Advertisement

ರಸ್ತೆ ಅಗೆಯಲು ಬೇಕು ಅನುಮತಿ; ತತ್‌ಕ್ಷಣವೇ ಮಾಡಬೇಕು ದುರಸ್ತಿ!

02:28 PM Oct 22, 2017 | Team Udayavani |

ಮಹಾನಗರ: ನಗರದ ಪ್ರಮುಖ ಹಾಗೂ ಒಳರಸ್ತೆಗಳಲ್ಲಿ ಕೆಲವು ಕಾಂಕ್ರೀಟಿಕರಣಗೊಂಡಿವೆ. ಕೆಲವು ರಸ್ತೆಗಳ ಕಾಮಗಾರಿಗೆ ಶಿಲಾನ್ಯಾಸ ಆಗಿದೆ. ಇನ್ನು ಕೆಲವು ಪ್ರಸ್ತಾವನೆಗಳು ಸಿದ್ಧಗೊಂಡಿವೆ. ಪೂರಕ ವ್ಯವಸ್ಥೆಗಳೊಂದಿಗೆ ಅನುಷ್ಠಾನಗೊಂಡು ಹೊಸ ಕಾಮಗಾರಿ ನಿರ್ವಹಿಸಿದಲ್ಲಿ ವ್ಯವಸ್ಥಿತ ರಸ್ತೆಗಳು ರೂಪುಗೊಳ್ಳುತ್ತವೆ.

Advertisement

ನಗರದ ಹಲವು ರಸ್ತೆಗಳ ಕಾಮಗಾರಿಯಲ್ಲಿ ವ್ಯವಸ್ಥಿತ ಕಾರ್ಯ ಯೋಜನೆಗಳಿಲ್ಲದೆ, ಸರಕಾರದ ಅನುದಾನ ವಿನಿಯೋಗಿಸುವ ಧಾವಂತದಲ್ಲಿ ಕಾಂಕ್ರೀಟಿಕರಣ ಮಾಡಿದ್ದು ಕಂಡು ಬರುತ್ತಿದೆ. ಇದರ ಪರಿಣಾಮ ಈಗ ಗೋಚರಿಸತೊಡಗಿದೆ. ಕಾಂಕ್ರೀಟ್‌ ಹಾಕಿರುವ ರಸ್ತೆಗಳನ್ನು ಅಲ್ಲಲ್ಲಿ ತುಂಡರಿಸಲಾಗಿದೆ. ಕಾಂಕ್ರೀಟ್‌ ಹಾಕುವಾಗ ಯುಟಿಲಿಟಿ ಕಾಮಗಾರಿಗಳನ್ನು ಕಡೆಗಣಿಸಲಾಗಿದೆ. ನೀರು ಸರಬರಾಜು ಕೊಳವೆಗಳು, ದೂರವಾಣಿ ಕಂಬ-ತಂತಿಗಳು, ಒಳ ಚರಂಡಿ ಮುಂತಾದವುಗಳ ರಸ್ತೆ ಮಧ್ಯದಲ್ಲೇ ಉಳಿಸಿಕೊಂಡು ಕಾಮಗಾರಿ ನಡೆಸಲಾಗಿದೆ. ಇವುಗಳಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಅಲ್ಲಿಯೇ ರಸ್ತೆಯನ್ನು ಕಿತ್ತು ಸರಿಪಡಿಸಬೇಕಾಗಿದೆ. ಇದು ಹೀಗೆಯೇ ಮುಂದುವರಿದರೆ ಮುಂದೆ ಕಾಂಕ್ರೀಟ್‌ ಮಾಯವಾಗಿ ತೇಪೆ ರಸ್ತೆಯಾಗಿ ಮಾರ್ಪಡುವ ಸಾಧ್ಯತೆಯಿದೆ. ವ್ಯವಸ್ಥಿತವಾಗಿ ಯೋಜನೆಯನ್ನು ಕಾರ್ಯಗತಗೊಳಿಸಿದರೆ ಇಂತಹ ಸಮಸ್ಯೆಗಳನ್ನು ಕನಿಷ್ಠ ಮಟ್ಟಕ್ಕಿಳಿಸಬಹುದು. ಬೆಂಗಳೂರು ಸಹಿತ ಹಲವು ನಗರಗಳಲ್ಲಿ ಆಧುನಿಕ ಮಾದರಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಮಂಗಳೂರಿನಲ್ಲೂ ಈ ಪ್ರಯತ್ನ ನಡೆಯಬೇಕಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ಟೆಂಡರ್‌ಶ್ಯೂರ್‌ ಹಾಗೂ ಆನ್‌ಲೈನ್‌ ಅಪ್‌ಡೇಟ್‌ ವ್ಯವಸ್ಥೆ ರೂಪಿಸಿಕೊಂಡಿದೆ. ಮುಖ್ಯಮಂತ್ರಿಯವರ ನಗರೋತ್ಥಾನದ 700 ಕೋಟಿ ರೂ. ಅನುದಾನದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಟೆಂಡರ್‌ಶ್ಯೂರ್‌ ಯೋಜನೆ ಅಡಿ 50 ರಸ್ತೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪೂರ್ಣಗೊಳಿಸಿರುವ ಸಿಬಿಡಿ- ಹಂತ 1 ಮತ್ತು 2ರ ನೃಪತುಂಗ ರಸ್ತೆ ಮೇ 16ರಂದು ಲೋಕಾರ್ಪಣೆಗೊಂಡಿದೆ. ವೇಗವಾಗಿ ಬೆಳೆಯುತ್ತಿರುವ ಮಂಗಳೂರು ನಗರವೂ ಇದೇ ಮಾದರಿಯನ್ನು ನಿರೀಕ್ಷಿಸುತ್ತಿದೆ. 

ಅಗೆದವರೇ ಸರಿಪಡಿಸಬೇಕು
ಕಾಮಗಾರಿ ಮುಗಿದ ಮೇಲೆ ಒಂದೊಮ್ಮೆ ಕೇಬಲ್‌, ಕೊಳವೆ, ಒಎಫ್‌ಸಿ ಮುಂತಾದ ಜಾಲಗಳನ್ನು ಅಳವಡಿಸಲು ರಸ್ತೆಗಳನ್ನು ಅಗೆಯುವುದು ಅನಿವಾರ್ಯವಾದರೆ, ಅವರೇ ಸರಿಪಡಿಸಬೇಕು. ಅಗೆದವರು ಹಾಗೂ ಅನುಮತಿ ನೀಡಿದವರನ್ನೇ ಇದಕ್ಕೆ ಉತ್ತರದಾಯಿಗಳನ್ನಾಗಿ ಮಾಡಲು ಆನ್‌ ಲೈನ್‌ ಅಪ್‌ಡೇಟ್‌ ವ್ಯವಸ್ಥೆ ಸಿದ್ಧಗೊಂಡಿದೆ. ಇದೂ ಬೆಂಗಳೂರಿನಲ್ಲಿ ಆಗಲೇ ಅನುಷ್ಠಾನಕ್ಕೆ ಬಂದಿದೆ. ಕಾಮಗಾರಿ ಕೈಗೊಳ್ಳುವ ಸಂಸ್ಥೆಗಳು ಪಾಲಿಕೆಗೆ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ರಸ್ತೆ ಅಗೆಯುವ ಉದ್ದೇಶ, ಸ್ಥಳ ಹಾಗೂ ಅಳತೆ ಬಗ್ಗೆ ಮಾಹಿತಿ ನೀಡಿ, ಗೂಗಲ್‌ ಮ್ಯಾಪಿಂಗ್‌ನಲ್ಲಿ ಸ್ಥಳ ಪಿನ್‌ ಮಾಡಿರಬೇಕು. ರಸ್ತೆ ಅಗೆತಕ್ಕೆ ಬಂದ ಅರ್ಜಿಗಳನ್ನು ವಾರ್ಡ್‌ನ ಸಹಾಯಕ ಎಂಜಿನಿಯರ್‌ಗೆ ರವಾನಿಸಲಾಗುತ್ತದೆ. ಅವರು ಸ್ಥಳ ಪರಿಶೀಲಿಸಿ, ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳಿಗೆ ವರದಿ ರವಾನಿಸುತ್ತಾರೆ. ಸ್ಥಳೀಯ ಸಹಾಯಕ ಎಂಜಿನಿಯರ್‌ ಹಾಗೂ ಹಿರಿಯ ಅಧಿಕಾರಿಗಳು ಒಪ್ಪಿಗೆ ನೀಡಿದರೆ ಸ್ವಯಂಚಾಲಿತವಾಗಿ
ಡಿಮಾಂಡ್‌ ನೋಟಿಸ್‌ ಸೃಷ್ಟಿಯಾಗಲಿದೆ. ನಿಗದಿತ ಶುಲ್ಕ ಪಾವತಿಸಿದ ಬಳಿಕ ಅನುಮತಿ ದೊರೆಯಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ಅಧಿಕಾರಿಗಳು ಪ್ರಮಾಣಪತ್ರ ನೀಡುತ್ತಾರೆ. ಅಗೆದ ರಸ್ತೆಯನ್ನು ಸಮರ್ಪಕವಾಗಿ ದುರಸ್ತಿ ಪಡಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರಗಿಸಲಾಗುತ್ತದೆ. 

ನಗರದಲ್ಲಿ ಕೇಬಲ್‌, ಕುಡಿಯುವ ನೀರಿನ ಪೈಪ್‌, ಕೊಳವೆ, ಒಎಫ್‌ಸಿ ಅಳವಡಿಸಲು ರಸ್ತೆ ಆಗೆಯುವುದು ಸಾಮಾನ್ಯ ಎಂಬಂತಾಗಿದೆ. ಇವು ಕೆಲವು ಬಾರಿ ಅಧಿಕೃತವಾಗಿ ಮತ್ತು ಹಲವು ಬಾರಿ ಅನಧಿಕೃತವಾಗಿ ನಡೆಯುತ್ತವೆ. ಕೆಲಸ ಮುಗಿದ ಬಳಿಕ ರಸ್ತೆಯ ಬಗ್ಗೆ ಯಾರೂ ಕೇಳುವವರಿಲ್ಲ. ಅಧಿಕೃತವಾಗಿ ಅನುಮತಿ ಪಡೆದು ಅಗೆದಿದ್ದರೆ ಅದಕ್ಕೆ ಸ್ಥಳೀಯಾಡಳಿತ ಸಂಸ್ಥೆಗೆ ಮೊದಲೇ ಹಣ ಪಾವತಿಯಾಗಿರುತ್ತದೆ. ಆದರೆ ಕೆಲಸ ಮುಗಿದ ಬಳಿಕ ಸ್ಥಳೀಯಾಡಳಿತ ಸಂಸ್ಥೆ ಇದನ್ನು ದುರಸ್ತಿ ಮಾಡುವ ಗೋಜಿಗೆ ಹೋಗುವುದೇ ಇಲ್ಲ. ಇಂತಹ ವ್ಯವಸ್ಥೆಯನ್ನು ಮಂಗಳೂರಿನಲ್ಲೂ ಜಾರಿಗೆ ತಂದರೆ ಬೇಕಾಬಿಟ್ಟಿ ಅಗೆತಕ್ಕೆ ಬ್ರೇಕ್‌ ಬಿದ್ದು, ರಸ್ತೆಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದು ಸಾಧ್ಯವಾದೀತು

Advertisement

ವ್ಯವಸ್ಥಿತ ಕಾಮಗಾರಿ
ಹೊಸದಾಗಿ ಅನುಷ್ಠಾನಗೊಳ್ಳುವ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಕೈಗೊಳ್ಳಲಾಗುತ್ತಿದೆ. ಚರಂಡಿ, ಪುಟ್‌ಪಾತ್‌ ಕಾಮಗಾರಿಗಳನ್ನು ಜತೆಗೆ ಮಾಡಲಾಗುವುದು. ರಸ್ತೆ ಮಾರ್ಗದಲ್ಲಿ ಯುಟಿಲಿಟಿ ಸೇವೆಗಳು ಅಳವಡಿಕೆಯಾಗಿದ್ದರೆ ಅವುಗಳನ್ನು ಪಕ್ಕಕ್ಕೆ ಸಾಧ್ಯವಾದಷ್ಟು ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿದೆ. 
ಕವಿತಾ ಸನಿಲ್‌, ಮೇಯರ್‌,
ಮಂಗಳೂರು ಮಹನಗರಪಾಲಿಕೆ

ಕಾಮಗಾರಿಯ ಜತೆಯಲ್ಲೆ ವ್ಯವಸ್ಥೆ 
ನಗರದ ರಸ್ತೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಯೋಜನೆ ರೂಪಿಸಿ, ಪರಿಕಲ್ಪಿತ ರೂಪದಲ್ಲಿ ಸುಂದರವಾಗಿ ನಿರ್ಮಿಸುವುದು ಟೆಂಡರ್‌ ಶ್ಯೂರ್‌ನ ಮುಖ್ಯ ಉದ್ದೇಶ. ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಗರದ ರಸ್ತೆಗಳನ್ನು ವಿಹಂಗಮವಾಗಿ ರೂಪಿಸುವುದೂ ಸೇರಿದೆ. ನಾಗರಿಕ ಏಜೆನ್ಸಿಗಳ ನಡುವೆ ಸಮನ್ವಯದ ಕೊರತೆಯಿಂದ ಒಂದೇ ರಸ್ತೆಯಲ್ಲಿ ಮನಬಂದಂತೆ ಅಗೆದು ಹಾಳು ಮಾಡುವುದನ್ನು ತಪ್ಪಿಸಲು ಇದು ಉಪಕ್ರಮವಾಗಲಿದೆ. ರಸ್ತೆಗಳು, ಪಾದಚಾರಿ ಮಾರ್ಗಗಳು, ಯುಟಿಲಿಟಿ ಡಕ್‌ಗಳು, ಬಸ್‌ ಬೇ ಮತ್ತು ರಸ್ತೆಬದಿಯ ವ್ಯಾಪಾರದ ಸ್ಥಳಗಳು ಎಲ್ಲವೂ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿರುವಂತೆ ಮಾಡುವುದೇ ಇದರ ನೀತಿ. ಹಲವು ರಾಜ್ಯಗಳು ಇದಕ್ಕೆ ಮಾರುಹೋಗಿ, ಅನುಷ್ಠಾನ ಆರಂಭಿಸಿವೆ.

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next