Advertisement
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು 500 ಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲ ಮದ್ಯದಂಗಡಿ ಅಥವಾ ಬಾರ್‌ಗಳನ್ನು ಮುಚ್ಚುವಂತೆ ಸುಪ್ರೀಂ ಕೋರ್ಟ್‌ನ ಆದೇಶ ಜಾರಿಗೊಂಡು ಒಂದು ತಿಂಗಳಾಗುತ್ತಿದೆ. ಈ ಆದೇಶದ ಪರಿಣಾಮ ಹೆಚ್ಚಿನ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಬಾಗಿಲು ಮುಚ್ಚಿವೆ. ವಿಶೇಷ ಅಂದರೆ ಇಷ್ಟೊಂದು ಮದ್ಯದಂಗಡಿಗಳು ಬಾಗಿಲು ಮುಚ್ಚಿದ್ದರೂ ಅಬಕಾರಿ ಇಲಾಖೆಯು ತಿಂಗಳಲ್ಲಿ ನಿಗದಿಪಡಿಸಿರುವ ಮದ್ಯ ಬಾಟಲಿಗಳ ಮಾರಾಟದಲ್ಲಿ ಗಮನಾರ್ಹ ಕುಸಿತ ಉಂಟಾಗಿಲ್ಲ. ಅಂದರೆ ಪ್ರಸಕ್ತ ಜುಲೈ ತಿಂಗಳಿಗೆ ಇಲಾಖೆ ನಿಗದಿಪಡಿಸಿರುವ ಮಾರಾಟದಲ್ಲಿ ಶೇ.70ರಷ್ಟು ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ.
Related Articles
ಅಬಕಾರಿ ಇಲಾಖೆ ನಿಯಮದ ಪ್ರಕಾರ ದ.ಕ. ಜಿಲ್ಲೆ ಯಲ್ಲಿ ಒಟ್ಟು 10 ವಲಯಗಳಿದ್ದು, ಮಂಗಳೂರು ದಕ್ಷಿಣ ವಲಯ-1ರ ವ್ಯಾಪ್ತಿಯಲ್ಲಿ 96 ಮದ್ಯದಂಗಡಿಗಳ ಪೈಕಿ 85, ಮಂಗಳೂರು ದ.ವಲಯ-2ರ ವ್ಯಾಪ್ತಿಯಲ್ಲಿ 63ರ ಪೈಕಿ 36 ಅಂಗಡಿಗಳು, ಮಂಗಳೂರು ಉತ್ತರ ವಲಯ-1ರ ವ್ಯಾಪ್ತಿಯಲ್ಲಿ ಒಟ್ಟು 70 ಬಾರ್‌ಗಳ ಪೈಕಿ 28, ಮಂಗಳೂರು ಉತ್ತರ ವಲಯ-2ರಲ್ಲಿ 23 ಬಾರ್‌ಗಳಲ್ಲಿ 5, ಮಂಗಳೂರು ಪೂರ್ವ ವಲಯ-1ರ ವ್ಯಾಪ್ತಿಯಲ್ಲಿ 13ರಲ್ಲಿ 4, ಮೂಡಬಿದಿರೆ ವಲಯದ 26 ಮದ್ಯದಂಗಡಿಗಳಲ್ಲಿ 9, ಪುತ್ತೂರು ವಲಯದ 52 ಬಾರ್‌ಗಳಲ್ಲಿ 30, ಬೆಳ್ತಂಗಡಿ ವಲಯದ 27 ಅಂಗಡಿಗಳಲ್ಲಿ 5, ಬಂಟ್ವಾಳ ವಲಯದ 56ರಲ್ಲಿ 30 ಮತ್ತು ಸುಳ್ಯ ವಲಯದ 24 ಬಾರ್‌ಗಳ ಪೈಕಿ 10 ಮದ್ಯದಂಗಡಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಉಪ ಆಯುಕ್ತರು ಉದಯವಾಣಿಗೆ ತಿಳಿಸಿದ್ದಾರೆ.
Advertisement
ಉಡುಪಿ: ಶೇ. 61 ಪ್ರಗತಿಮದ್ಯದಂಗಡಿಗಳಲ್ಲಿ ಉಡುಪಿ ಜಿಲ್ಲೆಯ ಲೆಕ್ಕಾಚಾರ ನೋಡುವುದಾದರೆ ಒಟ್ಟು 4 ವಲಯಗಳಲ್ಲಿ 372 ಮದ್ಯದಂಗಡಿಗಳಲ್ಲಿ 159 ರಾಷ್ಟ್ರೀಯ ಹೆದ್ದಾರಿಗಿಂತ 500 ಮೀ.ಒಳಗಿದೆ ಎಂಬ ಕಾರಣಕ್ಕೆ ಬಂದ್ ಆಗಿದ್ದವು. ಪ್ರಸ್ತುತ ಅವುಗಳಲ್ಲಿ 61 ಮದ್ಯದಂಗಡಿಗಳು ಸ್ಥಳಾಂತರಗೊಂಡು ಕಾರ್ಯಾಚರಿಸುತ್ತಿವೆ. ಜುಲೈ ತಿಂಗಳಲ್ಲಿ ಉಡುಪಿ ಜಿಲ್ಲೆಯ ಅಬಕಾರಿ ಇಲಾಖೆಗೆ 1.71 ಲಕ್ಷ ಪೆಟ್ಟಿಗೆ (ಐಎಂಎಫ್‌ಎಲ್)ಯ ಟಾರ್ಗೆಟ್ ನೀಡಲಾಗಿದ್ದು ಅದರಲ್ಲಿ ಶೇ.61 ಪ್ರಗತಿ ಸಾಧಿಸಲಾಗಿದೆ. 19 ಮದ್ಯದಂಗಡಿ ಸ್ಥಳಾಂತರ
ಇನ್ನು ಪ್ರಸ್ತುತ ಬಂದ್ ಆಗಿರುವ ದ.ಕ.ದ 209 ಮದ್ಯ ದಂಗಡಿಗಳ ಪೈಕಿ 19 ಮದ್ಯದಂಗಡಿಗಳು ಹೆದ್ದಾರಿಯಿಂದ ಬೇರೆಡೆಗೆ ಸ್ಥಳಾಂತರಗೊಂಡು ಕಾರ್ಯ ನಿರ್ವಹಿಸುತ್ತಿವೆ. ಹೆದ್ದಾರಿ ಬದಿಯಲ್ಲಿ ಕಾರ್ಯಾಚರಿಸುತ್ತಿದ್ದು, ಕೋರ್ಟ್‌ನ ಆದೇಶದಿಂದ ಬಂದ್ ಆದ ಬಾರ್‌ಗಳಿಗೆ ಹೆದ್ದಾರಿಯಿಂದ 500 ಮೀ.ನಿಂದ ಹೊರ ಭಾಗಕ್ಕೆ ಮೂರು ತಿಂಗಳೊಳಗೆ ಸ್ಥಳಾಂತರಿಸಲು ಅವಕಾಶ ನೀಡಲಾಗಿದೆ. ಅಂದರೆ ಇಲಾಖೆಯ ರೂಲ್ ಫೈವ್‌ನಂತೆ ನಿರ್ದಿಷ್ಟ ಸ್ಥಳಗಳನ್ನು ಹೊರತುಪಡಿಸಿ ಉಳಿದೆಡೆ ಮದ್ಯದಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಸ್ಥಳಾಂತರಿಸುವ ಸಂದರ್ಭ ಮಾಲಕ ತನ್ನ ಲೈಸನ್ಸ್ ಮೊತ್ತದ ಶೇ. 25 ಹಾಗೂ ಸೆಸ್ ಶುಲ್ಕವನ್ನು ಇಲಾಖೆಗೆ ಪಾವ ತಿಸಿ ಸ್ಥಳಾಂ ತರಿಸ ಬಹುದು ಎನ್ನುತ್ತಾರೆ ಅಬಕಾರಿ ಅಧಿಕಾರಿಗಳು. ಆದರೆ ಪ್ರಸ್ತುತ ಬಾರ್‌ಗಳನ್ನು ಸ್ಥಳಾಂತರಿಸುವುದಕ್ಕೆ ತೀವ್ರ ವಿರೋಧಗಳು ಕೇಳಿಬರುತ್ತಿವೆ. ಹೀಗಾಗಿ ಬಂದ್ ಆಗಿರುವ ಎಲ್ಲ ಮದ್ಯದಂಗಡಿಗಳನ್ನು ಸ್ಥಳಾಂತರಿಸಲು ಅಡಚಣೆ ಯಾಗಿದೆ. ಕೆಲವೊಂದು ಬಾರ್‌ಗಳನ್ನು ಸ್ಥಳಾಂತರಿಸುವುದಕ್ಕೆ ಸ್ಥಳೀಯ ಮುಖಂಡರಿಂದ ಸುಮಾರು 25 ಲಕ್ಷ ರೂ.ಗಳ ವರೆಗೂ ಡಿಮಾಂಡ್ ಕೇಳಿ ಬರುತ್ತಿದೆ. ಜತೆಗೆ ತಿಂಗಳಿಗೆ ಇಂತಿಷ್ಟು ನೀಡಿ ಎಂಬ ಬೇಡಿಕೆಯೂ ಕೇಳಿ ಬರುತ್ತಿದೆ ಎಂಬ ಆರೋಪವೂ ಇದೆ. ಬಾರ್ ಸ್ಥಳಾಂತರಕ್ಕೆ ಅವಕಾಶ
ಸುಪ್ರೀಂ ಕೋರ್ಟ್ ಆದೇಶದಂತೆ ಜಿಲ್ಲೆಯಲ್ಲಿ ಕೆಲವೊಂದು ಮದ್ಯದಂಗಡಿ ಬಂದ್ ಆಗಿವೆ. ಸ್ಥಳಾಂತರಕ್ಕೆ ಅವಕಾಶ ನೀಡಲಾಗಿದ್ದು, ಕಾನೂನು ಪ್ರಕಾರ ಸ್ಥಳಾಂತರ ಮಾಡಲಾಗುತ್ತಿದೆ. ಸರಕಾರಿ ಮದ್ಯದಂಗಡಿಗಳು ಬರುತ್ತವೆ ಎಂದು ಹೇಳಲಾಗುತ್ತಿದ್ದು, ಆ ಕುರಿತು ಇನ್ನೂ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬರಲಾಗಿಲ್ಲ.
ಖುರ್ಷದ್ ಬೇಗಂ ಉಪ ಆಯುಕ್ತರು, ಅಬಕಾರಿ ಇಲಾಖೆ, ದ.ಕ. ಮದ್ಯ ವಹಿವಾಟು ಗುರಿ
ಜಿಲ್ಲೆಯ ಕಳೆದ ವರ್ಷದ ಮದ್ಯ ಮಾರಾಟ(ಐಎಂಎಫ್‌ಎಲ್)ವನ್ನು ಲೆಕ್ಕಾಚಾರ ಹಾಕಿದರೆ, ಪ್ರತಿ ತಿಂಗಳು 2.15 ಲಕ್ಷ ಬಾಕ್ಸ್ ಮಾರಾಟವಾಗುತ್ತಿತ್ತು. 2017ರ ಜುಲೈ ತಿಂಗಳಲ್ಲಿ ಕೋರ್ಟ್ ಆದೇಶದ ಬಳಿಕ ಜಿಲ್ಲೆಗೆ 2.13 ಲಕ್ಷ ಬಾಕ್ಸ್‌ಗಳ ಪರಿಷ್ಕೃತ ಟಾರ್ಗೆಟ್ ನೀಡಲಾಗಿತ್ತು. ಪ್ರಸ್ತುತ ಜು. 27ರ ವರೆಗೆ ತಮಗೆ ನೀಡಿದ ಗುರಿಯಲ್ಲಿ 70 ಶೇ. ಪ್ರಗತಿ ಸಾಧಿಸಲಾಗಿದೆ. ಹೀಗಾಗಿ ಸುಮಾರು 50 ಶೇ. ಮದ್ಯದಂಗಡಿಗಳು ಬಂದ್ ಆದರೂ ಮದ್ಯ ಸೇವನೆ ಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ ಎಂಬುದು ಸ್ಪಷ್ಟ. ಕಿರಣ್ ಸರಪಾಡಿ