪ್ರಸ್ತಾಪಿಸಿದ ಅವರು, ಸಂಘಟನೆ ಹೆಸರಲ್ಲಿ ಸಾರ್ವಜನಿಕರ ಮೇಲೆ ದಬ್ಟಾಳಿಕೆ ಮಾಡ್ತೀಯಾ?

ಬಿಳಿ ಶರ್ಟ್‌ ಹಾಕಿದ ಮಾತ್ರಕ್ಕೆ ಎಲ್ಲವೂ ಮುಗಿತ್ತು ಅಂದುಕೊಳ್ಳಬೇಡಿ. ಇನ್ಮುಂದೆ ಬಾಲ ಬಿಚ್ಚಿದರೆ ಕತ್ತರಿಸುತ್ತೇವೆ ಎಂದರು. ಹಾಗೆಯೇ ಕೆಲ ರೌಡಿಗಳು ಮಾಂಸಹಾರ ಹೋಟೆಲ್‌ಗ‌ಳು, ಮೀಟರ್‌ ಬಡ್ಡಿ ದಂಧೆಯಲ್ಲಿ ತೊಡಗಿದ್ದಾರೆ ಅಂತಹ ವ್ಯಕ್ತಿಗಳ ಬಗ್ಗೆ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿ. ಅಲ್ಲದೆ, ಕಲಾಸಿಪಾಳ್ಯ ವ್ಯಾಪ್ತಿಯಲ್ಲಿ ಮೀಟರ್‌ ಬಡ್ಡಿ ದಂಧೆ ಹೆಚ್ಚಾಗಿ ನಡೆಯುತ್ತಿದ್ದು, ಅವರ ಬಗ್ಗೆ ನಿಗಾವಹಿಸಿ ಎಂದು ಸಿಸಿಬಿ ಅಧಿಕಾರಿಗಳಿಗೆ ಅಲೋಕ್‌ ಕುಮಾರ್‌ ಸೂಚಿಸಿದರು.

ಇ.ಡಿಗೆ ಮಾಹಿತಿ: ರೌಡಿ ಮುಲಾಮ, ಲಕ್ಷ್ಮಣ, ಮೈಕಲ್‌, ಜೆಸಿಬಿ ನಾರಾಯಣ ಹಾಗೂ ಇತರೆ ರೌಡಿಶೀಟರ್‌ಗಳ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಅಕ್ರಮ ದಂಧೆಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪೈಕಿ ಕೆಲ ದಾಖಲೆಗಳು ಅಕ್ರಮವಾಗಿ ಕೋಟ್ಯಂತರ ರೂ. ವ್ಯವಹಾರ ಹಾಗೂ ಸಂಪಾದನೆ ಬಗ್ಗೆ ಇದ್ದು, ಇವುಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ನೀಡಲಾಗುವುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಲವ್‌ ಫೇಲ್ಯೂರ್‌ ಸರ್‌!: ಕೆಲ ರೌಡಿಗಳ ಮೈ ಮೇಲೆ ಹಾಕಿಕೊಂಡಿದ್ದ ಹಚ್ಚೆ ಹಾಗೂ ಟ್ಯಾಟೂಗಳನ್ನು ಅಲೋಕ್‌ ಕುಮಾರ್‌ ಪರಿಶೀಲಿಸಿದರು. ರೌಡಿಯೊಬ್ಬ ಎರಡು ಕೈಗಳ ಮೇಲೆ ಬ್ಲೇಡ್‌ಗಳಿಂದ ಕುಯ್ದುಕೊಂಡಿದ್ದನ್ನು ಕಾರಣ ಕೇಳಿದರು. ಇದಕ್ಕೆ ಉತ್ತರಿಸಿದ ಆತ, ಲವ್‌ ಫೇಲ್ಯೂರ್‌ ಸರ್‌! ಅದಕ್ಕೆ ಕುಯ್ದುಕೊಂಡಿದ್ದೇನೆ ಎಂದು ಉತ್ತರಿಸಿದ. ಇದಕ್ಕೆ ಮುಗುಳ್ನಕ್ಕ ಅವರು, ನೀನೂ ಲವ್‌ ಮಾಡಿದ್ಯಾ? ಆದ್ರೂ ರೌಡಿ ಚಟುವಟಿಕೆ ನಡೆಸುತ್ತಿಯಾ? ಇವೆಲ್ಲ ಬಿಡಬೇಕು ಎಂದು ಸೂಚಿಸಿದರು.

ರೌಡಿ ಪಟ್ಟಿ ಬಗ್ಗೆ ಪರಿಶೀಲಿಸಿ: ರೌಡಿ ಪರೇಡ್‌ನ‌ಲ್ಲಿ ಕೆಲ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ ಅಲೋಕ್‌ ಕುಮಾರ್‌, ಆರೇಳು ವರ್ಷಗಳಿಂದ ಕಾನೂನು ಬಾಹಿರ ಚಟುವಟಿಕೆಗಳಿಂದ ದೂರು ಇರುವ ರೌಡಿಶೀಟರ್‌ಗಳ ಬಗ್ಗೆ ದಾಖಲೆಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೆ.ಆರ್‌.ಪುರ ಠಾಣೆ ರೌಡಿಶೀಟರ್‌ ಕೈಯಲ್ಲಿ ಡಾ ರಾಜ್‌ ಎಂಬ ಹೆಸರಿನ  ಹಚ್ಚೆ ಇರುವುದನ್ನು ಕಂಡ ಅಲೋಕ್‌ ಕುಮಾರ್‌, ರಾಜ್‌ ಕುಮಾರ್‌ ಅಭಿಮಾನಿ ಮಾಡೋ ಕೆಲಸ ಮಾಡುತ್ತಿದಿಯಾ ನೀನು? ಅವರ ಹೆಸರಿಗೆ ಮಸಿ ಬಳಿಯುತ್ತಿಯಾ ಎಂದು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next