Advertisement

Alnavar: ಜಿಲ್ಲೆಗೆ 35 ಕೋಟಿ ಬೆಳೆವಿಮೆ ಪರಿಹಾರ ನಿರೀಕ್ಷೆ

05:51 PM Oct 18, 2023 | |

ಅಳ್ನಾವರ: ಪ್ರಸಕ್ತ ಸಾಲಿನ ಮಳೆಗಾಲದ ವೈಪರೀತ್ಯದಿಂದ ರೈತರ ಬೆಳೆ ಸರಿಯಾಗಿ ಬಂದಿಲ್ಲ. ರೈತರು ತಾವು ಬೆಳೆದ ಬೆಳೆಗೆ ವಿಮೆ ಕಟ್ಟಿದ್ದು, ಜಿಲ್ಲೆಗೆ ಬೆಳೆ ವಿಮೆ ಪರಿಹಾರ 35 ಕೋಟಿ ರೂ. ಬರುವ ನಿರೀಕ್ಷೆ ಇದೆ. ಇದರಿಂದ ಇನ್ಸೂರೆನ್ಸ್‌ ತುಂಬಿದ ರೈತರಿಗೆ ಅನುಕೂಲ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.

Advertisement

ಸಮೀಪದ ನಿಗದಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಮಾತನಾಡಿ, ಕೃಷಿ ಹಾಗೂ ತೋಟಗಾರಿಕೆ ಬೆಳೆಗೆ ಪರಿಹಾರ ದೊರೆಯಲಿದೆ. ಜಿಲ್ಲೆಯ ಬಹುತೇಕ ಭಾಗವನ್ನು ಬರಗಾಲ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದೆ. ರಾಜ್ಯ ಸರ್ಕಾರ ಸದಾ ಬಡವರ ಹಾಗೂ ಕೃಷಿಕರ ಪರವಾಗಿದೆ ಎಂದರು.

ಜನರ ಸಮಸ್ಯೆಗೆ ಪರಿಹಾರ ಒದಗಿಸಲು ನೇರವಾಗಿ ಗ್ರಾಪಂ ಮಟ್ಟದಲ್ಲಿ ಬಂದು ಸಭೆ ಆಯೋಜಿಸಿ ಪರಿಹಾರ ನೀಡಲು ಮುಂದಾಗಿದ್ದೇನೆ. ಸಮಸ್ಯೆಗಳಿಗೆ ಸ್ಥಳದಲ್ಲಿಯೆ ಪರಿಹಾರ ಒದಗಿಸಲಾಗುತ್ತಿದೆ. ನಿಗದಿ ಗ್ರಾಮದ ಹಿರೇಕೆರೆಯನ್ನು 2.50 ಕೋಟಿ ರೂ.
ವೆಚ್ಚದಲ್ಲಿ ಅಭಿವೃದ್ಧಿ ಮಾಡುವ ಕಾಮಗಾರಿ ಶೀಘ್ರದಲ್ಲಿ ಆರಂಭಿಸಲಾಗುವುದು. ಈ ಕುರಿತು ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿದ್ದೇನೆ. ಈ ಭಾಗದ ಎಲ್ಲ ಕೆರೆಗಳ ಅಭಿವೃದ್ಧಿ, ರಸ್ತೆ, ಶಾಲೆಗಳ ದುರಸ್ತಿ, ಚರಂಡಿ ನಿರ್ಮಾಣ ಸೇರಿದಂತೆ ಮೂಲಸೌಲಭ್ಯ ಒದಗಿಸಲು ಶ್ರಮಿಸುವುದಾಗಿ ಹೇಳಿದರು.

ಸರ್ಕಾರ ಘೋಷಣೆ ಮಾಡಿದ ಐದು ಉಚಿತ ಭಾಗ್ಯದ 56 ಸಾವಿರ ಕೋಟಿ ರೂ. ಅನುದಾನ ನೇರವಾಗಿ ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಶಕ್ತಿ ಯೋಜನೆಯಡಿ ಪ್ರವಾಸ ಮಾಡುವ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಹಿಂದಿದ್ದ 80
ಲಕ್ಷ ಪ್ರವಾಸಿಗರ ಸಂಖ್ಯೆ ಈಗ 1.20 ಕೋಟಿಗೆ ತಲುಪಿ, 40 ಲಕ್ಷ ಹೆಚ್ಚಿನ ಜನ ಬಸ್‌ ಸೇವೆ ಪಡೆಯುತ್ತಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ 2000 ರೂ. ನೀಡಲಾಗುತ್ತಿದೆ. ಈ ಭಾಗದಲ್ಲಿ ಇನ್ನೂ 117 ಮಹಿಳೆಯರಿಗೆ ತಾಂತ್ರಿಕ ದೋಷದಿಂದ ಹಣ ಬಿಡುಗಡೆ ಆಗಿಲ್ಲ. ಶೀಘ್ರದಲ್ಲಿಯೆ ಅದನ್ನು ಬಗೆಹರಿಸಿ ಅವರ ಖಾತೆಗೆ ಹಣ ದೊರಕಿಸಿಕೊಡುವ ಭರವಸೆ
ನೀಡಿದರು.

Advertisement

ಕೇಳಿದ ಸಮಸ್ಯೆಗಳು: ನಿಗದಿ ಗ್ರಾಮದ ಹಿರೆಕೆರೆಯ ಅಭಿವೃದ್ಧಿ, ಹಳ್ಳಕ್ಕೆ ಬಾಂದಾರ ನಿರ್ಮಾಣ, ನರೇಗಾ ಯೋಜನೆಯಡಿ ನಮ್ಮ ಹೊಲ ನಮ್ಮ ರಸ್ತೆ ನಿರ್ಮಾಣ, ನಿಗದಿ ಗ್ರಾಮದ ಕೆಂಪು ಕೆರೆಗೆ ಸೇರುವ ಹೊಲಸು ನೀರು ಬೇರೆಡೆ ರವಾನೆ, 19 ಬಡ ಕುಟುಂಬಗಳ ಮನೆ ಹಕ್ಕುಪತ್ರ ವಿತರಣೆ, ಬಸ್‌ ವ್ಯವಸ್ಥೆ, ಮುಖ್ಯ ರಸ್ತೆಯಲ್ಲಿ ಹಂಪ್‌ ನಿರ್ಮಾಣ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಶಾಲಾ ಮೈದಾನ, ಬೆನಕನಟ್ಟಿಗೆ ಬಸ್‌ ತಂಗುದಾಣ ಮುಂತಾದ ಸಮಸ್ಯೆಗಳು ಕೇಳಿಬಂದವು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುನಂದಾ ಬಡಿಗೇರ, ತಾಪಂ ಇಒ ಗಂಗಾಧರ ಕಂದಕೂರ, ತಹಶೀಲ್ದಾರ್‌ ದೊಡ್ಡಪ್ಪ ಹೂಗಾರ, ಪಿಡಿಒ ವೆಂಕಟೇಶ ಮುರಗೋಡ, ಹನಮಂತ ಅಜ್ಜನ್ನವರ, ಸಂತೋಷ ದಾಸನಕೊಪ್ಪ, ಸುಧಾ ನಾಯ್ಕರ, ಕಸ್ತೂರಿ ಪಾಟೀಲ, ನಾಗಪ್ಪ ಜೋಡಳ್ಳಿ, ಮೌನೇಶ ಬಿಡಗೇರ, ಪುಷ್ಪಾ ಅಳಗವಾಡಿ, ಸುವರ್ಣಾ ಬಾಡದ ಇದ್ದರು.

ಇದೇ ಸಂದರ್ಭದಲ್ಲಿ ಗ್ರಾಪಂ ವತಿಯಿಂದ ಸಚಿವರ ಸನ್ಮಾನ ನಡೆಯಿತು. ವಿವಿಧ ಫಲಾನುಭವಿಗಳಿಗೆ ಮಾಸಾಶನ ನೀಡಲಾಯಿತು. ಮನಸೂರು, ಮನಗುಂಡಿಯಲ್ಲಿ ಕೂಡಾ ಜನಸಂಪರ್ಕ ಸಭೆ ನಡೆಯಿತು. ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next