ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ್ದ ಸವಾರರು ಇನ್ಮುಂದೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ದಂಡ ಪಾವತಿಸಬಹುದು. 650 ಅತ್ಯಾಧುನಿಕ ಸೌಲಭ್ಯವುಳ್ಳ ಸ್ವೆ„ಪಿಂಗ್ ಯಂತ್ರಗಳನ್ನು ಸಂಚಾರ ಪೊಲೀಸರಿಗೆ ವಿತರಿಸಲಾಗಿದೆ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ವೇಳೆ ಸವಾರರು ಹಣವಿಲ್ಲ. ಕಾರ್ಡ್‌ಗಳಿವೆ ಬೇಕಾದರೆ ಪಡೆಯಿರಿ ಎನ್ನುತ್ತಾರೆ. ಹಾಗಾಗಿಯೇ ದಂಡದ ಮೊತ್ತವನ್ನು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಲು ಈ ಯಂತ್ರಗಳನ್ನು ಉಪಯೋಗಿಸಿಕೊಳ್ಳಬಹುದಾಗಿದೆ. ಈ ಮೂಲಕ ದಂಡ ಕಟ್ಟಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಬರಲಿದೆ.
ಅಲ್ಲದೇ ದಂಡ ಕಟ್ಟುತ್ತೇವೆ ಎಂದು ಹೇಳಿ ವಾಹನ ಪಡೆದುಕೊಂಡು ಹೋಗುವ ಸವಾರರು, ಬಳಿಕ ಪಾವತಿ ಮಾಡುವುದಿಲ್ಲ. ಅದು ಹಾಗೆಯೇ ಉಳಿಯುತ್ತದೆ. ಮತ್ತೂಂದು ಸಂದರ್ಭದಲ್ಲಿ ಅದು ಪತ್ತೆಯಾಗುತ್ತದೆ. ಆಗಲು ಕೆಲವರು ಕಟ್ಟಲು ಹಿಂದೇಟು ಹಾಕುತ್ತಾರೆ.
ಮನೆಗೆ ನೋಟಿಸ್ ಕೊಟ್ಟರೂ ಸ್ಪಂದನೆ ಇಲ್ಲ ಎಂದು ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ. ಇದರೊಂದಿಗೆ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿ ಎಷ್ಟು ಪ್ರಕರಣಗಳನ್ನು ದಾಖಲಿಸಿದ್ದಾರೆ. ಎಷ್ಟು ದಂಡದ ಮೊತ್ತ ಸಂಗ್ರಹಿಸಿದ್ದಾರೆ ಎಂಬ ಲೆಕ್ಕ ಸುಲಭವಾಗಿ ಸಿಗುತ್ತದೆ.
ಇದರಿಂದ ಇಲಾಖೆಯ ಖಾತೆಗೂ ನೇರವಾಗಿ ಹಣ ಜಮೆಯಾಗುತ್ತದೆ. ಅಷ್ಟು ಮಾತ್ರವಲ್ಲ ಈ ಯಂತ್ರದಲ್ಲಿ ಆರ್‌ಟಿಓ ಮಾಹಿತಿ ಕೂಡ ಲಭ್ಯವಿದ್ದು, ರಾಜ್ಯದ ಯಾವುದೇ ಜಿಲ್ಲೆಯಲ್ಲಿ ವಾಹನ ಸವಾರ ನಿಯಮ ಉಲ್ಲಂಘಿಸಿದರೂ ಈ ಯಂತ್ರದಲ್ಲಿ, ಈ ವಾಹನ ಸಂಖ್ಯೆ ದಾಖಲಿಸುತ್ತಿದ್ದಂತೆ ಯಂತ್ರದ ಸ್ಕ್ರೀನ್ ಮೇಲೆ ಬರುತ್ತದೆ. ಇದು ವಾಹನ ಸವಾರರ ವಿರುದ್ಧ ಕ್ರಮಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ವಿವರಿಸಿದರು.