Advertisement

ದಕ್ಷ ಆಡಳಿತ ನಡೆಸಲು ಬಿಜೆಪಿಗೆ ಅವಕಾಶ ಕೊಡಿ

12:15 PM Feb 20, 2018 | |

ಮೈಸೂರು: ಮುಂಬರುವ ಚುನಾವಣೆಯಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಗೆದ್ದು, ಸ್ವತ್ಛ, ದಕ್ಷ ಆಡಳಿತ ನೀಡಲು ಅವಕಾಶ ಕೊಡಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿಯ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

Advertisement

ರಾಜ್ಯದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯವಹಿಸಿ, ಲೂಟಿ ಹೊಡೆಯುತ್ತಿರುವ ಈ ಸರ್ಕಾರದಿಂದ ಜನತೆ ಬೇಸತ್ತಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮರಳು ಮಾಫಿಯಾಗೆ ಸರ್ಕಾರವೇ ಮಾರಿಕೊಂಡಿದೆ. ಇದೊಂದು ಅನಾಗರಿಕ ಸರ್ಕಾರ ಎಂದು ಹೈಕೋರ್ಟ್‌ ಛೀಮಾರಿ ಹಾಕಿದೆ ಎಂದು ಟೀಕಿಸಿದರು.

ಲೋಕಾ ಬಲಹೀನ ಮಾಡಿದರು: ಲೋಕಾಯುಕ್ತವನ್ನು ಬಲಹೀನಗೊಳಿಸಿ, ಎಸಿಬಿ ರಚನೆ ಮಾಡುವ ಮೂಲಕ ಭ್ರಷ್ಟಾಚಾರವನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ. ಲೋಕಾಯುಕ್ತ ಪ್ರಬಲವಾಗಿದ್ದರೆ ಎಷ್ಟೋ ಜನ ಮಂತ್ರಿಗಳು ಜೈಲಿಗೆ ಹೋಗುತ್ತಿದ್ದರು ಎಂದು ಹೇಳಿದರು.

ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ, ದೇಶದ 6ನೇ ಶ್ರೀಮಂತ ಮುಖ್ಯಮಂತ್ರಿ, 70ಲಕ್ಷ ರೂಪಾಯಿಯ ವಾಚ್‌ ಕಟ್ಟುತ್ತಾರೆ. ಚುನಾವಣೆ ಹೊಸ್ತಿಲಲ್ಲಿ ಬಜೆಟ್‌ ಮಂಡಿಸಿ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಜರಿದರು.

ಹದಗೆಟ್ಟ ಕಾನೂನು ವ್ಯವಸ್ಥೆ: ಈ ಸರ್ಕಾರದ ಅವಧಿಯಲ್ಲಿ ರಾಜ್ಯದ 3500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 20ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಶಾಸಕನ ಪುತ್ರನೇ ಮಾರಾಣಾಂತಿಕ ಹಲ್ಲೆ ನಡೆಸುವ ಮಟ್ಟಕ್ಕೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದರು. ಚುನಾವಣಾ ಹಿಂದೂ ರಾಹುಲ್‌ ಗಾಂಧಿ ಅವರ ಅಪ್ರಬುದ್ಧ ಹೇಳಿಕೆಯ ತಾಳಕ್ಕೆ ತಕ್ಕಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕುಣಿಯುತ್ತಿದ್ದಾರೆ ಎಂದು ಯಡಿಯೂರಪ್ಪ ದೂರಿದರು.

Advertisement

ಭ್ರಷ್ಟರನ್ನೇ ಪಕ್ಷಕ್ಕೆ ಸೇರಿಸಿಕೊಂಡರು: ಸಂಸದ ಬಿ.ಶ್ರೀರಾಮುಲು ಮಾತನಾಡಿ, ಕಳೆದ ನಾಲ್ಕೂವರೆ ವರ್ಷಗಳಿಂದ ನಿದ್ದೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಕ್ಕೆ ನರೇಂದ್ರಮೋದಿ ಅವರು ಬಂದ ಮೇಲೆ ಎಚ್ಚರವಾಗಿ ನಿದ್ದೆ ಬರುತ್ತಿಲ್ಲ. ಎದೆಯಲ್ಲಿ ಢವ ಢವ ಶುರುವಾಗಿದೆ. ಬಳ್ಳಾರಿಗೆ ಪಾದಯಾತ್ರೆಯಲ್ಲಿ ಬಂದು ಆನಂದ್‌ ಸಿಂಗ್‌, ನಾಗೇಂದ್ರ ರನ್ನು ಭ್ರಷ್ಟರು, ಜೈಲಿಗೆ ಹೋಗಿ ಬಂದವರು ಎಂದು ಟೀಕಿಸಿದ್ದ ಸಿದ್ದರಾಮಯ್ಯ, ಇವತ್ತು ಅವರಿಬ್ಬರನ್ನೂ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಜರಿದರು.

ಕಾಂಗ್ರೆಸ್‌ ಗೂಂಡಾಗಿರಿ: ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ ಮಾತನಾಡಿ. ಗೂಂಡಾಗಿರಿ ಅಂದರೆ ಕಾಂಗ್ರೆಸ್‌, ಕಾಂಗ್ರೆಸ್‌ ಅಂದರೆ ಗೂಂಡಾಗಿರಿ. ಶಾಸಕನ ಮಗನೇ ಜನಸಾಮಾನ್ಯನ ಮೇಲೆ ಹಲ್ಲೆ ಮಾಡಿದ್ದಾನೆ. ಇಷ್ಟು ದಿನ ಕಾಂಗ್ರೆಸ್‌ನವರು ಹಿಂದೂ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರನ್ನು ಕೊಲ್ಲುತ್ತಿದ್ದರು, ಈಗ ಜನಸಾಮಾನ್ಯರನ್ನೂ ಗುರಿಯಾಗಿಸಿಕೊಂಡಿದ್ದಾರೆ. ಹಲ್ಲೆ ಮಾಡಿದ ಅಪರಾಧಿ ಬೆಂಬಲಿಗರೊಂದಿಗೆ ಪೊಲೀಸ್‌ ಠಾಣೆಗೆ ಬರುತ್ತಾನೆ, ಇದು ಕಾಂಗ್ರೆಸ್‌ ಸಂಸ್ಕೃತಿ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ಕಾನೂನು -ಸುವ್ಯವಸ್ಥೆ ಹದಗೆಟ್ಟು ಗೂಂಡಾ ರಾಜ್ಯ ಆಗಿದೆ ಎಂದು ದೂರಿದರು.

ಯೋಜನೆ ನೀಡಿದ ಪ್ರಧಾನಿ: ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮದುವೆ, ಮುಂಜಿ, ಬೀಗರ ಊಟಕ್ಕೆ ವಾರಕ್ಕೊಮ್ಮೆ ಮೈಸೂರಿಗೆ ಬರುತ್ತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈಸೂರಿನ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ, ಇದಕ್ಕಾಗಿ ಸಾವಿರಾರು ಕೋಟಿ ರೂ.ಗಳ ಯೋಜನೆಗಳನ್ನು ಹೊತ್ತು ತಂದಿದ್ದಾರೆ ಎಂದರು.

ನಾಲ್ಕು ವರ್ಷಗಳ ಹಿಂದೆ ಮೋದಿ ಅವರ ಜತೆಗೆ ಇದೇ ಮೈದಾನದಲ್ಲಿ ವೇದಿಕೆ ಹಂಚಿಕೊಂಡಾಗ ನಾನು ಚುನಾವಣಾ ಅಭ್ಯರ್ಥಿ. ಇವತ್ತು ಸಂಸದನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಇದು ಮೋದಿ ಅವರು ಕೊಟ್ಟಂತಾ ದಯಾಭಿಕ್ಷೆ.
-ಪ್ರತಾಪ್‌ ಸಿಂಹ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next